Friday, 15 May 2015

ನಿನ್ನ ಕುರಿತು ಕವಿತೆ... ...

ನಿನ್ನ ಕುರಿತು ಕವಿತೆ ಬರೆಯಲು ಕುಳಿತು 
ಹಲವು ಹಗಲು ರಾತ್ರಿ ಕಳೆದಿವೆ 
ಬರೆದ ಭಾವ ಭರಿತ ಪ್ರತಿ ಸಾಲುಗಳ 
ಕಣ್ಣೀರ ಹನಿ ಮರುಕ್ಷಣದಿ ಅಳಿಸುತಿದೆ. 

ಯಾವ ನದಿಯ ತೀರದಿ ಕುಳಿತರೂ 
ಮರಳ ಮೇಲಿನ ಹೆಸರಿಲ್ಲದ ಹೆಜ್ಜೆ ಗುರುತು 
ವಿದಾಯ ಸಾಲಿಗೊಂದು ರಾಗ ಕಟ್ಟಿ 
ಹೃದಯ ಗೀತೆಯಲ್ಲಿ ಕಂಬನಿ ಮೂಡಿಸಿದೆ. 


ಬೆಳ್ಳಿ ನಗುವಿನೊಡೆಯ ಶಶಿಗೆ ಶರಣಾದರೂ 
ಬರೆದ ಬರವಣಿಗೆ ಎದೆಗೆ ಹಿತವಾಗಿ 
ಬೆರಳು ಮಸಿಯಾಗಿ ಬಿಳಿ ಹಾಳೆ ಕಪ್ಪಾಗಿ 
ವಿರಹದ ಮಾತುಗಳು ಕಣ್ಣಂಚಿನ ಮುತ್ತಾಗಿವೆ .

ಗೆಜ್ಜೆ ಸದ್ದಿನ ಹಾದಿಯಲ್ಲೇ ಹೆಜ್ಜೆ ಇಟ್ಟು 
ಅಡಿಗಡಿಗೆ ಪ್ರೇಮಾಕ್ಷರದ ಹಣತೆ ಹಚ್ಚಿದಾಗ 
ಬರೀ ಬತ್ತಿ ಉರಿದುರಿದ ನೆನಪಾಗಿ 
ಕನಸುಗಣ್ಣ ಬಟ್ಟಲು ತೊಯ್ದ ತೊಟ್ಟಿಲಾಗಿದೆ .

ನಿನ್ನ ಕುರಿತು ಕವಿತೆ ಬರೆಯಲು ಕುಳಿತು 
ಹಲವು ಹಗಲು ರಾತ್ರಿ ಕಳೆದಿವೆ 
ಬರೆದ ಭಾವ ಭರಿತ ಪ್ರತಿ ಸಾಲುಗಳ 
ಕಣ್ಣೀರ ಹನಿ ಮರುಕ್ಷಣದಿ ಅಳಿಸುತಿದೆ.


ಚಿತ್ರ ಕೃಪೆ : ಗೂಗಲ್ ಇಮೇಜಸ್ 

Thursday, 9 October 2014

ಪದ ಮೂಡುವ ಮುನ್ನ ...

ಬರೆಯಲು ಕುಳಿತಾಗಲೆಲ್ಲ 
ಪದ ಮೂಡುವ ಮುಂಚೆ 
ಮುಚ್ಚಿದ್ದ ಕದವ ತಟ್ಟಿದ್ದು 
ನೆನಪಾಗುವುದು .

ನೋವು ನಲಿವಾದರೆ ಚೆನ್ನ 
ನಲಿವಿಗಾಗಿ ನೋವ ಹುಡುಕುವುದು 
ತಪ್ಪಾಗುವುದು .


ಖಾಲಿ ಹಾಳೆಯ ಮೇಲೇನಿಲ್ಲಾ 
ಆದರೇನು ಮಾಡಲಿ ಬರೆದರದು 
ತುಂಬುವುದು .

ಮುಗ್ದ ಮನಸ್ಸು ಪ್ರಸವಿಸಿ 
ತೊದಲು ರಾತ್ರಿ - ಮತ್ತೆ ಬಸುರಿ 
ಬಯಕೆಯಾಗುವುದು.

                      ಚಿತ್ರ ಕೃಪೆ : ಗೂಗಲ್ ಇಮೇಜಸ್ 

Monday, 6 October 2014

ನಯನಾಯುಧ

ಆಯುಧವನೆಲ್ಲಾ 
ಪೂಜೆಗಿಟ್ಟಿದ್ದೇನೆ 
ಭಯವಿಲ್ಲ ಬನ್ನಿ 
ಎಂದೆ .....
ನಂಬಿ ಬಂದ ನನ್ನ 
ಕ್ಷಣ ಮಾತ್ರದಲಿ 

..................
..................
..................

ನಿನ್ನ ನಯನದಿಂದ
ಕೊಂದೆ ........!!                    ಚಿತ್ರ ಕೃಪೆ : ಗೂಗಲ್ ಇಮೇಜಸ್ 

Thursday, 11 September 2014

ಹುಸಿ ಬೆಸುಗೆ

ಮಳೆಯೇ .. ಮತ್ತೇಕೆ ಮರಳಿದೆ 
ಇಂದು ಸಂಜೆ ಬರುವ ಸುಳಿವ 
ನೀಡಲು ಮತ್ತದೇ ..ನೆನ್ನೆಯ ಕನಸಿಗೆ 

ನೀ..ಇಂದೂ ಹಸಿ ಮಣ್ಣ ವಾಸನೆ 
ಮರಳುಮರುಳುಮರೀಚಿಕೆ ವರ್ಣನೆ
ತಾವರೆಯಂದ ಅರಳು ಮುಂಜಾನೆಗೆ
ಇರುಳ ಅನುಕ್ಷಣದಲಿ ಉಷೆಯ ನಿರೀಕ್ಷೆಗೆ
ಹೊಸ ಉಸಿರಿನ ಜೊತೆಗೊಂದು ಬೆಸುಗೆ.

 
ನಾ..,
ಭಗ್ನ ಪ್ರೀತಿಯ ಬೇಗೆ  
ಬಿಟ್ಟು ಬಿಡು ಉರಿಯಲಿ ಹಾಗೇ ...
ಯಾರೂ "ಇರದ - ಬರದ" ಕಾಡಿನಲಿ
ಸಿಡಿದುರಿದು ನೊಂದು ಬೆಂದು ಬೇಯ್ದ
ಕಾಡ್ಗಿಚ್ಚಿನೊಡಲ ಸೌದೆಯಂತೆ.

ಮಳೆಯೇ .. ಮತ್ತೇಕೆ ಮರಳಿದೆ
 
ಇಂದು ಸಂಜೆ ಬರುವ ಸುಳಿವ 
ನೀಡಲು ಮತ್ತದೇ ..ನೆನ್ನೆಯ ಕನಸಿಗೆ.


                                             ಚಿತ್ರ ಕೃಪೆ : ಗೂಗಲ್ ಇಮೇಜಸ್ 

Thursday, 28 August 2014

ನಿನ್ನೊಳು ...ನಾ

ನಿನ್ನ ಓದಲೆಂದು ಬಂದು 
ನನ್ನನ್ನೇ ತೆರೆದ ಪುಸ್ತಕವಾಗಿಸಿ 
ನಿನ್ನೆದಿರು ನಿಂತಿದ್ದೇನೆ.

ನಿನ್ನಳೆಯಲು ನಿಂತ್ತವನು 
ಅಲೆದಲೆದು ಅಂತರಾಳದಲ್ಲೇ 
ಹುದುಗಿ ಹೋಗಿದ್ದೇನೆ.


ನಿನ್ನ ಮುಗ್ಧ ಮಂದಹಾಸಕ್ಕೆ 
ಮುನ್ನುಡಿ ಬರೆಯುವಂತ್ತಾಗಿ 
ಕಾಗುಣಿತ ಕಲಿಯುತಿದ್ದೇನೆ.


ನಿನ್ನ ನಯನಕ್ಕೆ ಕಾಡಿಗೆಯ 
ಬೇಲಿ ಕಟ್ಟುವ ಬಯಕೆ ಬಂದು
ಮಾಲಿಯೇ ಆಗಿದ್ದೇನೆ. 

ನಿನ್ನ ಪುಟ್ಟ ಪಾದಕೊಂದು 
ಮೆತ್ತೆ ಹಾಸಲು ಬಯಸಿ 
ಹೊನಲಿಗಲೆಯುತ್ತಿದ್ದೇನೆ.

ನಿನ್ನ ಬಿಡದೇ ಕಾಡುವ ನಿನ್ನದೇ 
ನೆರಳ ಓಡಿಸಲು ಹಿಂಬಾಲಿಸಿ 
ಇರುಳ ಪ್ರೇಮಿಯಾಗಿದ್ದೇನೆ .
                            ಚಿತ್ರ ಕೃಪೆ : ಗೂಗಲ್ ಇಮೇಜಸ್ 

Sunday, 3 August 2014

ಸ್ನೇಹ ಸಂಭ್ರಮ

ಏನಿದು ಗೆಳೆಯಾ .......ತಿ 
ನಮ್ಮಿಬ್ಬರ ಸ್ನೇಹ ಸಂಭ್ರಮಕ್ಕೊಂದು
ದಿನಾಚರಣೆಯಂತ್ತೆ !!!
ನೆನ್ನೆ? -ಮೊನ್ನೆ?-ಆಚೆ ಮೊನ್ನೆ? 
ಅದರಾಚೆಗಿನ ಹುಣ್ಣಿಮೆ?
ನಿನಗೆ ನೆನಪಿದೆಯಾ ನಮ್ಮ 
ಸ್ನೇಹ ಸಂವತ್ಸರದ ಆರಂಬ 
ಅಂತ್ಯದ ಭಯವಿದಿದ್ದರೆ 
ಆದಿಗೊಂದು ಅಡಿಗಲ್ಲು 
ನೆಡ ಬಹುದಿತ್ತು !!!
ಬಣ್ಣ ಬಣ್ಣದ ಚಿತ್ತಾರದ ದಾರ 
ಕೈ ಕಟ್ಟುವ ಮೊದಲೇ 
ನಾವು ಕಿತ್ತಾಡಿದ್ದೇವೆ-ಮತ್ತೆ 
ಸ್ನೇಹದ ಗೂಡು ಕಟ್ಟಿದ್ದೇವೆ.

ಏನಿದು ಗೆಳೆಯಾ .......ತಿ
 
ನಮ್ಮಿಬ್ಬರ ಸ್ನೇಹ ಸಂಭ್ರಮಕ್ಕೊಂದು
ದಿನಾಚರಣೆಯಂತ್ತೆ !!!
ನೀ ಮುನಿದು ಮರಳಿ ಮುಗುಳ್ನಗುವುದು 
ಇಲ್ಲಿ ಮುಳುಗಿ ಮತ್ತೆಲ್ಲೋ ಹುಟ್ಟುವ 
ಸಾವಿಲ್ಲದ ಸೂರ್ಯನಂತ್ತೆ ......ಅಲ್ಲವೇ.