Saturday 25 May 2013

ಹೊತ್ತು ಮೀರಿದ ಮೇಲೆ.....


ಹೊತ್ತು ಮೀರಿದ ಮೇಲೆ
ಹಚ್ಚಲು ದೀವಿಗೆ
ಹುಡುಕಾಡಿ ದೀವಟಿಗೆ
ಬವಳಿ ಬಿದ್ದಿದೆ ಮನಸ್ಸು



ಬಳುವಳಿಯಾಗಿ ಬಂದದ್ದು
ಕಳವಳದಿ ಕಂಡದ್ದು
ಕನವರಿಸುವ ಮುನ್ನವೇ
ಕರಗಿ ಹೋದದ್ದು..ಕಂಡು
ಅವಳಿ ಚಿತೆಯೇರಿದೆ ಕನಸು



ಭ್ರಮೆಯ ನಂಬಿಕೆಗೂ 
ಭರವಸೆಯ ಹೆಜ್ಜೆಗಳು
ಮಾಗಿಯ ಕನಸಿಗೂ
ನನಸಾಗುವ ನೀರೀಕ್ಷೆಗಳು
ಹುಚ್ಚು ಮನಸ್ಸಿನ ನಿತ್ಯ ಜೀವನದಿ
ಕಚಗುಳಿಯಿಡುವ ಕೈಗಳು
   

                                                              ಚಿತ್ರ ಕೃಪೆ: ಗೂಗಲ್ ಇಮೇಜಸ್ 

ಒಡಲು ..ಮಡಿಲು


ಎಲ್ಲಿ ಹೋದೆ ನನ್ನ ಇಲ್ಲಿಯೇ ನಿಲ್ಲಿಸಿ
ದಾರಿ ಹೋಕರ ಕಣ್ಣಿಗೆ ಸೋಜಿಗವಾಗಿಸಿ!
ನಿನ್ನ ಒಡಲ ಬಸಿರ  
ನನ್ನ ಮಡಿಲಲ್ಲಿ ಮಗುವಾಗಿಸಿ!!


ದೂರ ತೀರದ ಪಯಣಕ್ಕೆ
ಹುಟ್ಟು ಹಾಕುವ ಮನಸ್ಸು ನನ್ನಲ್ಲಿದೆ!
ತೀರ ತಲುಪಿ ತೀರಿದ
ನೆಮ್ಮದಿ ನಿನ್ನಲ್ಲಿದೆ!!


ಹೊಸ  ಮನೆಯಂಗಳದಿ ಜಾರಿದೆ ಮನಸು
ಕಟ್ಟಿಟ್ಟ ಕಡತಗಳಿಂದ  ನೂರಾರು ಕನಸು!
ಭ್ರಮೆಯ ಹೊನಲಿಗೆ ವಾಸ್ತವದ ಹೊಲಿಗೆ
ನೆನ್ನೆಯ ಕನವರಿಕೆ ಬರುವ ನಾಳೆಗೆ!!
   

ಗೆಲ್ಲುವುದಾದರೆ ನೀನು
ನೆನ್ನೆಯ ಕನಸು ನಿಜವಾಯ್ತು !
ಸೋಲುವುದಾದರೆ ನಾನು
ನಾಳೆಯ ನನಸು ಸುಳ್ಳಾಯ್ತು!!

                                                            ಚಿತ್ರ ಕೃಪೆ : ಗೂಗಲ್ ಇಮೇಜಸ್  

Thursday 23 May 2013

ಮದುವೆ - ವಿಧವೆ


ಹುಡುಗಿಯೊಬ್ಬಳು..,

ಮದುವೆಗೆ ಮುಂಚೆಯೇ ವಿಧವೆಯಾಗಿ
ಮತ್ತೆ ಮದುವೆಯಾದಳಂತೆ !!

ಏಳೂರು ಸುತ್ತಾಡಿ ತಲೆಮಾರು ಹುಡುಕಾಡಿ

ಬಸವಳಿದು ಹುಸ್ಸೆಂದ ಹುಡುಗಿಯ ತಂದೆ
ಫಲ ಸಿಗದು ಛಲ ಬಿಡೆನು ಅಂದ
ಅದು ದಲ್ಲಾಳಿಯ ದಂಧೆ!!

ಮಾಂಗಲ್ಯ ತಂತು ಅವ್ನೇನಾ..ನೀನೇನಾ
ಅಕ್ಕನ ಬಿಟ್ಟು ತಂಗಿ ಮದುವೆ ಮಾಡೋಣ
ಮುಷ್ಠಿ ಬಿಗಿ ಹಿಡಿದು ಮನಸ್ಸು ಗಟ್ಟಿಯಾಗುವುದರಲ್ಲಿ
ಕಂಕಣ ಭಾಗ್ಯ ...ಕೂಡಿ ಬಂತು !!



ವರ ಚಂದಿರನೇ ವದನದಲ್ಲಿ ಹಳ್ಳಗಳು

ಚಿಂತೆ ಬೇಡ ನಾದಿನಿಯಿಲ್ಲದ ಮನೆಯು
ಮುಳ್ಳಿರದ ಗುಲಾಬಿ ಹೂ ತೋಟವದು 
ತವರ ಮರೆವಷ್ಟು ವೈಭವದ ಶ್ರೀಮಂತಿಕೆಯು!!


ಅವರೂ ಬಂದು ಮುಂದುವರೆದರು
ಮಾತು ಕಥೆ-ಹುಡುಗಿಗೆನೋ ವ್ಯಥೆ
ವರ ಅಪ್ಪಟ ಚಂದಿರನಂತೆ
ಅಯ್ಯೋ ..ಮಣ್ಣಲ್ಲಿ ಚಿನ್ನ ಬೆರೆತಂತೆ!!

ಹೊತ್ತು ಹೆತ್ತವರು -ಸನಿಹದವರು
ಧಾರೆಯೆರೆದು ಭಾರ ಇಳಿಸಿಕೊಳ್ಳಬೇಕಾದವರು
ಲಗ್ನಕ್ಕೆ ಆಜ್ಞೆಯಂತೆ ಕೊನೆಮಾತು ಆಡಿಯೇ ಬಿಟ್ಟರು
ನಾಳೆ ಏನೇ ಆದರೂ ಕಟ್ಟಿ ಕೊಂಡವಳಿಗೆ ಕಷ್ಟವೇನಿಲ್ಲ !!


ಕೊನೇ ಮಾತು ತಾಳಿ ಕಟ್ಟಿದವನು ತೀರಿ ಕೊಂಡರೂ..
ಚಿಂತಿಸಿದಳು ಕಂತು ಕಂತಲ್ಲಿ ಕಲ್ಪಿಸಿಕೊಂಡಳು

ವಿವಾಹವಾಗಿ ವೈಧವ್ಯದ ಭ್ರಮೆ ಆವರಿಸಿದರೂ
ಸಿರಿವಂತಿಕೆಯ ಸಿಂಧೂರ ಮನೆ ತುಂಬಾ ಮೆರದಾಡಿತು!!


ಮಾರನೇ ದಿನವೇ  ಮುತೈದೆ ಮಂಗಳವಾರ
ಮಲ್ಲಿಗೆ ಹೂ ಮುಡಿದು ನುಡಿದಳು ಹುಡುಗಿ
ಚಪ್ಪರದಂದೆ ಓಲಗದವರ ಕರೆಸಿ ಊದಿಸಿ
ಫಲಿಸಿತು ಎನ್ನಯ ಪೂಜಾ ಫಲ ......!!



ಹುಡುಗಿಯೊಬ್ಬಳು..,
ಮದುವೆಗೆ ಮುಂಚೆಯೇ ವಿಧವೆಯಾಗಿ
ಮತ್ತೆ ಮದುವೆಯಾದಳಂತೆ !!



ಚಿತ್ರ ಕೃಪೆ : ಗೂಗಲ್ ಇಮೇಜಸ್ 

Tuesday 21 May 2013

ಕನವರಿಕೆ... 3

ಸಂಜೆಯಾದರೂ ಅಪ್ಪಯ್ಯನ ಅರುಚಾಟ ನಿಲ್ಲಲಿಲ್ಲ ,
ಮಾವ ಹಳ್ಳಿಯ ಕಡೆ ಮುಖ ಮಾಡಲಿಲ್ಲ ,ಗಿರಿಜಳ ಕಣ್ಣೀರು ಬತ್ತಲಿಲ್ಲ ,ನಾನೂ ಜಗ್ಗಲಿಲ್ಲ ಅವರು ನಾನು ಬರದೆ ಹೋಗಲು ತಯಾರಿಲ್ಲ . ರಾತ್ರಿ ಮಲಗಿಕೊಳ್ಳಲು ಅವರಿಗೆ ರೂಂ ಬಿಟ್ಟು ಕೊಟ್ಟು  ನಾವು ತಾರಸಿಯಲ್ಲಿ ಮಲಗಿ ನಕ್ಷತ್ರದಲ್ಲಿ ನನ್ನ ಮುಖ ಮೂಡಿಸಲಾಗದೆ  ನೋಡುತಿದ್ದೆ. ನನ್ನಿಂದ ನಿಂಗೆ ತುಂಬಾ ತೊಂದ್ರೆ ಆಯಿತು ಚಿಟ್ಟೆ ಎಂದೆ ಅವನು ಉತ್ತರಿಸಲಿಲ್ಲ
ಅವನ ತಲೆಯೆಲ್ಲಾ ಅವರನ್ನು ಕಳುಹಿಸುವತ್ತಲೇ ಇದೆ ಏಕೆಂದರೆ ದಿನ ಕಳೆದರೆ ವಠಾರದಲ್ಲಿ ಹಲವರಿಗೆ ಉತ್ತರ ಕೊಡಬೇಕಿತ್ತು . ಸರಿ ರಾತ್ರಿಯಲ್ಲಿ ನುಡಿದ ಉಗಾದಿ ಗೆ ಬರ್ತೀನಿ ಅಂತ ದೇವರ ಮೇಲೆ ಆಣೆ ಮಾಡು ಹೇಗಿದ್ರೂ ನೀನು ದೇವರನ್ನ ನಂಬಲ್ಲವಲ್ಲ ಅವರು ಹೊರಟು ಬಿಡ್ತಾರೆ....,

ಬೀಸೋ ದೊಣ್ಣೆ ತಪ್ಪಿಸ್ಕೊಂಡ್ರೆ ವಠಾರದಲ್ಲಿ ಸುಮಾರು ವರ್ಷ ಆಯಿಸ್ಸು ಅಂದ . ಅವನು ಹೇಳಿದನ್ತಯೇ ಮಾಡಿದೆ ಅನುಮಾನಿಸುತ್ತಲೇ ಹೊರಟು ನಿಂತರು, ಹೊರಡುವ ಮುಂಚೆ ನನ್ನ ಬಳಿ ಇದ್ದ ಅವ್ವನ ಬಳೆಯನ್ನು  ಗುಟ್ಟಾಗಿ  ಹಿಂದಕ್ಕೆ ಪಡೆದು, ಅದು ಚಿನ್ನವಲ್ಲವೆಂದು ಅಸಲಿಯತ್ತು ತಿಳಿಸಿ ಅವ್ವ ಕಳುಹಿಸಿಕೊಟ್ಟಿದ್ದ ಒಂದಷ್ಟು ಹಣವನ್ನು ಯಾರಿಗೂ ತಿಳಿಯದಂತೆ ಗಿರಿಜಾ ನನ್ನ ಕೈ ಗೆ ತುರುಕಿದಾಗ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟೆ. ಗೇಟಿನವೆರೆಗೂ ಗಿರಿಜಾ ಹಿಂದಿರುಗಿ ನೋಡುತ್ತಾ ಹೋಗಿದ್ದು ನೀನು ಬರುವುದಿಲ್ಲ ಆದರೂ ನಾನು ಕಾಯುತ್ತೇನೆ ಎಂದಂತಿತ್ತು .
                                                     *********** 

ನಾನು ಅಪ್ಪಯ್ಯನಿಗೆ ಮಾತು ಕೊಟ್ಟು ಮೂರು ವರ್ಷ ಕಳೆಯುವುದರಲ್ಲಿದೆ ನಾನು ಹಳ್ಳಿಯ ಕಡೆ ತಿರುಗಿಯೂ ನೋಡಿಲ್ಲ, ಏಕೆಂದರೆ ನಾನಿನ್ನು ಸಿನೆಮಾ ಒಂದರ ನಿರ್ದೇಶಕನಾಗಿಲ್ಲ ! ಪತ್ರಿಕೆಯಲ್ಲಿ ಪೋಟೋ ಬರದೇ , ಟಿವಿಯಲ್ಲಿ ನಾನು ಕಾಣಿಸದೇ ,ಅವರಿವರ ಬಾಯಲ್ಲಿ ನನ್ನ ಸುದ್ದಿ ಬರದೆ ಹಳ್ಳಿಗೆ ಕಾಲಿಟ್ಟರೆ ಅಲ್ಲಿಯ ಮಂದಿ ಮಕ್ಕಡೆ ಮಲಗಿಸಿಕೊಂಡು ಮಾತಿನಲ್ಲೇ ತುಳಿಯುವ ಪರಿ ನೆನೆದು ನೆನೆದು ಸುಮ್ಮನಾಗಿದ್ದೇನೆ.  ಸಿನೆಮಾದಲ್ಲಿ ಸಾರ್ಥಕತೆ ಪಡೆಯಲು ತತ್ಕ್ಷಣದಲ್ಲಿ ಸಾದ್ಯವಾಗದೆ ಬದುಕು ಅನಿವಾರ್ಯವಾಗಿ ಭಾವನೆಗಳನ್ನು ಸ್ವಲ್ಪ ಮಟ್ಟಿಗೆ ಸಾಯಿಸಿ ಕಿರುತೆರೆಯಲ್ಲಿ ಸಹಾಯಕ ನಿರ್ದೇಶಕ ನಿಂದ 

ಸಹ ನಿರ್ದೇಶಕನಾಗಿ ಬಡ್ತಿ ಪಡೆದು ಸಂಚಿಕೆ ನಿರ್ದೇಶಕ ನಾಗುವುದರಲ್ಲಿ ಸಿನೆಮಾ ನಿರ್ದೇಶಕನಾಗಬೇಕೆಂದು ನಿರ್ಧರಿಸಿದ್ದೇನೆ . ಕೆಲವು ನಿರ್ಮಾಪಕರು ಹೊತ್ತು ಹೋಗದಿದ್ದಾಗಲೆಲ್ಲ ಕರೆದರೂ ಬೇಸರಿಸದೆ ಹೋಗಿ ನಿಷ್ಠೆಯಿಂದ ಕಥೆ ಹೇಳುವ ಕಾಯಕ ಮುಂದುವರೆಸಿದ್ದೇನೆ !! ಚಿಟ್ಟೆ ಮದುವೆಯಾಗಿ ಪಕ್ಕದ
ಬೀದಿಯಲ್ಲಿ ಪುಟ್ಟದೊಂದು ಮನೆ ಮಾಡಿಕೊಂಡು ರೂಂ ನ ಅಡ್ವಾನ್ಸ್ ನಲ್ಲಿ ಅರ್ಧ ಕೇಳದೆ ನನಗೆ ಬಳುವಳಿಯಾಗಿ ಬಿಟ್ಟುಕೊಟ್ಟಿದ್ದಾನೆ.ನಾನು ಕೆಲಸ ಮಾಡುವ ಧಾರವಾಹಿಯಲೆಲ್ಲಾ ಅವನಿಗೆ ಅವನ ಯೋಗ್ಯಾತಾನುಸಾರ ಸಣ್ಣ ಪುಟ್ಟ ಪಾತ್ರ ಕೊಡಿಸಿದ್ದೇನೆ ಸ್ನೇಹ ದರ್ಶಿನಿಯ ಸಾಂಬಾರ್ ಋಣ ಇನ್ನು ತೀರಿಲ್ಲ ! ಅಭಿನಯಿಸಿದ ಮಾರನೇ ದಿನ ಸೆಟ್ನಲ್ಲಿ  ಯಾರು ಏನೆಂದರು ಎಂದು ತಿಳಿದುಕೊಳ್ಳಲು ಮಾತ್ರ  ನನ್ನ ರೂಂಗೆ ಬರುವುದು ಅವನ ಪದ್ಧತಿ . ಈ ಮೂರು ವರ್ಷದಲ್ಲಿ ಹಲವಾರು ಬಾರಿ ಅಪ್ಪಯ್ಯ, ಅವ್ವನ ಜೊತೆ ಬಂದು ಹಳ್ಳಿಗೆ ಕರೆದೊಯ್ಯಲು ಪ್ರಯತ್ನ ಪಟ್ಟು ಸಫಲತೆ ಕಾಣದೆ ಫಸಲನ್ನೇ ನನಗಿಂತ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ . ತಿಂಗಳಿಗೊಮ್ಮೆ ಧವಸ ಧಾನ್ಯ ವನ್ನು ಕಪ್ಪದಂತೆ ತಂದೊಪ್ಪಿಸುವ ಆಚರಣೆಯಲ್ಲಿ ಕಳೆ ಕೀಳುವಷ್ಟೇ
ಧನ್ಯತೆಯನ್ನು ಪಡೆದಿದ್ದಾರೆ. ಬೆಂಗಳೂರಲ್ಲಿ ನಾನು ಬದಲಾಗದೆ ಇದ್ದರೂ ನನ್ನೂರು ಬದಲಾಗಿದೆ ! ನನ್ನ ಮನೆಗೆ ದೂರವಾಣಿ ಬಂದಿದೆ !!ಅವ್ವ ಸಮಯ ಸಿಕ್ಕಾಗಲೆಲ್ಲಾ ಪೋನ್ ಮಾಡುತ್ತಲೇ ಇರುತ್ತಾಳೆ ಗೌರಿ ಸಾವಿಂದ ಹಿಡಿದು ಅವಳ ಮಗಳು ಗಂಗೆಯ ನಿತ್ಯದ ಕರಾವಿನ ತನಕ ಹೊನಗೊನೆ ಸೊಪ್ಪು ಬಿಡಿಸಿದಂತೆ ವಿವರಿಸುತ್ತಾಳೆ ನಾನು ಗಮನವಿಟ್ಟು ಕೇಳಿಕೊಳ್ಳುತ್ತೇನೆ . ಚಲನಚಿತ್ರ ನಿರ್ದೇಶಕನಾಗುವನಿಗೆ ಚಿತ್ರಕಥೆ ಬರೆಯುವ ಕಲೆ ಕರಗತವಾಗಿರಬೇಕು ಅದಕ್ಕೆ ಅವನಿಗೆ ಯಾವುದೇ ವಸ್ತು- ವ್ಯಕ್ತಿ - ವಾತಾವರಣ ಹಾಗೂ  ವಿಷಯದ ಸಮಷ್ಠಿ ಕಲ್ಪನೆ ಮನದಲ್ಲಿ ಮೂಡಿಸಿಕೊಳ್ಳುವ ಪರಿ ತಿಳಿದಿರಬೇಕು ಹೀಗೆಂದು ಕಿರುತೆರೆಯ ಸೃಜನಶೀಲ ನಿರ್ದೇಶಕರೊಬ್ಬರು ಹೇಳಿದ ಬಳಿಕ ಅವ್ವನ ಪ್ರತಿ ಮಾತು ಕೇಳುವುದು ನನ್ನ ಪರಿಪಾಠ . ಆದರೆ ಇನ್ನು ಕಾಯುತ್ತಿರುವ ಗಿರಿಜಳ ವಿಷಯ ಬಂದಾಗಲೆಲ್ಲ ನನ್ನ ಮೊಬೈಲ್ನಲ್ಲಿ ಇದಕಿದ್ದಂತೆ ಕರೆನ್ಸಿ ಮುಗಿದು ಹೋಗುತ್ತದೆ. ಕಾರಣವಿಷ್ಟೇ ನಾನು ನನ್ನಲ್ಲೇ  ಪ್ರೀತಿಸುತಿರುವ ಕಿರುತೆರೆಯ ನಟಿಯೊಬ್ಬಳಿಗೆ ಮೋಸ ಮಾಡಲು ಮನಸ್ಸು ಒಪ್ಪದೆ !!
                                                      
ಹೌದು ಧಾರಾವಾಹಿಯಲ್ಲಿ ಕೆಲಸಕ್ಕೆ ಸೇರಿದ ಹೊಸತರಲ್ಲಿ
ನನ್ನನ್ನು ಯಾವುದೇ ನಟಿ ಪ್ರೀತಿಸುವುದು  ಬೇಡ,ನಕ್ಕು ಒಂದೆರೆಡು ಬಾರಿ ಮಾತನಾಡಿಸಿದರೂ ಸಾಕು ಅವರಲ್ಲಿ ಅನುರಕ್ತನಾಗುತ್ತಿದ್ದೆ , ಗಿರಿಜಳನ್ನು ಅವರ ಮುಂದೆ ನೀವಳಿಸಿ ಬಿಸಾಡಿ , ಅವರನ್ನು ಕರೆದುಕೊಂಡುಹೋಗಿ ಅವ್ವ ಅಪ್ಪಯ್ಯನ ಮುಂದೆ ನಿಲ್ಲಿಸಿದಂತೆ ಕನಸು ಕಾಣುತಿದೆ!! ನನ್ನ ಕನಸನ್ನು ಸಂಬಂಧಪಟ್ಟವರ ಮುಂದೆ ನೇರಾನೇರ ಹೇಳಿ ಖಾತ್ರಿ ಮಾಡಿಕೊಳ್ಳುವುದರೊಳಗೆ ಸಹಕಾರ ಕೊರತೆಯಿಂದಲೋ ನಖರಾ ನಡವಳಿಕೆಯಿಂದಲೋ ಅವರ ಪಾತ್ರ ಮುಗಿದು ನನ್ನೊಂದೊಗಿನ ಸಂಪರ್ಕವೂ ಸ್ಪೆಕ್ಟ್ರಂ ಸುಳಿಗೆ ಸಿಕ್ಕಿ ರದ್ದಾದ ಸಂಪರ್ಕವಾಗುತಿತ್ತು. ಇನ್ನು ಕೆಲವರು ಬಂದಾಗ ನನ್ನೊಂದಿಗೆ ನಕ್ಕು  - ಬೆಳೆದಾಗ ಬೇರೆಯವರೊಂದಿಗೆಗುರುತಿಸಿಕೊಳ್ಳುತಿದ್ದರು !! ಒಂದೆರಡು ಕೆಲಸ ಇದಕ್ಕಾಗಿ ಬಿಟ್ಟು
ಮತ್ತೊಂದು ಕೆಲಸ ಹುಡುಕುವ ದೀರ್ಘ ಸಮಯದಲ್ಲಿ ಜ್ಞಾನೋದಯವಾಗಿ ಕೈಲಿದ್ದ ಪ್ಯಾಡ್ ನಷ್ಟೇ ಪ್ರೀತಿಸಿ.., ಸಂಭಾಷಣೆ ಗಳೊಂದಿಗೆ ಸರಸವಾಡುತ್ತಾ.., ಪ್ರಣಯ ದೃಶ್ಯದ ಚಿತ್ರೀಕರಣದಲ್ಲಿ ನನ್ನನ್ನು ಕಲ್ಪಿಸಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡು ನೆಮ್ಮದಿಯಾಗಿದ್ದೆ .ಆದರೆ, ಇವಳೆಲ್ಲಿಂದ ಬಂದಳೋ ತುಡುಗುತನದ ಬೆಡಗಿ!!ಒಂದೆರಡು ಧಾರಾವಾಹಿಯಲ್ಲಿ ನಟಿಸಿ ಈ ಹೊಸ ಧಾರಾವಾಹಿಯಲ್ಲಿ ನಾಯಕಿಯಾದವಳು !ನಾನಿನ್ನೂ ಸಹ ನಿರ್ದೇಶಕನೇ ಸಂಚಿಕೆ ಕೂಡ ಕೈಗಿತ್ತಿಲ್ಲ . ಬಂದ ಮೊದಲ ದಿನ ಸಂಜೆ ಮೊಬೈಲ್ ನಂಬರ್ ಪಡೆದವಳು ಮನೆ ತಲುಪುವುದರಲ್ಲಿ ಮೂರ್ನಾಲ್ಕು ಮೆಸೇಜ್ ಕಳುಹಿಸಿದ್ದಳು
ಮದ್ಯರಾತ್ರಿವರೆಗೂ ನಿದ್ದೆಗೆಟ್ಟ ಮನಸ್ಸು ಕೊನೆಗೂ ಒಂದು ಗುಡ್ ನೈಟ್ ಕಳುಹಿಸಲು ಮುಂದಾಗಿ , ಸೆಂಡ್ ಒತ್ತಿ ಮೊಬೈಲ್ ಪಕ್ಕಕ್ಕಿಡುವುದರಲ್ಲಿ ಅತ್ತಲಿಂದ ಅರ್ಧ ರಾತ್ರಿಯಲ್ಲಿ ಉತ್ತರ!! ಥ್ಯಾಂಕ್ಯೂ ,,ಸೋ........ ಮಚ್  ಜೊತೆಗೆ ಗುಡ್ ನೈಟ್ ...ಮುಂದೆ ಹಾರ್ಟ್ ಚಿನ್ಹೆಗಳು !! ಇಷ್ಟು ಸಾಕಿತ್ತು, ನಾನು ಪ್ರೀತಿ ಚಿಪ್ಪಿನಲ್ಲಿ ಮಲಗಿ ನಿದ್ದೆ ಮಾಡಲು . ಮಾರನೇ ದಿನ ನಾನು ಬೇಕಂತಲೇ ಅವಳೊಡನೆ ಮಾತನಾಡಲಿಲ್ಲ ,ಕನಸಿಗೆ ಜಾರುವ ಮುನ್ನ ಪರೀಕ್ಷಿಸ ಬೇಕಿತ್ತು ಇವಳು ಎಲ್ಲರಂತೆಯೇ.. ಅಲ್ಲವೇ? ಸಂಜೆವರೆಗೂ ಅವಳು ಮಾತನಾಡಿಸಲಿಲ್ಲ! ನಾನು ನಿರ್ಧಾರಕ್ಕೆ ಬರುವ ಮುಂಚೆ 
  ಮತ್ತದೇ ಸಂಜೇ ...ಅವಳಾಗೇ ಹೊರಡುವ ಮುನ್ನ ನನ್ನ    ಬಳಿ ಬಂದು ಮೆಲ್ಲಗೆ.... 

ಬಾಯ್ ಮೆಸೇಜ್ ಮಾಡ್ತೀನಿ ಬೇಗ ರಿಪ್ಲ್ಯೇ ಮಾಡು ಅಷ್ಟೊತ್ತು ಎದ್ದಿರ್ಬೇಡ ಎಂದು ಹೇಳಿದವಳು ಮೆಸೇಜ್ ಕಳುಹಿಸದೇ ಇಡೀ ರಾತ್ರಿ ನನ್ನ ನಿದ್ದೆಗೆಡಿಸಿದ್ದಳು . ಯಾಕೋ ಶೂಟಿಂಗ್ನಲ್ಲಿ ಮನಸ್ಸೇ ಇಲ್ಲ ಅವಳು ಬಂದಿಲ್ಲ ಮೊದಲೆರೆಡು ದೃಶ್ಯದಲ್ಲಿ ಅವಳಿಲ್ಲ ಬರುವುದು ತಡ , ಗೊತ್ತಿದೆ ನನಗೆ . ಮೆಸೇಜ್ ಬಂದು ಮೊಬೈಲ್ ಸದ್ದು ಮಾಡಿತು ನಿರ್ದೇಶಕರು ಕ್ಯಾಕರಿಸಿ ಉಗಿದರು ಸಹ ನಿರ್ದೇಶಕರಿಗೆ ಉಗಿಯಲು ಸಿಗುವ ಸಣ್ಣ ಅವಕಾಶವನ್ನು ಅವರು ಬಿಟ್ಟು ಕೊಡುತಿರಲಿಲ್ಲ ನಾನು ಮೊಬೈಲ್ನೊಂದಿಗೆ ಸೆಟ್ ನಿಂದ ಹೊರಗೋಡಿ ಮೆಸೇಜ್ ನೋಡಿದೆ ಸಾರಿ ಚಿನ್ನ ಕರೆನ್ಸಿ ಮುಗಿದಿತ್ತು ನೆನ್ನೇ ಮೆಸೇಜ್
ಮಾಡಲಾಗಲಿಲ್ಲ , ಸೆಟ್ನಲ್ಲಿ ಮುಖ ಗಂಟು ಹಾಕಿಕೊಳ್ಳಬೇಡ ನೋಡಕ್ಕೆ ಆಗಲ್ಲ . ಸಾರಿ ಸಾರಿ ಸಾರಿ .. ಮಿಸ್ ಯೂ ಓದಿ ಮುಗಿಸುವಷ್ಟರಲ್ಲಿ ಗಾಡಿಯಿಂದ ಅವಳೇ ಇಳಿದು ಬಂದು ಜೋರಾಗಿ ಹಾಯ್.. ಎನ್ನುತ್ತಾ ಕೈ ಬೀಸಿ ನನ್ನ ಬಳಿ ಬಂದು ಅತ್ತಿತ್ತ ನೋಡಿ ನನ್ನ ಮುಂಗೈ ಜಿಗುಟಿ ವಾರಕ್ಕೆ ಸಾಕಾಗುವಷ್ಟು ಹಿತವಾದ ನೋವನ್ನ ಕೊಟ್ಟು ಒಳಗೋಡಿದಳು .
                                          


....ಮುಂದುವರೆಯುವುದು                                       ಚಿತ್ರ ಕೃಪೆ - ಗೂಗಲ್ ಇಮೇಜಸ್ 

                                                    


ಸ್ವಗತಗಳೊಂದಿಗೆ !!


ಅಂದು ನೀವಿದ್ದಿರೀ.. ಜೊತೆಗೆ
ಕಿಸೆಯಿಂದ ಕೊಟ್ಟು ಹೇಳಿಕೊಟ್ಟಿರಿ
ರುಚಿ - ವಿಚಾರ ಅಮಲೇರುವ ಹೊತ್ತಿಗೆ
 
ಇಂದು ನೀವಿಲ್ಲ.. ಸಂಜೆಯಲ್ಲಿ
ಖಾಲಿ ಕಿಸೆ- ನನ್ನ ತೊದಲು ನುಡಿ
ಜೊತೆಯಾಗಿವೆ ತೂರಾಡುವ ರಾತ್ರಿಗೆ !!

ಆರಿದ್ದೆವು ಹಲವರು ಜೊತೆಗೂಡಿ
ಕೂಗಾಡಿ ಹಾರಾಡಿ ಬೆಸುಗೆ ಬಿಟ್ಟು
ನಾಲ್ಕು ಸರಿಯಾಗದೆ ಮೂರು ಹಾಯೆನಿಸಿ

ಕೊನೆಗೆ ಇಬ್ಬರೂ ಬೆರೆಯದೇ
ಒಂಟಿಯಾಗಿದ್ದೇನೆ - ಆತ್ಮ ಪ್ರಶಂಸೆ
ಪರ ನಿಂದನೆಯ ಸ್ವಗತಗಳೊಂದಿಗೆ !!                ಚಿತ್ರ ಕೃಪೆ - ಗೂಗಲ್ ಇಮೇಜಸ್ 

Monday 20 May 2013

ಅರೆ!...ಬೆತ್ತಲಾಗಿ!!


ನಿನ್ನ ಮರೆಯಲೆಂದು ನಲ್ಲ.... 

ನೆನಪುಗಳೆಲ್ಲಾ ಹೂತಿಟ್ಟು 
ಕಲ್ಲು ನೆಟ್ಟು ಕಣ್ಣ ಬಿಡುವುದರಲ್ಲಿ 
ನಾ ......ಅರೆ!...ಬೆತ್ತಲಾಗಿ!! 
ನಿನಗೇ ..ಜೋತು ಬಿದ್ದಿದ್ದೇನೆ !! 

                              ಚಿತ್ರ ಕೃಪೆ - ಗೂಗಲ್ ಇಮೇಜಸ್ 



Sunday 19 May 2013

ಲೈಕು - ಹೈಕು

ಇವನು..,

ಸ್ನೇಹ ಸಂಖ್ಯೆ ಸಾವಿರ 
ದಾಟಿದರೂ....." ಲೈಕು "
ಗಾಡಿ ನೂಕು ಎನ್ನುತದೆ !
"
ಕಾಮೆಂಟು" ನಂಟು ಅಂಟುತ್ತಿಲ್ಲ!!
ಅವಳು..,


ತರುಣಿ ಸದಾ.. ಚಿರಋಣಿ 
"
ಲೈಕು" ಹೈಕಾಗುತ್ತಲಿದೆ! 
"
ಕಾಮೆಂಟು" ದಂಟಿಗೆ ದೊಡ್ಡ 
ಕಪಾಟು ಬೇಕಾಗಿದೆ.......!!                              ಚಿತ್ರ ಕೃಪೆ - ಗೂಗಲ್ ಇಮೇಜಸ್ 

Friday 17 May 2013

ಕನವರಿಕೆ... 2





ಅಪ್ಪಯ್ಯನ ಅಣತಿಯಂತೆ, ಹಳ್ಳಿಯ ಹಿರಿ ತಲೆಗಳೆಲ್ಲಾ ನಾನು ಕಂಡಾಗಲೆಲ್ಲ ಸಿನೆಮಾ ಸೇರಿ ಎಕ್ಕುಟ್ಟಿ ಹೋದವರ ಕಥೆಯನ್ನು ಸರದಿ ಸಾಲಿನಲ್ಲಿ ನಿಂತು ನನಗೆ ವರದಿ ಮಾಡತೊಡಗಿದಾಗ ಅವರ ಬಾಯಿ ಮುಚ್ಚಿಸಲು ಬೇರೆ ದಾರಿ ಕಾಣದೇ ಮುಂಜಾನೆಗೆ ಎದ್ದು ನಮ್ಮ ಅವ್ವನ ಪ್ರೀತಿಯ ಗೌರಿಯನ್ನು,ಹಾಗೇ ಜೋಡೆತ್ತುಗಳನ್ನು ಮಲ್ಲಾರಿ ಹಳ್ಳಕ್ಕೆ ಹೊಡೆದುಕೊಂಡು ಹೋಗಿ ಮೈ ತಿಕ್ಕ ತೊಡಗಿದೆ !
 ಹಟ್ಟಿಯಲ್ಲಿ ಮಾತು ನಿಂತು ನನಗೆ ಶಾಂತಿ ಸಿಕ್ಕಿತು,  ಊರ ಬೀದಿಯಲ್ಲಿ ಕೂಡ. ಎಲ್ಲರೂ ನನ್ನ ನಂಬಿದ್ದಾರೆ ಎನ್ನುವ ನಂಬಿಕೆಗೆ ಕಳ್ಳಿ ಹಾಲು ಸುರಿದಂತಾಗಿದ್ದು ಉಗಾದಿಯ ಆಸುಪಾಸಿನಲ್ಲಿ ಗಿರಿಜಾ ಜೊತೆಗೆ ನನ್ನ ಲಗ್ನ ನಿಶ್ಚಯ ಮಾಡಿ ಮೊದಲ ಹುಣ್ಣಿಮೆಗೆ ಮುಂಚೆ ಮದುವೆಯೂ ಮುಗಿಸಬೇಕು ಎಂದು ಅಪ್ಪಯ್ಯ ಒಳಗೊಳಗೇ ತೀರ್ಮಾನಿಸಿದ್ದಾರೆ ಎಂಬ ಗುಸು ಗುಸು ಕೊಟ್ಟಿಗೆಯಲ್ಲಿ ಕಸ ಎತ್ತುವರ ನಡುವಿನಿಂದ ನನ್ನ ಕಿವಿಗೆ ಬಿದ್ದಾಗಲೇ!
ತಡ ಮಾಡಿದರೆ ಜೀವನ ಪರ್ಯಂತ ನೇಗಿಲು ಹೆಗಲೇರುವುದು ಖಂಡಿತ ಎನ್ನಿಸಿ ದಿನ ಗೊತ್ತು ಮಾಡಿಕೊಂಡಿಯೇ ಬಿಟ್ಟೆ . ಸಂಜೆವರೆಗೂ ಅಪ್ಪಯ್ಯನ ಬಳಿ ಕುಳಿತು ಜಮೀನಿನ ಬಗ್ಗೆ ಮಾತನಾಡಿ, ಮಲಗುವ ಮುನ್ನ ಅವ್ವ, ಗಿರಿಜಾಳ ವಿಚಾರ ಬೇಕಂತಲೇ ಎತ್ತಿದ್ದಾಗ ನಾಚಿಕೊಂಡಂತೆ ನಟಿಸಿ ಗೆರೆ ದಾಟದ ಹೈದನಿವ ಎನ್ನಿಸಿ ಅವರೆಲ್ಲಾ ನೆಮ್ಮದಿಯ ನಿದ್ದೆಗೆ ಜಾರಿದ ಮೇಲೆ ಕುಡುಕ್ ನಿಂಗ ಎರೆಡೆರೆಡು ಸಿನೆಮಾ ಹಾಡನ್ನು ಒಟ್ಟಿಗೆ ಬೆರೆಸಿ ತಾಳ ಕೆಡದಂತೆ ಹಾಡುತ್ತಾ ಹಟ್ಟಿಯ ಮುಂದೆ ಹೋಗುವವರೆಗೂ ಕಾದಿದ್ದು ಕೈ ಗೆ ಸಿಕ್ಕ ಬಟ್ಟೆ- ಬರೆ ,ಚಿನ್ನವಿರಬೇಕೆಂಬ
ಅನುಮಾನದಲ್ಲಿ ಅವ್ವನ ಬಳೆ ,ಅಪ್ಪಯ್ಯನ ಕಿಸೆಯಲ್ಲಿ ಸಿಕ್ಕಷ್ಟು ಬಳಿದು , ಪೋಲೀಸರ ಶಿಳ್ಳೇ ಪೀಪಿ  ಗಿಂತ ಹೆಚ್ಚು ಶಬ್ದ ಮಾಡುವ ಪೆಟಾರಿಯ ತಂಟೆಗೆ ಹೋಗದೆ ಮನೆಯಿಂದ ಹೊರಬಿದ್ದು , ಮಾರಿಗೆ ಮೀಸಲಾಗಿದ್ದ ಸಾಕವ್ವನ ಕೋಳಿಯ ನನ್ನ ಪಾಲಿನ ಕೊನೆಯ ಅಲರಾಂ ಕೇಳಿ ಅದಕ್ಕೆ ಮುಂಚಿತವಾಗೇ  ಅಶ್ರುತರ್ಪಣ ಸಲ್ಲಿಸಿ ಊರಿಂದ ಕಾಲ್ಕಿತ್ತೆ .
                         ***********                                              

ಬೆಂಗಳೂರಿಗೆ ಬಂದು ಬೀದಿಗೆ ಬೀಳಲಿಲ್ಲ , ಚಿಟ್ಟೆಗೆ ಪೋನ್ ಮಾಡಿ ಎಲ್ಲಾ ವ್ಯವಸ್ತೆ ಮಾಡಿಕೊಂಡೇ ಹಳ್ಳಿಯಿಂದ ಹೊರಟಿದ್ದೆ. ಮೆಜಸ್ಟಿಕ್ ನಿಂದ ಅವನ ರೂಂ ಗೆ ಬಿ.ಎಂ.ಟಿ.ಸಿ. ಗೆ ಕಾಯದೆ ಆಟೋ ದಲ್ಲೇ ಹೊರಟಿದ್ದೆ ಜೇಬ್ನಲ್ಲಿ ಕದ್ದ ಕಾಸಿತ್ತಲ್ಲವೇ ತಸು ಧಾರಾಳತನದ ದೈರ್ಯ ಜಾಸ್ತಿ. ಚಿಟ್ಟೆ ಯ ಹೆಸರು ಚಿದಾನಂದ, ಹುಡುಗಿಯರ ಹಿಂದೆ ಮುಂದೆ ಸುತ್ತುತಿದ್ದ ಎಂಬ ಕಾರಣಕ್ಕೆ ಚಿಟ್ಟೆ ಎಂದು ಕರೆಯುತಿದ್ದೆವು. ನನ್ನ ಬಾಲ್ಯ ಹಾಗೂ ನಂಬುಗೆಯ ಏಕ ಮಾತ್ರ ಸ್ನೇಹಿತ !! ಕಾರಣವಿಷ್ಟೆ , ನನ್ನ ಸಿನೆಮಾ ಕನಸಿಗೆ ನೀರೆರದದ್ದು ಅವನೊಬ್ಬನೇ ..! ಅದೂ ಏಕೆಂದರೆ ಅವನಿಗೂ ನಟನಾಗಬೇಕೆಂಬ ಹುಚ್ಚು!! ಹೀಗಾಗಿ ನನಗಿಂತ ಮುಂಚೆಯೇ ಮನೆ ಬಿಟ್ಟು ಬಂದು ಬೆಂಗಳೂರು ಸೇರಿ ಮೂರೇ ತಿಂಗಳಿಗೆ ಮೋಟಾರ್ ರಿವೈಂಡಿಂಗ್ ಕೆಲಸಕ್ಕೆ ಸೇರಿ ನಟನೆ ಏನಿದ್ದರೂ ನನ್ನ ಪ್ರವೃತಿ ಮಾತ್ರ ಎಂದು ಘೋಷಿಸಿಕೊಂಡು ನನ್ನಂತವರ ಆಸೆಗೆ ಅಜೀವ ಪೋಷಕತ್ವ ಪಡೆದುಕೊಂಡು ತನ್ನ ಕನಸನ್ನು ಮುಂದುವರೆಸಿದ್ದ !
ಆಟೋದವನು ಚಿಲ್ಲರೇ ನೀಡುವುದರಲ್ಲಿ ಪರವಾಗಿಲ್ಲ ಇಟ್ಕೋ ಎಂದು ಬಾಯ್ಬಿಟ್ಟು ಹೇಳಲು ವಾಸ್ತವದ ಶ್ರೀಮಂತಿಕೆ ನಾಚಿಕೆಯನ್ನುಂಟು ಮಾಡಿ ಅವನತ್ತ ನೋಡದೆ ಚಿಲ್ಲರೇ ಪಡೆಯದೇ ಸರಸರನೆ ಗೇಟ್ನತ್ತ ನಡೆದು ವಠಾರದಲ್ಲಿ ಕಾಲಿಟ್ಟು ಮೆಟ್ಟಿಲೇರಿ ರೂಂ ಸೇರುವುದರೊಳಗೆ ಹಲವರ ಕಣ್ಣು ನನ್ನ ಮೇಲೆ ಹರಿದಾಡಿತ್ತು. ನನ್ನ ಕಂಡೊಡನೆ ಚಿಟ್ಟೆ ಒಂದೇ ಉಸಿರಿಗೆ , ಅನ್ನ ಮಾಡಿದ್ದೇನೆ ಮದ್ಧ್ಯಾನದ ಹೊತ್ತಿಗೆ ರೋಡ್ ತುದಿಯಲ್ಲಿರುವ  ದರ್ಶಿನಿ ಹೋಟಲ್ಗೆ ಹೋಗಿ ನನ್ನ ಹೆಸರು ಹೇಳಿ ಹತ್ತು ರೂಪಾಯಿ ಕೊಟ್ಟ್ರೆ
ಸಾಂಬಾರ್ ಕೊಡ್ತಾರೆ ರಾತ್ರಿಗೂ ಅದೇ ಆಗುತ್ತೆ , ಹೋಟೆಲ್ನಲ್ಲಿ ಚಿಟ್ಟೆ ಅನ್ನಬೇಡ ಚಿದಾನಂದ ಅನ್ನು ಕೆಲಸಕ್ಕೆ ಹೊತ್ತಾಯಿತು ಸಂಜೆ ಸಿಗುತ್ತೇನೆ ಎಂದು ಹೇಳಿ ಹೊರಟವನಿಗೆ ನಾನು ಒಂದೇ ಉಸಿರಿನಲ್ಲಿ ಟಾಯ್ಲೆಟ್ ಎಲ್ಲಿದೆ ? ಎಂದೆ . ಬಂದ ದಾರಿಯಲ್ಲೇ ಹೋಗಿ ಬಲಕ್ಕೆ ತಿರುಗಿದರೆ ಗೇಟು ಎಡಕ್ಕೆ ನೋಡು ಅದೇ ಟಾಯ್ಲೆಟ್ , ಇಲ್ಲಿಂದಲೇ ನೀರು ತೆಗೆದುಕೊಂಡು ಹೋಗು ಅಂದವನೇ ನಡೆದು ಬಿಟ್ಟ . ಬಂದ ದಾರಿಯನ್ನೊಮ್ಮೆ ನೆನಪಿಸಿಕೊಂಡೆ ಬಯಲಲ್ಲಿ ಕೂತು ಸುತ್ತಲಿದ್ದ ಹತ್ತು ತಲೆಗಳ ಜೊತೆ ಬಿತ್ತನೆ, ಬೇಸಾಯ ,ಗೊಬ್ಬರದ ಮಾತಾಡಿ, ಬಂದ ಕೆಲಸ  ಮುಗಿಸಿ ನಿತ್ಯವೂ ಹಟ್ಟಿ ಸೇರುತಿದ್ದ ನನಗೆ ಮೊದಲ ಬಾರಿಗೆ ಬಕೆಟ್ ಹಿಡಿದು ವಠಾರದಲ್ಲಿ ಹಾದು ಟಾಯ್ಲೆಟ್ಗೆ ಹೋಗಲು ತುಂಬಾ ಸಂಕೋಚವಾಯಿತು!!                                                 *************  
ಯಾವ್ದಕ್ಕೂ ಯೋಚನೆ ಮಾಡಪ್ಪಾ........
ಜೀವನಕ್ಕೆ ಅಂತ ಒಂದು ಕೆಲಸ ಇಟ್ಕೊಂಡು ಅಲ್ಲಿಗೆ ಬೀಳೋದು ಒಳ್ಳೇದು ಸರಿ ರಾತ್ರಿ ವರೆಗೂ ನನ್ನನ್ನು  ತಿಂಗಳ ಸಂಬಳಕ್ಕೆ ಎಲ್ಲಾದರು ಕೆಲಸಕ್ಕೆ ಸೇರಿಸಿ ನಂತರ ಸಿನೆಮಾದವರ ಬಳಿ ಕರೆದೊಯ್ಯಲು ಚಿಟ್ಟೆ ಹರಸಾಹಸ ಮಾಡಿ ಕೊನೆಯದಾಗಿ ನುಡಿದಿದ್ದ . ನಾನು ಅದೇ ಕೊನೇ ಎಂಬಂತೆ ನಿನ್ನ ಕೈ ಲಿ ಆದ್ರೆ ಯಾರನಾದ್ರು ಪರಿಚಯಿಸು ನಿನಗೆ ಹೊರೆಯಾಗ್ತೀನಿ ಅನ್ನೋ ಭಯವಿದ್ರೆ ನಾನು ಬೇರೆ ದಾರಿ ನೋಡ್ಕೊತ್ತೀನಿ ಈ ಊರ್ನಲ್ಲಿ ನನಗೆ ಬೇರೆ ಸ್ನೇಹಿತರೂ ಇದ್ದಾರೆ ಎಂದು ಖಾರವಾಗೇ ಹೇಳಿದ್ದೆ .
                             
ಸ್ನೇಹ ಮುರಿದು ಬೀಳುವ ಮಾತು ಬಂದೊಡನೆ ಚಿಟ್ಟೆ,       ಸುಮ್ಮನಾಗಿ ಮಾರನೇ ದಿನವೇ ಅವನ ಕೆಲಸಕ್ಕೆ ರಜ ಹಾಕಿ ಕಲಾಕ್ಷೇತ್ರ ಕಾನಿಷ್ಕ ಎಂದೆಲ್ಲಾ ಸುತ್ತಾಡಿಸಿ ಒಂದ್ದಿಬ್ಬರಿಗೆ ಪರಿಚಯಿಸಿದಾಗ ಅವರುಗಳು ಚಿದು ಎಲ್ಲ ಹೋಗಿದ್ಯೋ ಇಷ್ಟು ದಿನ , ಸೈಕಲ್ ಹೊಡ್ದು ಸಾಕಾಯಿತೇ.., ಕಾಸ್ ಕೇಳದ್ರೆ ಕೆಲಸ ಇಲ್ಲ! ಕೆಲಸ ಕೇಳದ್ರೆ ಕಾಸಿಲ್ಲ..! ಅಲ್ಲವಾ ಎಂಬಿತ್ಯಾದಿ ಮಾತುಗಳನ್ನು ಕೇಳಿದಾಗಲೇ ನನಗೆ ಅರ್ಥ ವಾಗಿದ್ದು ಚಿಟ್ಟೆಗಿಲ್ಲಿ ಸಂಪರ್ಕ ತಪ್ಪಿ ಹೋಗಿದೆ ಎಂದು. ಆದರೂ.. ಅವನು ಅನಿವಾರ್ಯ ಏಕೆಂದರೆ ನನಗೆ ಅದು ಇಲ್ಲವಲ್ಲ!!
ಹಾಗೂ ಹೀಗೂ ತಿಂಗಳು ಕಳೆಯುವುದರಲ್ಲಿ ಸಿನೆಮಾ ರಂಗದ ಮುಕ್ಕಾಲು ಮಾತುಗಳು ತಂಗಳು ಆಗಿತ್ತು . ಹೋದ ಕಡೆಯೆಲ್ಲ ನನ್ನ ವಿದ್ಯಾಭ್ಯಾಸ ಮಾಸ್ಟರ್ ಡಿಗ್ರಿ ಎಂದು ಧರ್ಪದಿಂದ ಹೇಳುತಿದ್ದೆ ಅವರೆಲ್ಲಾ ಮರು ಮಾತಾಡದೆ ಆಯಿತು ತಿಳಿಸ್ತಾರಂತೆ ಎಂದು ಅವರ ಸುತ್ತಲೂ ಇರುತಿದ್ದ ಒಬ್ಬನ ಕೈಯಲ್ಲಿ ಹೇಳಿ ಕಳುಹಿಸುತಿದ್ದರು!! ಈ ರಂಗಕ್ಕೆ ಬರಲು ಇದಕಿಂತ ಇನ್ನೆನ್ನಾದರು ವಿದ್ಯಾಭ್ಯಾಸ ಬೇಕೇ ?? ಚಿಟ್ಟೆ ಯನ್ನೊಮ್ಮೆ ಕೇಳಿದೆ  ಇನ್ನು ಮುಂದೆ ಯಾರಾದರೂ ಕೇಳಿದ್ರೆ ಪಿ.ಯು. ಸಿ. ಫೇಲ್ ಎಂದು ಹೇಳು ಎಲ್ಲವೂ ಸರಿಯಾಗುತದೆ ಎಂದ! ಅವಮಾನವಾದರು ಅವನ ಅನಿವಾರ್ಯತೆಗೆ ಸಿಲುಕಿದ್ದೆ ಕದ್ದ ಕಾಸೆಲ್ಲ ಖಾಲಿಯಾಗಿತ್ತು !!
ಈಗ ನಾನು ಜಗದೀಶ ಪಿ.ಯು.ಸಿ. ಫೇಲ್ !! ಕೆಲವರಿಗೆ ಆರ್ಟ್ಸ್, ಇನ್ನು ಕೆಲವರಿಗೆ ಕಾಮರ್ಸ್, ಹಲವರಿಗೆ ಸೈನ್ಸ್ ಅಂದಿದ್ದೇನೆ. ಅವರಲ್ಲಿ ಯಾರಾದರು ಸಿಕ್ಕಿ ಮತ್ತೊಮ್ಮೆ ಕೇಳಿದರೆ ಅದೇ ಹೇಳುತ್ತೇನೆ ಎಂಬ ನಂಬಿಕೆ ಖಂಡಿತ ಇಲ್ಲ . ಪಿ.ಯು.ಸಿ. ಫೇಲ್ ಫಲ ಕೊಡಲು ಪ್ರಾರಂಬಿಸಿತು , ಕೆಲವು ನಿರ್ದೇಶಕರು ನನ್ನ ಜೊತೆ ಹೆಚ್ಚು ಹೊತ್ತು ಮಾತನಾಡುವಂತೆ ಆಯಿತು. ಒಂದರೆಡು ಕಡೆ ಕೆಲಸ ಕೊಟ್ಟರು ನನಗ್ಯಾವ ಕೆಲಸ ಕೊಟ್ಟಿದ್ದಾರೆ ಎಂದು ತಿಳಿಯುವುದರಲ್ಲಿ ಇನ್ನ್ಯಾರೋ ಬಂದು ಓಡಿಸಿ ಬಿಟ್ಟಿರುತಿದ್ದರು. ತಿಂಗಳುಗಳು ಉರುಳುತ್ತಾ ಹೋದಂತೆ ನಿಮ್ಮ ಮೋಟಾರ್ ರಿವೈಂಡಿಂಗ್ ಕಂಪನಿಯಲ್ಲಿ ನಂಗೆಷ್ಟು  ಕೊಡ್ತಾರೆ ಎಂದು ಚಿಟ್ಟೆಯನ್ನು ಕೇಳಿಯೇ ಬಿಟ್ಟಿದ್ದೆ .
ಅವನು ನನ್ನೆಡೆಗೆ ವ್ಯಂಗ್ಯವಾಗಿ ನೋಡಿ ನಕ್ಕು ಏನೊಂದು ಹೇಳದೆ ಹೊರಗೆ ಹೋದವನು ದಡಬಡನೆ ಹಿಂದಿರುಗಿ ಬಂದು ಅವಿತುಕೊಳ್ಳಲು ಹೆಣಗಾಡುತ್ತಿದ್ದನು ಒಂಟಿ ರೂಮ್ನಲ್ಲಿ ಬೇರೆ ಕೋಣೆಯಾದರು ಹೇಗೆ ಇದ್ದೀತು ! ಯಾಕೋ ಏನಾಯಿತು ಎಂದು ಕೇಳುವಷ್ಟರಲ್ಲಿ ಎದುರಿಗೆ ನಿಂತಿದ್ದವರು ಅಪ್ಪಯ್ಯ , ಮಾವ ಮತ್ತು ಗಿರಿಜಾ ಕೂಡ !! ಚಿಟ್ಟೆಯ ಜಾಡು ಹಿಡಿದು ಬಂದೇ ಬಿಟ್ಟಿದ್ದರು.





ಮುಂದುವರೆಯುವುದು ......



ಚಿತ್ರಗಳು - ಕೃಪೆ : ಗೂಗಲ್ ಇಮೇಜಸ್ 

Tuesday 14 May 2013

ಕನವರಿಕೆ... 1



ಸಿಕ್ಕ ಸಿಕ್ಕ ಬಸ್ಸು ಲಾರಿ , ಕೈ ಬೀಸಿದಾಗ ನಿಲ್ಲಿಸಿದ ಹತ್ತರಲ್ಲೊಂದು ಬೈಕು ಹತ್ತಿಕೊಂಡು ಮಡಿಕೇರಿಯಿಂದ  ಬೆಂಗಳೂರಿನ ನನ್ನ ವಠಾರ ತಲುಪುವುದರಲ್ಲಿ ಮಧ್ಯಾನ್ಹವಾಗಿತ್ತು. ವಠಾರದ ಗಂಡಸರೆಲ್ಲ ಕೆಲಸಕ್ಕೆ ಹೋಗಿದ್ದರು ,ಹೆಂಗಸರೆಲ್ಲ ರಾತ್ರಿ ಮುಗಿಯದ ಬೆಳಗು ಶುರುವಾಗದ ಮೂರಕ್ಕೆ ಎದ್ದು ಸರದಿಯಲ್ಲಿ ನಿಂತು  ನೀರನ್ನು ಹಿಡಿದ ಶ್ರಮ ಸರಿದೂಗಲು ನಿದ್ದೆಗೆ ಶರಣಾಗಿದ್ದರು . ಸದ್ಯ ಬದುಕಿದೆ!! ನನ್ನ ಕೆದರಿದ ಕೂದಲು ಕೆಂಪಾದ ಕಣ್ಣು ಕಂಡು ಅವರುಗಳು ಪ್ರತಿಯೊಬ್ಬರ ಮನೆಯ ಬಾಗಿಲಿನ ಪಾಲಿನಂತೆ ಕೇಳಿದ್ದ ಪ್ರಶ್ನೆಗಳನ್ನೇ ಅಡಿಗಡಿಗೆ ನಿಲ್ಲಿಸಿ ಕೇಳಿದ್ದರೆ ಸುಟ್ಟ ನನ್ನೆದೆಯ ವಾಸನೆ ಅವರ ಮೂಗಿಗೂ ಬಡಿದು,ನೀರಿಡಿಯುವ ಕಾಲಕ್ಕೆ ನನ್ನ ವಿಚಾರ ಕಥಾ ಕಾಲಕ್ಷೇಪವಾಗಿ ನಾನು ನಿದ್ದೆಗೆಟ್ಟ ಜಾವಗಳನ್ನು ಕಳೆಯಬೇಕಿತ್ತು .




ರೂಂ ನೊಳಕ್ಕೆ ಬಂದವನೇ ಬ್ಯಾಗ್ ಬಿಸಾಕಿ ಕುಕ್ಕುರುಬಡಿದೆ,ಮೊಬೈಲ್ ಬಡಿದು ಕೊಳ್ಳಲಾರಂಬಿಸಿತು. ನಾನು ಉತ್ತರಿಸುವುದಿಲ್ಲ ಆದರೂ ಅದು ಬಡಿದು ಕೊಳ್ಳಲೇ ಬೇಕು,ಅದಕ್ಕೆ ಅದನ್ನು ಆನ್ ಮಾಡಿಯೇ ಇಟ್ಟಿರುತ್ತೇನೆ !!ಅವರು ಪ್ರಯತ್ನಿಸುತಿದ್ದಾರೆ ನಾನು ಬೇಕಂತಲೇ ಸಿಗುತ್ತಿಲ್ಲ ಎಂಬ ಸಂತೋಷ ನನ್ನದಾಗಬೇಕು !!ಒಮ್ಮಿಂದೊಮ್ಮೆಲೆ ಎಲ್ಲವೂ ನೆನಪಾಗಿ ಅಳು ಒತ್ತರಿಸಿ ಬಂದು ಬಿಕ್ಕಿ ಬಿಕ್ಕಿ ಅತ್ತೆ ಅಳುತ್ತಲೇ ಇದ್ದೆ ಸಾಕೆನಿಸಿ, ತಲೆ ಗೋಡೆಗೆ ಒತ್ತಿ ಮುಷ್ಟಿಗಟ್ಟಿ ನೆಲಕ್ಕೆ ಒತ್ತುವಾಗ ಹೊಟ್ಟೆಯೊಳಗೆನೋ ಸಂಕಟ ವಾಕರಿಕೆ...ಸರಸರನೆ ತೆವಳಿ ಹೋಗಿ ರೂಂ ನ ಎರೆಡು ಗೋಡೆ ಸೇರಿಸಿ ಕಟ್ಟಿರುವ ತ್ರಿಕೋನ ಒಂದಡಿ ಅಡ್ಡ ಕಟ್ಟೆಗೆ ಕೈ ಕೊಟ್ಟು ಮುಖ ಬಚ್ಚಲಿಗೆ ಬಾಗಿಸಿದೆ 



   ವಿಕಾರ ಸದ್ದು ಮೈ ತುಂಬಾ ಬೆವರಿನ ವಿನಃ ಬೇರ್ಯಾವ ಬೆಳವಣಿಗೆ ಆಗದೇ ಸಮಾಧಾನ ಸಿಗದೇ ಹಾಗೆಯೇ ಹಿಂದಕ್ಕೆ ಎದ್ದು ಪಕ್ಕದ ಗೋಡೆಗೆ ಒರಗಿ ಕುಳಿತುಕೊಳ್ಳುವಾಗ ಟೇಬಲ್ ಮೇಲಿದ್ದ , ಬೇರೆಯವರ ಬದುಕಲ್ಲಿ ನಡೆದದ್ದು ತನ್ನ ಮೇಲೆ ಬರೆಸಿಕೊಳ್ಳುವ  ಡೈರಿ ದೊಪ್ಪನೆ ಬಿತ್ತು!! “ 


   “ ಎಲ್ಲವನ್ನೂ ದಾಖಲಿಸುವ ನಿನಗೆ ನೆನ್ನೆ ನಡೆದದ್ದನ್ನು ಬರೆಯುವ ತಾಕತ್ತು   ಇದೆಯಾ ?” ಎಂದು ಅಣಕಿಸಿದಂತಿತ್ತು , ಅದರ ಅಣಕು ನನ್ನ ಬೆಂಡೆದ್ದ ಮೈಗಾ?   ಬೆಂದೆದ್ದ ಮನಸ್ಸಿಗಾ? ಅರ್ಥವಾಗಲಿಲ್ಲ , ಡೈರಿಯನೆತ್ತಿ ಹಾಗೆಯೇ ಕಣ್ಣಾಡಿಸುತ್ತಾ ಹೋದೆ .......ಕೆಂಧೂಳು ನನ್ನ ಸುತ್ತಾ ಆವರಿಸಿಕೊಳ್ಳುತಿರುವಂತೆ ಭಾಸವಾಗುತ್ತಾ ...ಹೋಯಿತು .                    
                                        
   

                                                 **************


 
ಲೇ ಮಗ ಈ ಬಣ್ಣದ ಹುಚ್ಚು ಬೇಡ ಕಣ್ಲಾ , ಫಸಲು ಮಾರಿದ್ ದುಡ್ದನಾಗೆ ರವಷ್ಟು ಖರ್ಚ್ ಮಾಡಿ ಪರದೆ ಮ್ಯಾಗೆ ನೋಡಕ್ಕೆ ಚೆನ್ನ ಆಟೆಯಾ ...
ಹುಂ ಕಣ್ಲಾ ನಿಮ್ ಅಪ್ಪಯ್ಯ ಏಳ್ದಂಗೆ ವಸಿ ಕೇಳೋದು ಕಲಿ. ಬೇಸ್ದ್ವಾರ ನಿನ್ ಮಾವ ಬಂದಿದ್ದ ಸಿನಿಮ ಗಿನಮ ಅಂತ ವೋಂಟ್ರೆ ಜಗ್ದಿಶಂಗೆ ಗಿರಿಜನ್ ಕೊಡಾಕಿಲ್ಲ ಬ್ಯಾರೆ ಕಡೆ ಲಗ್ನ ಮಾಡ್ ಕೊಡ್ತೀನಿ ಅಂತ ಯೇಳಿ ಉಣ್ಣಾಕ್ಕೂ ನಿಲ್ದೆ ವಂಟ್ ವೋದ
ಅಪ್ಪಯ್ಯ ನ ಮಾತಿನ ಹಿಂದೆ ಅವ್ವ ನ ಮಾತು ಅವ್ವನ ಮಾತು ಮುಗಿಯುವುದರಲ್ಲಿ ಅಪ್ಪಯ್ಯನ ಮಾತು ನಮ್ಮ ಕೇರಿ ಕೊನೆಯಲ್ಲಿದ್ದ  ಸಾಕವ್ವನ ಮನೆಯಲ್ಲಿ ಮುಂದಿನ ಮಾರಿ ಹಬ್ಬಕ್ಕೆ ಮೀಸಲಾಗಿದ್ದ ಕೋಳಿ ಕೂಗುವರೆಗೂ ಮುಂದುವರೆದು ಇದ್ರ ಮ್ಯಾಗೆ ನಿನ್ನಿಷ್ಟ ದೊಡ್ಡವ್ರ ಮಾತು ಮೆಟ್ಟಿಗಿಂತ ಕಡೆಯಾದರೆ ಆಳಾಗ್ ವೋಯಿತೀಯ ಎಂಬ ಆಶಿರ್ವಾದೊಂದಿಗೆ ಮುಕ್ತಾಯ ವಾಯಿತು. ಅಪ್ಪಯಂಗೆ ಹಾಳು ಬೀಳುವ ಜಮೀನಿನ ಚಿಂತೆಯಾದ್ರೆ ಅವ್ವನಿಗೆ ಅಣ್ಣನ ಮಗಳು ಕೈ ತಪ್ಪಿ ಹೋಗುವ ಆತಂಕ. 
ಆದರೆ ..., ನನಗೆ ಸಿನೆಮಾ ನಿರ್ದೇಶಕನಾಗಬೇಕೆಂಬ ಮಹತ್ವಾಕಾಂಕ್ಷೆ
ಮಾತ್ರ  !!
                                                                                       

  ************* ಮುಂದುವರೆಯುವುದು 




                                                                                              ಚಿತ್ರ - ಕೃಪೆ : ಗೂಗಲ್ ಇಮೇಜಸ್