Sunday, 30 June 2013

ಭಗ್ನ ಪ್ರೇಮ ಪತ್ರ

ಬದುಕಿನ ತುಂಬಾ ಸುಖ ತುಂಬಿ 
ನೆಮ್ಮದಿ ಹೊಂಗೆ ಮರದ ನೆರಳಂತಾಗಿ 
ನಗು ಪಾರಿಜಾತ ಪುಷ್ಪಧಾರೆಯಾಗಿ 
ಶಾಂತಿ ಸಣ್ಣ ಸದ್ದಿಗೂ ಬಿಡದೆ ಬಿದ್ದು ಕೊಂಡಾಗ
 
ಬದುಕು ನೀರಸವೆನಿಸಿ 
ಹಿತ ನೋವನರಸಿ ಹೊರಟಾಗ 
ನೆರವಿಗೆ ಬಂದದ್ದು 
ಭಗ್ನ ಪ್ರೇಮವಾದರೂ ಸುರಕ್ಷಿತವಾಗಿದ್ದ 
"
ಅವಳ " ಪ್ರೇಮ ಪತ್ರದ ಸಾಲುಗಳು

" ಗುಲಾಬಿ " ಪ್ರೀತಿನಾ

ಬರ್ತಾ.. ಬರ್ತಾ..ಯಾಕೋ ಕಾಣೆ
ಕಾಣೆಯಾಗ್ತಾ ಹೋದೆ ನೀನೆ
ತಪ್ಪು ನಂದೇನ ..ಇಲ್ಲ ನಿಂದೇನ

ಹೆಂಗೇ ಆದ್ರೂ ಬರ್ತಾನ್ ಹಿಂದೆ
ಕೈಯ ಕಟ್ಟಿ ನಿಲ್ತಾನ್ ಮುಂದೆ
ಭಾವ ನಿಂದೇನ ..ಸೋಲು ನಂದೇನ


ಇಲ್ಲ ಹಂಗೇನಿಲ್ಲ ಸುಮ್ಕೆ ಅನಂಗಿಲ್ಲ
ನಂದು ಮನ್ಸು ನಿಂದು ಮನ್ಸು
ನೋವು ನಂದೇನ ..ಮೌನ ನಿಂದೇನ


ಮಾತು ಇಲ್ಲ ಮುಂದ್ಕು ಬರಲ್ಲ
ಹಿಂಗೇ ಆದ್ರೆ ಬದ್ಕೂ ಇಲ್ಲ
ಬೆಲ್ಲ ನಿಂಗೇನ .. ಬೇವು ನಂಗೇನ


ಹೂವ ಬುಟ್ಟು ಕಾಯಿ ಕಟ್ಟದೆ
ಹಣ್ಣು ಕೊಡದೆ ಬಾಡಿ ಹೋಗೊ
ನಮ್ದು " ಗುಲಾಬಿ "  ಪ್ರೀತಿನಾ


                                                             ಚಿತ್ರಕೃಪೆ:ಗೂಗಲ್ ಇಮೇಜಸ್  

Friday, 21 June 2013

ಚಿತೆಯ.. ಕಾಯುವ.. ಕಾಯಕ


ಅಯ್ಯೋ ನಿನಗಾಗಿ ಕಾದು ಸಾಕಾಯಿತು 
ನಾ ಹೋಗುವೆ ನನಗಾಗಿ ಕಾಯುತಿರುವರ 
ಬಳಿಗೆ - ಬೇಸರಿಸದಿರು 
ಇದ್ದರೆ  ಅಲ್ಲಿಯೇ ಅವರು ನನಗಾಗಿ 
ಬದುಕುವೆನು ನಾ ಅವರಳೊಂದಾಗಿ !!
ಬೇಸತ್ತು ಅವರೂ ಹೋಗಿದ್ದರೆ ಮುಂದೆ 
ನೀ ಬರಬೇಡ ನನ್ನ ಹಿಂದೆ
ಬರುವೆ - ನುಡಿವೆ - ಹೋಗಿ ಮತ್ತೆ ಬರುವೆ 
ನೀ ಹೋಗುವುದು ನಾ ನಿಂತಾಗ 
ನೀ ಮತ್ತೆ ಬರುವುದು ನಾ ಹೊರಟು ನಿಂತಾಗ!!
ನಾ ನಿನಗಾಗಿ ಕಾದಿದ್ದು ನಿನ್ನಾಣೆ ನಿಜವಾದರೆ 
ನೀ ನನ್ನಾಣೆ ಹಚ್ಚದಿರು ನನ್ನ ನಿತ್ಯವೂ 
ಚಿತೆಯ ಕಾಯುವ ಕಾಯಕಕ್ಕೆ !!

                                                          ಚಿತ್ರಕೃಪೆ:ಗೂಗಲ್ ಇಮೇಜಸ್ 


ಮಡಿ – ಮೈಲಿಗೆ

ದೇವರ ನೆಡದ ಭೂಮಿ ಯಾವುದು

ಹೆಣ ಊಳದ ನೆಲ ಯಾವುದು
ಅವನಿಗೆ ಪಾಯಕ್ಕೆ-ಇವನ ಕಾಯಕ್ಕೆ
ತೋಡುವುದು ಅನಿವಾರ್ಯ !

ಅರ್ಥ ಮಾಡಿಕೊಳ್ಳದ ಬದುಕಲ್ಲಿ
ಆಡಂಬರ ಪೀತಾಂಬರದ ಕಚ್ಚೆ ಕಾರ್ಯ
ಅಳಿದುಳಿದ ಅನಾಹುತಗಳಿಗೆ
ಮದ್ಯೆ ಮದ್ಯ ಪ್ರಾಯಶ್ಚಿಥಾರ್ತಾಯ !

ಇಲ್ಲಿ ಎಲ್ಲವೂ ಮೈಲಿಗೆ,
ಜೀವ ಜೀವನದುದ್ದಕ್ಕೂ ಬರುವ
ಮೈ ನಾಲಿಗೆ ಗಲ್ಲಗಳಿಗೆ!

ತುತ್ತು ಕೊಟ್ಟ ಕೈಗೆ - ಮುಕ್ಕಿ ಮೇಯ್ದ ಬಾಯ್ಗೆ  
ಮುತ್ತು ಕೊಟ್ಟ ತುಟಿಗೆ - ಇತ್ತು ಹೀರಿದ ನಾಲಿಗೆಗೆ
ಇಲ್ಲ ಮೈಲಿಗೆ !

ಮಣ್ಣು ಸುರಿವ ಮೆರವಣಿಗೆಯ ಜೊತೆಗಾರ
ಮನಗೆ ಮರಳಿದೊಡನೆ ಸುರಿಯನೇ
ಮುಡಿಯಿಂದ ಅಡಿವರೆಗೆ ತಣ್ಣೀರ !

ನೆಂದ ಮೈಗಿದೋ ಪುಳಕ
ನೊಂದ ಮನಸ್ಸಿಗಿನ್ನು ಅಳುಕು

ಮಡಿಯೋ ಮೈಲಿಗೆಯೋ ಮಾಗಿಯ ಚಳಿ ಚಳಿಯೋ....!!

                                                         ಚಿತ್ರಕೃಪೆ:ಗೂಗಲ್ ಇಮೇಜಸ್      

Thursday, 20 June 2013

ಕನವರಿಕೆ 6

ಜಗದೀಶ ...ಜಗದೀಶ ಬಾಗಿಲು ತೆಗೆಯೋ ..ಒಂದೇ ಸಮನೇ ಬಾಗಿಲು ಬಡಿಯುತಿರುವ ಸದ್ದಿಗೆ ಒಂದೇ ಬಾರಿಗೆ ಎಚ್ಚರಗೊಂಡ ನನಗೆ , ನೆನ್ನೆಯ ನೆನಪುಗಳಿಂದ ಹೊರಬರಲು ಅರೆ ಕ್ಷಣ ಬೇಕಾಯಿತು. ನಡೆದ್ದುದೆಲ್ಲವ ದಾಖಲಿಸಲೆಂದು ಕೈಗೆತ್ತಿಕೊಂಡಿದ್ದ ಡೈರಿಯ ಹಾಳೆಗಳೆಲ್ಲ ಅಂಗಾತ ಬಿದ್ದು ನನ್ನ ಅವಳ ಪರಿಚಯ ಆದ ಮೊದಲ ದಿನದ ಪುಟಕ್ಕೆ ಬಂದು ನಿಂತಿದ್ದವು.  ಚಿಟ್ಟೆ ಬಾಗಿಲು ಬಡಿಯುತ್ತಲೇ ಇದ್ದ ವಠಾರ ವಾದ್ದರಿಂದ ಹೆಚ್ಚು ಹೊತ್ತು ಮಾಡುವ ಹಾಗೂ ಇಲ್ಲ ಹೋಗಿ ತೆರೆದೆ. ಏನೊಂದು ಮಾತನಾಡದೆ ಒಳ ಬಂದು ಕುಳಿತ , ಬಹಳ ಹೊತ್ತಿನವರೆಗೆ ಇಬ್ಬರ ನಡುವೆ ಮಾತಿಲ್ಲ.

“ ಅವ್ರು ಬೇರೆ ಡೈರೆಕ್ಟರ್ ನ ನೋಡ್ಕೊಂಡಿದ್ದಾರೆ “
“ ಯಾರದು “ ನನ್ನ ಪ್ರಶ್ನೆ , ಸತ್ತವನಿಗೆ ತನ್ನ ಶವ ಸಂಸ್ಕಾರ ಯಾರು ಮಾಡಿದರೆಂದು ತಿಳಿಯುವ ಕುತೂಹಲ!!....ಹಾಳಾದ್ದು . “ ನಿಮ್ಮ ಧಾರಾವಾಹಿ ನಿರ್ದೇಶಕರೇ ಮಾಡ್ತಿದ್ದಾರೆ , ನನಗೂ ಹೇಳದೆ ಬರೋ ಅಂತ್ತಾದ್ದು ಏನಾಯಿತು “ ಹೌದಲ್ಲವೇ ಹಸಿ ಬಿಸಿ ಮಾತು ಕೇಳಿದ ನನ್ನ ಮನಸ್ಸು ಅಲ್ಲಿಂದ ಹೊರಡುವಾಗ ನನ್ನೊಡನೆ ಬಂದಿದ್ದ ಚಿಟ್ಟೆಯನ್ನು ಮರೆತು ಹೋಗಿತ್ತು !! ಚಿಟ್ಟೆ ಯತ್ತ ಕ್ಷಮಿಸುವಂತೆ ನೋಟ ಬೀರಿ , ಮಡಿಕೇರಿ ಯ ನಿರ್ಮಾಪಕರ ಕೊಟಡಿ ಬಳಿ  ನಾನು ಕೇಳಿದ್ದು, ಕಂಡದ್ದು ಅವಳಿಗೆ ಬೈದದ್ದು ಎಲ್ಲವನ್ನು ವಿವರಿಸಿ “ ಸಿನೆಮಾದಲ್ಲಿ ಅಭಿನಯಿಸೋ ನಿನ್ನ ಆಸೆ ಈಡೇರಿಸಕ್ಕೆ ಆಗಲಿಲ್ಲ ಸಾರಿ “ ಅಂದೆ. “ ಅಯ್ಯೋ ಅದು ಹಾಳಾಗ್ ಹೋಗ್ಲಿ ,  ಏನು ಎತ್ತ ಅಂತ ಯಾರೊಬ್ಬರಿಗೂ ತಿಳಿಸ್ದೆ ನೀನು ಬರಬಾರದಿತ್ತು . ಅಲ್ಲೆಲ್ಲಾ ಈಗ ಏನ್ ಹೇಳ್ತಿದ್ದಾರೆ ......” ಮಾತನ್ನು ನುಂಗಿಕೊಂಡು “ ಮುಂದೆ ಏನ್ ಮಾಡ್ಬೇಕು ಅಂತ್ತಿದ್ದೀಯ “ ಅದಕ್ಕೆ ಉತರಿಸದೆ “ ಹಿರೋಯಿನ್ ಜೊತೆ ಅಸಭ್ಯವಾಗಿ ವರ್ತಿಸಿದ ಅದಕ್ಕೆ ಓಡಿಸಿದ್ವಿ ಅಂದ್ರಾ ...?” ಪ್ರಶ್ನೆ ಮಾಡಿದೆ , ಈಗ ಉತ್ತರಿಸದೆ ಇರುವ ಸರದಿ ಚಿಟ್ಟೆಯದು, “ ನಾನು ಊಹಿಸಿದ್ದೆ ಬಿಡು” ಅಂದೆ, ವಿಷ್ಯ ಮುಂದುವರಿಸಲು ಇಷ್ಟವಿಲ್ಲದ ಚಿಟ್ಟೆ “ ಏನಾದ್ರೂ ತಿಂದ್ಯಾ ಇಲ್ವಾ ?” ಎಂದು ಕಾಳಜಿ ತೊರಿಸಲು ಮುಂದಾದ “ ಹಸಿವಿಲ್ಲ ..ಅಥವಾ ಆಗ್ತಾ ಇರೋದು ಗೊತ್ತಾಗ್ತಾ ಇಲ್ಲ “ ಅಂದೆ ಆದರೆ ನನಗೆ ಆ ವಿಚಾರ ಇನ್ನು ಹೆಚ್ಚು ಮಾತನಾಡುವುದು ಬೇಕಿತ್ತು ಹಾಗಂತ ಮನಸ್ಸು ಬಯಸುತ್ತಿತ್ತು!!ಅವಕಾಶ ಕೊಡದ ಚಿಟ್ಟೆ ಜೇಬಿನಿಂದ ಇನ್ಲ್ಯಾಂಡ್ ಪತ್ರ ತೆಗೆದು “ ಅಪ್ಪಯ್ಯನಿಗೆ ಪತ್ರ ಬರೀ ಉಗಾದಿಗೆ ಊರಿಗೆ ಬರ್ತಾ ಇದ್ದೀನಿ ಅಂತ ತಿಳ್ಸು . ನಾನಲ್ಲ ನೀನು “ ನಾನು ಮತ್ತೇನೋ ಹೇಳುವಷ್ಟರಲ್ಲಿ
“ ಉಸ್ರೆತ್ ಬ್ಯಾಡ ಸುಮ್ಕೆ ಬರೀಲ , ಅಬ್ಬಕ್ಕೆ ಜಾತ್ರೆಗೆ ಹಳ್ಳಿಗ್ ವೋಗಿ ಬಂದು ಮಾಡಿದ್ರೆ ಕಳ್ಳಿ ಆಲ್ಗು
 ಕರುವಿನ್ ಆಲ್ಗು ಯತ್ಯಾಸ ಗೊತ್ತಾಗಿರೋದು . ಲೇ ನಾವ್ ಹೆಣ್ ಆಗ್ ವುಟ್ಲಿ ಗಂಡಾಗ್ ವುಟ್ಲಿ ವುಟಕ್ಕೆ ಮುಂಚೆನೇ ನಮ್ಮ ಹಿರೀರು ನಮ್ಮ  ಲಗ್ನ ನಿಶ್ಚಯ ಮಾಡಿಕಿರ್ತಾರೆ ಅಂತ ವಂಸ ನಮ್ದು ಅಂತಾದ್ರಾಗೆ ಕಟ್ ಕೊಳಕ್ಕೆ ಮುಂದೆಯಾ ನೂರ್ ಮಗ್ಗಲಾಗೆ ಬಿದ್ದ್ ಮೂರೊತ್ತು  ಬೆದೆಗ್ ಬೀಳೋ  ಬೆರೆಕೆ ಮುಂಡೇವು ನಮಗೆ ಆಗ್ ಬತ್ತವೆನ್ಲಾ.... ಊರ್ನಾಗೆ ಓಡಾಡ್ಕೊಂಡು ಮೇಯ್ದ ಅಸನ ಕೊಟ್ಟ್ಗೆ ಗೆ ಕಟ್ಟಿ ಸಾಕಕ್ ಆಗಕಿಲ್ಲ. ಅವ್ವ ಅಪ್ಪಯ್ಯ ನ ವೊಟ್ಟೆ ಉರ್ಸಿದ್ ಸಾಕು , ಅವ್ರ ಇನ್ನು ಉಸ್ರು ಬುಟ್ರೆ ನಿನ್ ಬಾಳು ಬೇಲಿ ಮುಳ್ಳಾಗೊಯತತೆ. ಸುಮ್ಕೆ ಪತ್ರ ಬರದು ಉಗಾದಿ ಗೆ ಉರ್ ಸೇರ್ಕೋ. ನಿಂಗ್ ತಿನಕ್ ಏನಾದ್ರ ತಕೊಂಡ  ಬತ್ತೀನಿ ಅಷ್ಟ್ರಾಗ್ ಬರದು ಮುಗ್ಸು “ ರಾಜಾಜ್ಞೆಯಂತೆ ಒಂದೇ ಸಮನೆ ಹೇಳಿ ಮೊದಲ ಬಾರಿ ನನ್ನ ಚೆಡ್ಡಿ ಗೆಳೆಯ ಚಿಟ್ಟೆ ಯಾಗಿ ಬೆಂದೆದೆಯ ಮೇಲೆ ಬೈಗುಳುದ ತಂಪಾದ ಮಳೆ ಸುರಿಸಿ  ಹೊರಟು ಹೋದ. ಆಶ್ಚರ್ಯ !! ಅವನು ಹಾಗೆಯೇ ತೆರೆದು ಬಿಟ್ಟು ಹೋದ ಬಾಗಿಲಿನಿಂದ ಬೀಸುತಿರುವ ಗಾಳಿ ನನ್ನದೆಯೋಳಗೆಲ್ಲ ಸುಳಿದಾಡಿ ಸುಟ್ಟಿದ್ದ ಹರಿವುಗಳನೆಲ್ಲ ತಂಪಾಗಿಸುತಿದೆ!!ರಾಡಿಯಾಗಿದ್ದ ನನ್ನ ಮನಸ್ಸು ಅವಳೆಡೆಗೆ ಚಿಟ್ಟೆ ಯಾಡಿದ್ದ ಕಟು ಮಾತುಗಳ ಕೇಳಿದ ನಂತರ ತಿಳಿಯಾಗುತಿದೆ!!ನನ್ನೊಳಗಿದ್ದ ಅವಳ ಜಾಗದಲ್ಲೀಗ ಧಿವ್ಯ ನಿರ್ಲಕ್ಷ್ಯ ಮತ್ತು ತಿರಸ್ಕಾರದ ಭಾವ ಆಸೀನವಾಗಿ ಜಗತ್ತಿನೆಡೆಗೆ ಮುಗುಳ್ನಗುತ್ತಿವೆ..!
ಪತ್ರ ಕೈಗೆತ್ತಿಕೊಂಡು ವಿಳಾಸ ವಿವರ ವಾಗಿ ಬರೆದು ವಿಷಯ ಒಂದೇ ಸಾಲು ಬರೆದೆ “ ಉಗಾದಿಗೆ ಮುಂಚೆ ಊರಿಗೆ ಬರುತಿದ್ದೇನೆ “ ಪತ್ರ ಅಂಟಿಸುವ ಮುಂಚೆ ನೆನಪಾದರು ಬೇಕಂತಲೇ ಗಿರಿಜಳ ಬಗ್ಗೆ ಬೆರೆಯಲಿಲ್ಲ.!!
ಮಹತ್ವಾಕಾಂಕ್ಷೆ ಹೊತ್ತು ಸೋತು ಮರಳಿದವನ ಗೆಲ್ಲುವವಳು ಅವಳೇ ಏನೋ .......................

.........ಮುಗಿಯಿತು                             ಚಿತ್ರ ಕೃಪೆ:ಗೂಗಲ್ ಇಮೇಜಸ್ 


Sunday, 16 June 2013

ತಂದೆ..ನಾ ಅರಿಯದಾದೆ

ಎಷ್ಟೊಂದು ಹಿತ ಸುಖವಿತ್ತು ತಂದೆ
ನಿಮ್ಮ  ದುಡಿಮೆ ನಮ್ಮ ಹಿರಿಮೆಯ ಹಿಂದೆ
ಬೆಲೆ ಅರಿಯದೆ ಬಾಲಕ  ಸಿಡುಕುತಿದ್ದೆ
ಕಷ್ಟಕ್ಕೆ ಕಿವಿಗೊಡದೆ ನಿತ್ಯವೂ  ಕಾಡುತಿದ್ದೆ 
ಶೆಟ್ಟರ ಅಂಗಡಿ  ಹಲಗೆ  ಬಳಪ ತೆತ್ತವನು ನೀನು
ಶಾಲೆಯ ಅಂಗಳ  ಅ ಆ ಇ ಈ ಕಲಿತವನು ನಾನು

 ಹಗಲಲ್ಲಿ ಕಂಡ ಲಗೋರಿ ಬಯಲಲ್ಲಿ
ಇರಳು ಕೂರಲು ಹಲವಾರು ಭಯ
ಪುಕ್ಕಲನಿಗೆ ಪಹರೆ ಕೋಲು ನಿನ್ನದು
ಅನುಮಾನದ "ಅಪ್ಪ ಅಪ್ಪಾ " ನನ್ನದು
ಹೇಡಿ ಸಂತಾನವೆಂದು ನೀನು ಬಿಡಲಿಲ್ಲ
ಬಲಿಷ್ಟ ಬಾಹುವಿಗಾಗಿ ಬೆನ್ನು ಸವೆಸಿದೆಯೆಲ್ಲ

 ಅದೆಷ್ಟು ದೀಪಾವಳಿ ಗೋಳು ಹೊಯ್ದುಕೊಂಡಿಲ್ಲಾ
ಮೂರೇ ಸರ ಕುದುರೆ ಪ್ರತಾಪವಿಲ್ಲದ ಮತಾಪು
ಸುರ್ರ್ ಬತ್ತಿ ಉರಿಯದೇ ಕಳೆದ ವರ್ಷದ್ದು ಸಾಬೀತು
ವಾರಕ್ಕೆ ಬರ್ತಿಯಾಗುವಷ್ಟು ಚಿನ್ಕುರಳಿ ಪಟ್ ಪಟಾಕಿ
ಅಮ್ಮನೆದುರು ಬೈದು ನಿಮ್ಮೆದುರು ಅಳುವಾಗ
ಅಂಧರ ಕಥೆ ಹೇಳಿ ಪಟಾಕಿ ಸದ್ದಡಗಿಸಿದಿರಲ್ಲ
ಅಂಕ ತಿದ್ದಿದ ಪದ್ದಿಗೆ ಪ್ರೇಮ ಪತ್ರ ಬರೆದ
ಬೆರಳುಗಳಿಗೊಮ್ಮೆಯೂ  ಹೊಡೆಯಲಿಲ್ಲ
ಬೇಸರದ ಮುಖ ಹೊತ್ತು ಬದುಕು ತೋರಿಸಿದಿರಿ
ಕಿಸೆಗೆ ಕೈ ಹಾಕಿದ ಮಗ ಚಟಕ್ಕೆ ಬಲಿಯಾದನೆಂದು
ಹಾದಿಬದಿಯವರ ಮುಂದೆ ರಂಪ ಮಾಡಲಿಲ್ಲ
ನೌಕರಿಯ ನೀಡಿಸಿ ದುಡಿಮೆಯ ಧನ್ಯತೆ ತಿಳಿಸಿದಿರಿ

ನಿಮ್ಮೊಲುಮೆಯ ಮೂವತ್ತು ಸಂವತ್ಸರ ಅರ್ಪಿಸಿ
ನನ್ನೊಲುಮೆಯ ತೋರಲು ಹತ್ತು ಮಾತ್ರ ಬಿಟ್ಟಿರಿ
ಒಬ್ಬಟ್ಟು ಗೋಡಂಬಿ ಗಸಗಸೆ  ಘಮವ ನಮಗಿತ್ತು
ಗೋದಿ ನುಚ್ಚೆ ಅಚ್ಚುಮೆಚ್ಚಾಗಿ ಕಾಲ ದೂಡಿ ಬಿಟ್ಟಿರಿ
ಸಂಸ್ಕಾರದ ಖರ್ಚೂ ತಲೆಯಮೇಲೇರಲು ಬಿಡಲಿಲ್ಲ
ದೇಹವರಿಯುವವರಿಗೆ ದಾನ ನೀಡಿ ಹೊರಟೇ ಬಿಟ್ಟಿರಲ್ಲ
 ಬೆಳೆದು ನಿಂತ ಮಗ ಸುಡುಗಣ್ಣು ಬಿಟ್ಟು ಕೇಳುತಿದ್ದಾನೆ 
ನನಗೆ ನೀವೇನು ಕೊಟ್ಟಿರಿ ? ನನಗೆ ನೀವು ನೆನಪಾದಿರಿ
ಕಣ್ಣ ತುಂಬಾ ನಿಮ್ಮ ಋಣದ  ರುಚಿಯ ನೀರು ಹರಡಿದೆ
ಭಾವ ಮಬ್ಬಾಗಿ ಭರವಸೆ ಕಪ್ಪಾಗಿ ಗಲ್ಲ ಉಪ್ಪುಪ್ಪಾಗಿದೆ
ಎಷ್ಟೊಂದು ಹಿತ ಸುಖವಿತ್ತು ತಂದೆ..ನಾ ಅರಿಯದಾದೆ  


ನಿನ್ನ ದುಡಿಮೆ ನಮ್ಮ ಹಿರಿಮೆಯ ಹಿಂದೆ..ನೀ ದೈವವಾದೆ


                                                     ಚಿತ್ರಕೃಪೆ:ಗೂಗಲ್ ಇಮೇಜಸ್   

Monday, 10 June 2013

ನಾನೇಕೆ ನನಸಾಗಲಿಲ್ಲ!!?

ಮೊನ್ನೆ ಬಂದು ಹೋದ ಕನಸು
ನೆನ್ನೆ ಮತ್ತೆ ಮರಳಿ ಕೇಳುತಿದೆ
ನಾನೇಕೆ ನನಸಾಗಲಿಲ್ಲ!!?


ಭಯದಿ ಬೆವತಿದ್ದೇನೆ
ನಾನು ಹಕ್ಕೆಂದುಕೊಂಡಿದ್ದು
ಪಕ್ಕೆ ತಿವಿದು ಕೇಳುತಿದೆ
ನಾನೇಕೆ ನನಸಾಗಲಿಲ್ಲ ??


ಬೇತಾಳನಂತೆ ತಲೆ
ಸಾವಿರ ಹೋಳಾಗುವ ಪ್ರಶ್ನೆ
ದಿಕ್ಕು ತೋಚದೆ - ತೋಚಿದ್ದು ಹೇಳಿದೆ
ಹಗಲಲ್ಲಿ ಬಾ....ಅದು ಬರಲೇ ಇಲ್ಲ!!!


ನಿಟ್ಟುಸಿರು ಬಿಡುವಂತಿಲ್ಲ
ನಿದ್ದೆಗೆಟ್ಟ ರಾತ್ರಿಗಳ ನಡುವೆ
ನೆಮ್ಮದಿಯ ಹಗಲು ಮಾತ್ರ
ಹೆಗಲೇರಿದ ಕನಸು ಬಗಲು ಬಿಟ್ಟು
ಹೋಗುತ್ತಿಲ್ಲ................!!
                                                     ಚಿತ್ರಕೃಪೆ:ಗೂಗಲ್ ಇಮೇಜಸ್ 

Friday, 7 June 2013

ಕನವರಿಕೆ 5

ನನ್ನ ಊಟ ಮುಗಿದು ಜೋಂಪು ಹತ್ತ ತೊಡಗಿತು , ಅವಳಿನ್ನು ಬಂದಿಲ್ಲ, ಬರುವವರೆಗೂ ನಾನು ನಿದ್ರೆ ಹತ್ತಿರ ಬಿಟ್ಟುಕೊಳ್ಳುವುದಿಲ್ಲ ಎಂದು ಹಟಕ್ಕೆ ಬಿದಿದ್ದರು ನನಗರಿವಿಲ್ಲದಂತೆ ನಿದೆಗೆ ಜಾರಿ ಯಾವುದೋ ಕೆಟ್ಟ ಕನಸಿಗೆ ಬೆಚ್ಚಿ ಮೇಲೆದ್ದಾಗ ಸಮಯ ಮೂರು!! ಇನ್ನು ಮಲಗಿದರೆ ಮತ್ತೆ ಐದರ ಜಾವಕ್ಕೆ ಮೇಲೇಳುವುದು ಕಷ್ಟವೆನಿಸಿ ಮೇಲೆದ್ದು ಮುಖಕ್ಕೆ ನೀರೆರೆಚಿ ಶೂಟಿಂಗ್ ಮಾಡಬೇಕಿರುವ ದೃಶ್ಯಗಳ ಒಮ್ಮೆ ನೆನೆದು ಹೊರಗೆ ಸುತ್ತಾಡಿ ಒಂದು ತಾಸು ಕಳೆಯೋಣವೆನ್ನಿಸಿ ಹೊರಕ್ಕೆ ಬಂದು ಹಾಗೇ ಅಡ್ಡಾಡ ತೊಡಗಿದೆ ಕೊರೆವ ಚಳಿ ಇದ್ದರೂ ಮನಸ್ಸಿಗೆ ಹಾಯ್ ಎನಿಸಿತು. ಎಲ್ಲರ ಕೋಣೆಯಿಂದ ಬರುತಿರುವ ತರಾವರಿ ಗೊರಕೆ ಸದ್ದು ಕೆಲವು ಸಲ ನನ್ನ ಹೆಜ್ಜೆಯ ಲಯಕ್ಕೆ ತಕ್ಕಂತ್ತೆ ರೀ ರೆಕಾರ್ಡಿಂಗ್ ನೀಡುತಿತ್ತು ..ಸಾಕೆನಿಸಿ ನಾನು ಉಳಿದಿದ್ದ ಕಟ್ಟಡದಿಂದ ಹೊರಬಿದ್ದು ಸುತ್ತಲೂ ಕಣ್ಣಾಡಿಸಿದಾಗ ಅದೇ ಆವರಣದಲ್ಲಿ ಇನ್ನೂ ದೀಪಗಳು ಉರಿಯುತಿರುವ ನಮ್ಮದಕ್ಕಿಂತ ಚೆಂದವಿರುವ ಕಟ್ಟಡ ಕಣ್ಣಿಗೆ ಬಿತ್ತು !
ಬಂದಾಗ ಕಂಡಿರಲಿಲ್ಲವೇಕೆ ?? ಪವರ್ ಹೋಗಿದ್ದು ನೆನಪಾಯಿತು . ಅತ್ತ ಹೆಜ್ಜೆ ಹಾಕಿದೆ ,ಕಟ್ಟಡಕ್ಕೆ ಹತ್ತಿರವಾದಂತೆಲ್ಲ ನಿಶ್ಯಬ್ದ ಮಲಿನವಾಗುತ್ತ ಮಾತುಕತೆಯ ಸದ್ದು ಅಸ್ಪಷ್ಟವಾಗಿ ಕೇಳುತ್ತಾ ..ಕುತೂಹಲ ಹೆಚ್ಚುತ್ತಾ ಶಬ್ದವೇಧಿ ವಿದ್ಯೆ ಕಲಿತವನ ಹಾಗೆ ಕೊಟಡಿಯ ಕಿಟಕಿಯ ಬಳಿ ಹೋಗಿ ನಿಂತೆ. ಮಾಧಕ ನಗು ಬೆರೆತು ನರಳುವ ದ್ವನಿಯಲ್ಲಿ 
ಟೈಂ ಆಯಿತು ಹೊರಡ್ತೀನಿ .. ಬೆಳಗ್ಗೆನೇ .ಶೂಟಿಂಗ್ ಅಂತ ಹೇಳಿದ್ದಾರೆ ಅವಳೇ..! ಅವಳೇ...!! ನನ್ನವಳೇ..!!! ನನಗೆ ನಂಬಿಕೆ ಬಂದರೂ ಒಪ್ಪಲು ತಯಾರಿಲ್ಲ ಅವಳಲ್ಲದೆ ಹೋಗಲಿ ದೇವರೇ....ಪ್ಲೀಸ್ .................... ಲೇಟಾದ್ರೆ ಎಲ್ಲಾ ಎದ್ದುಬಿಡ್ತಾರೆ ಡೈರೆಕ್ಟರ್ ಗೆ ಎಚ್ಚರವಾದ್ರೆ ಎಡವಟ್ಟು..
ಇಲ್ಲ ನಾನು ಎಚ್ಚರವಾಗಿದ್ದೇನೆ ಆದರೆ ತುಂಬಾ ತಡವಾಯಿತು ನಂಗೆ ಎಚ್ಚರ ಆಗೋದು , ನಿದ್ದೆಯಲ್ಲೇ ಸತ್ತು ಹೋಗಬಾರದಿತ್ತೆ ಎನಿಸಿತು.
ಇನ್ನು ಹತ್ತು ದಿವಸ ಇಲ್ಲೇ ಇರ್ತೀವಲ್ಲ ...
ನುಲಿದು ನುಡಿದಳು ನನ್ನವಳು ಛೆ!! ಅಲ್ಲಲ್ಲಾ ಅವಳು. ಇನ್ನು.., ಇನ್ನು, ಹತ್ತು ದಿವಸದ ಹಾದರ!! ಖಂಡಿತ ನಾನಿಲ್ಲಿ  ಇರಲಾರೆ ಈ ಕ್ಷಣವೇ ಓಡಿ ಹೋಗಬೇಕೆನಿಸಿತು ಆದರೆ ಹಾಗಾಗಲಿಲ್ಲ ಅಲ್ಲಿ ಮಾತು ಮುಂದುವರೆಯಿತು ಅಮ್ಮ ಬೇಗ ಬಂದು ಬಿಡು ಅಂತ ಕಳ್ಸಿದ್ದಾರೆ ಅಯ್ಯೋ ನಿಮ್ಮ ಅಮ್ಮನೂ ಇದರಲ್ಲಿ ಭಾಗಿಯಾ ..?? ಧಾರಾವಾಹಿಯ ಚಿತ್ರೀಕರಣದ ದ್ರುಶ್ಯವೊಂದರಲ್ಲಿ ನಿನ್ನ ಸೀರೆಯ ಸೆರಗು ಪಕಕ್ಕೆ ಜರುಗಿದಾಗ ನನ್ನ ಕಿವಿಯಲ್ಲಿ ಮೆಲ್ಲಗೆ ಹೇಳಿ ಸರಿಪಡಿಸಿದವರು!,ನಾವೆಲ್ಲಾ ಪ್ರವಾಸಕ್ಕೆ ಹೋದಾಗ ಯಾವ್ದಕ್ಕೂ ಇರಲಿ ಎಂದು ನಿನ್ನ ಜೊತೆ ಬಂದವರು!ಮ್ಯಾನೇಜರ್ ಫಾರ್ವರ್ಡ್ಡೆಡ್ ಮೆಸೇಜ್ ಕಳುಹಿಸಿದಾಗ ನಿರ್ಮಾಪಕರಿಗೆ ದೂರಿತ್ತು ಅವನನ್ನು ಮನೆಗೆ ಕಳುಹಿಸಿದವರು ! ನಮ್ಮೆಜಮಾನ್ರಿಗೆ ಇವಳು ಆಕ್ಟ್ ಮಾಡೋದು ಇವತ್ಗೂ ಇಷ್ಟವಿಲ್ಲ ಎಂದವರು !! ಎಲ್ಲವೂ ನೆನಪಾಗಿ ಯಜಮಾನರ ಬಗ್ಗೆ ಹೇಳಿದ ಮಾತಷ್ಟೇ ಸತ್ಯವಿರಬೇಕು ಎನ್ನಿಸಿತು. ಅಲ್ಲಿಂದ ಹೊರಡಬೇಕು ಅಷ್ಟರಲ್ಲಿ ... ನಿಮ್ಮ  ಅಮ್ಮನೇ ನಿದಾನಕ್ಕೆ ಕಳ್ಸಿ ಅಂತ ಹೇಳಿ ಫ್ಹಾರಿನ್ ವಿಸ್ಕಿ ಬಾಟ್ಲು ತಗೊಂಡು ಹೋದರು , ಈಗ ನೀನು ಹೋಗಿ ಬಾಗ್ಲು ಬಡಿದ್ರು ಅವರ್ಗೆ ಎಚ್ಚರ ಆಗಲ್ಲ , ಸರಿ ಹೋಗು, ನಿದಾನಕ್ಕೆ ಎದ್ದೇಳು ಬೆಳಗ್ಗೆ ನಿನ್ ಸೀನ್ ಹಾಕೊಬೇಡ ಅಂತ ಅಸೋಸಿಯೇಟ್ ಗೆ ಹೇಳಿದ್ದೀನಿ ಅವನೇ! ಅವನೇ...!! ನನ್ನ ನಿರ್ಮಾಪಕನೇ...!!! ಹೇಳಿದ್ದು ಈ ಮಾತನ್ನ ನಾ ಒಪ್ಪುವ ನಾಯಕಿಯನ್ನು ತರುತ್ತೇನೆಂದು ಹೇಳಿ ಅವನು ಅರ್ಪಿಸಿಕೊಂಡು ಬಿಟ್ಟಿದ್ದ !! ತಲೆ ಸುತ್ತಿದಂತಾಗಿ ತೂರಾಡುತ್ತಾ ಪಕ್ಕದಲ್ಲೇ ಹೋಗಿ ನುಣುಪಾದ ಕಲ್ಲಿನ ಮೇಲೆ ಒರೆಗಿ ಸಾವರಿಸಿಕೊಂಡೆ ಅರೆ ಕ್ಷಣದ ನಂತರ ತಿಳಿಯಿತು ಅದು ಕಲ್ಲಲ್ಲ ನಿರ್ಮಾಪಕನ ಫಾರ್ಚುನರ್ ಕಾರು. ತೆರೆಯಿತು ಬಾಗಿಲು ಹೊರ ಬಂದ ಅವಳು ಹಿಂಬದಿಯ ಬೆಳಕಿಂದ ಸಿಲ್ಲೋಟನಲ್ಲಿದ್ದಳು
ಅವನಿಗೆ ಬಾಯ್ ಹೇಳದೆ ತೋಳಿಂದ ಅವನ ಕುತ್ತಿಗೆಯ  ಬಳಸಿ ಅವಳು ನೀಡಿದ್ದ ಶಬ್ದ ನೀರವತೆಯಲ್ಲಿ ನೂರೆಂಟು ಬಾರಿ ಪ್ರತಿಧ್ವನಿಸಿತು ನನಗೆ !! ಅವಳೀಗ ಸರ ಸರನೆ ನಡೆಯುತ್ತಿರುವ ಆಕೃತಿಯಷ್ಟೆ ಅವಳನ್ನು ಹಿಂಬಾಲಿಸಿ ಕೊಂಚ ಸಮಯದ ನಂತರ ಕೆಮ್ಮಿದೆ, ಬೆಚ್ಚಿ ತಿರುಗಿದವಳು,  
ಹಾಯ್ ಚಿನ್ನ.., ಯಾಕೇ ನಿದ್ದೆ ಬರಲಿಲ್ಲವೇನೋ... ಎಷ್ಟು ಬೇಗ ಎದ್ದಿದ್ದೀಯ ಚಳಿ ಕೊರಿತಾ ಇದೆ ಹೊರಗೆ ಇದ್ದಿಯಲ್ಲ ನಾಳೆ ಶೂಟಿಂಗ್ ಟೈಮ್ನಲ್ಲಿ ಹೆಚ್ಚು ಕಮ್ಮಿ ಆದ್ರೆ ಹೋಗು ರೂಂ ಗೆ ಎಷ್ಟು ಸರಾಗವಾಗಿ ಯಾವ ಆತಂಕವೂ ಇಲ್ಲದೇ ನುಡಿದಳು !! ಇದು ಇವಳಿಗೆ ಮಾತ್ರ ಸಾದ್ಯ! ನಿಂಗೆ ಮೈ ಚಳಿ ಬಿಟ್ಟಿರಬೇಕು ... ಯಾವಾಗ್ ಬಂದೇ ಒಂದು ಪೋನ್, ಮೆಸೇಜ್ ಇಲ್ಲ ...ಪ್ರೊಡ್ಯುಸರ್ ರೂಂ ನಿಂದ ಬಂದೇ ... ಅವಳ ಮುಖದಲ್ಲಿ ಆಗುವ ಬದಲಾವಣೆ ನೋಡಲೆಂದೇ ವಿಷಯಾನ್ತರಿಸಿ ಪ್ರಶ್ನೆಗಳ ಮಾಡಿದೆ. ಭಾವನೆ ಇದ್ದರೆ ತಾನೇ ಬದಲಾವಣೆ!!
ಅಯ್ಯೋ ಚಿನ್ನ ಮದ್ಯಾನ್ಹ ಊಟಕ್ಕೆ ಹೋದಾಗ ಮೊಬೈಲ್ ಪ್ರೊಡ್ಯುಸರ್ ಕಾರನಲ್ಲೇ ಬಿಟ್ಟಿದ್ದೆ ಅದಕ್ಕೆ ಪೋನ್ ಆಗ್ಲಿ ಮೆಸೇಜ್ ಆಗ್ಲಿ ನಿಂಗೆ ಮಾಡಕ್ಕೆ ಆಗಲಿಲ್ಲಾ , ಅಮ್ಮ ನಿಗೆ ಅಪ್ಪಂಗೆ ಪೋನ್ ಮಾಡ್ಲಿಲ್ಲ ಅಂದ್ರೆ ನಿದ್ದೇನೆ ಬರಲ್ಲ ಅದಕ್ಕೆ ಮೊಬೈಲ್ ಇಸ್ಕೊಂಡು ಬಾ ಅಂತ ಕಳ್ಸಿದ್ರು .. ಅಯ್ಯೋ ನನ್ನ ಗಿಣಿಯೇ ಬೇರೆಯವರ ಬರೆದ ಸಂಭಾಷಣೆ ಒಪ್ಪಿಸಕ್ಕೆ ಕನಿಷ್ಠ ಎರೆಡು ಟೇಕ್ ತಗೋತಿದ್ದೆ ಸುಳ್ಳನ್ನ ಎಷ್ಟು ಲೀಲಾ ಜಾಲವಾಗಿ ಹೇಳ್ತೀಯೇ ಬಿಡವನಲ್ಲ ನಾನು ಹೇಗೆ ನರಳಸ್ತೀನಿ ನೋಡು ಎಂದು ಕೊಂಡು ಮೊಬೈಲ್ ಕೊಡು ನಾನೊಂದು ಪೋನ್ ಮಾಡಬೇಕಿತ್ತು ಎಂದೆ ,  ಕಾರಲ್ಲಿ ಇದೆ, ತುಂಬಾ ನಿದ್ದೆ ಬೆಳಗ್ಗೆ ಕೊಡ್ತೀನಿ ಅಂದ್ರು ಪ್ರೊಡ್ಯೂಸರ್ ಅದಕ್ಕೆ ಹಾಗೇ ಬಂದೇ . ಅಂದಳು . ಸಿಟ್ಟು ನೆತ್ತಿಗೇರಿ ,ಸಹನೆ ಹಳ್ಳ ಹಿಡಿದು
,ದವಡೆ ಅರೆದು ಕೆನ್ನೆಗೆ ಬಾರಿಸಿಯೇ ಬಿಟ್ಟೆ ...
ಪಾತರಗಿತ್ತಿ ಶೂಟಿಂಗ್ ಲೋಕೇಶನ್ ನಲ್ಲಿ ಟಾಯ್ಲೆಟ್ ಸರಿ ಇಲ್ಲ ಅಂತ ಕೂಗಾಡ್ತಿದ್ದೆ , ನಿನ್ನ ಬಾಡಿನೆ ಟಾಯ್ಲೆಟ್ ಅಲ್ಲೇ ಕಿರುಚಿದೆ ಹೌ ಡೆರ್ ...ಯೂ ... ಮತ್ತಷ್ಟು ಜೋರಾಗಿ ಅರುಚಿದವಳು ನನ್ನ ಕೆನ್ನೆಗೂ ಹೊಡೆದಳು.
ನಿನ್ನಂಥವಳನ್ ಪ್ರೀತಿಸಿದನಲ್ಲ ನಾನು ಮುಟ್ಟಾಳ
ನಾನ್ ಹೇಳಿದ್ನ ನಿಂಗೆ ಪ್ರೀತಿಸಕ್ಕೆ
ನೀನ್ ನಾಟಕ ಆಡದೆ
ಹಾಗ್ ಅಂದ್ಕೊಂಡಿದ್ದು ನಿನ್ ತಪ್ಪು
ಮುಚ್ಚೇ ಬಾಯಿ
ಯೂ ಶಟ್.. ನಮ್ಮಿಬ್ಬರ ಗದ್ದಲ ಗಲಾಟೆ ಕೇಳಿ ನಾವಿದ್ದ ಕಟ್ಟಡದ ದೀಪಗಳೆಲ್ಲಾ ಹತ್ತಿಕೊಂಡು ಒಬ್ಬೊಬ್ಬರಾಗಿ ಬರುತಿದಂತೆ, ಅಲ್ಲಿಯವರೆಗೂ ಉರಿಯುತಿದ್ದ ನಿರ್ಮಾಪಕನ ಕಟ್ಟಡದ ದೀಪ ತಟಕ್ಕನೆ ಆರಿತು. ಎಲ್ಲರೂ ಸೇರಿ ಯಾಕೇ ಏನಾಯಿತು ಎನ್ನುತಿದ್ದಾಗ ಈ ಸಿನೆಮಾ ಡೈರೆಕ್ಟರ್ ನೀನೆ ಆದ್ರೆ ನಾನು ಆಕ್ಟ್ ಮಾಡಲ್ಲ ಇಟ್ಸ್ ಏ ಚಾಲೆಂಜ್ ಎಂದಳು ಹೊಗೆಲೇ ನಿನ್ನ ದಾನದಿಂದ ಸಿಗೋ  ಸೌಭಾಗ್ಯ ನನಗೂ ಬೇಕಿಲ್ಲಾ ಎಂದು ಮಾರ್ಮಿಕವಾಗಿ ಹೇಳಿ ಯಾರ ಮಾತಿಗೂ ನಿಲ್ಲದೇ ಅಲ್ಲಿಂದ ಹೊರಟೇ ಬಿಟ್ಟೆ .

*****ಮುಂದುವರೆಯುವುದು            ಚಿತ್ರಕೃಪೆ : ಗೂಗಲ್ ಇಮೇಜಸ್  

Tuesday, 4 June 2013

ಮಾತು ಮುಗಿಯಿತು:ಮೂಡಲಿ ಬದುಕು.

"ಪ್ರೀತಿಸಿದ್ದೆ" ಎಂದೊಮ್ಮೆ ನೀ ..
ಹೇಳಿದ್ದರೆ ಸಾಕಿತ್ತು ನನಗೆ
ತೋಳ್ಗೆ ತೋಳ್ ಬಳಸಿ ನಾ ..
ಬಂಧಿಸಿ - ಬಂಧಿಯಾಗುತಿದ್ದೆ


ನಿನ್ನೆದೆಯಲ್ಲಿ ನಾನಿದ್ದೆನಾ.!!
ಕದ್ದು ನೋಡಲಾಗಲಿಲ್ಲ
ಮನ್ನಿಸು.

ನನ್ನೆದೆಗೂಡಿತ್ತು ಖಾಲಿ ನೆನ್ನೆ!!
ಇಂದು ಹರಾಜಿನಂಗಡಿಯಲ್ಲಿ
ಕ್ಷಮಿಸು.

ಮನೆಯೊಡೆಯ ತಂದೆಯಂತೆ
ಮರು ಮಾತನಾಡಬಾರದಂತ್ತೆ
ಹೆತ್ತವಳವಳು  ಹಿತೈಷಿಯಂತೆ
ತವರ ಬಾಗಿನದ ಕೈ ಬಿಡದಂತ್ತೆ


ನರಳದಿರು ಗೆಳೆಯಾ.. ಇರುಳು
ನೀ..ಹಗೆಯ ಹಗಲಲ್ಲಿ ಬೆವತಿದ್ದೀ
ನಾ..ಹೊನಲ ರಾತ್ರಿಗೆ ಜಾರಿದ್ದೇನೆ
ಮಾತು ಮುಗಿಯಿತು: ಮೂಡಲಿ ಬದುಕು.


ನಿಶೆಗೆ ಶರಣಾಗುವ ಹುಡುಗೀ..
ನೀ ಮಾತು ಮುಗಿಸಿ ಬಿಟ್ಟಿದ್ದೀಯಾ
ನಶೆಗೆ ಮರುಳಾಗುವ ಹುಡುಗಾ..
ನಾ ಮತ್ತು ಮರೆತು ಕೇಳುತಿದ್ದೇನೆ

ಎನ್ನೆದೆಗೊರಗಿ ನೀ ಕೇಳಿದ್ದ  ಸದ್ದು
ಅವನೆದೆಯ ಬಡಿತದಲ್ಲೂ ಮಿಡಿದಿದೆಯಾ ..?
ಗಟ್ಟಿಮೇಳಕೆ ಕಣ್ಣ ಹಣತೆಯಲ್ಲಾಡಿದ ಭಾವ
ಅಂತಃಪುರ ಕನ್ನಡಿಯಲ್ಲಿನ್ನೂ ಮೂಡಿದೆಯಾ..??


ಮಾತು ಮುಗಿಯಿತು:ಮೂಡಲಿ ಬದುಕು.


                           ಚಿತ್ರಕೃಪೆ:ಗೂಗಲ್ ಇಮೇಜಸ್ 

Monday, 3 June 2013

ಕನವರಿಕೆ 4

ನಮ್ಮಿಬ್ಬರನ್ನು ಕಂಡರೆ ಸೆಟ್ನಲ್ಲಿ ಹಲವರಿಗೆ ಹೊಟ್ಟೆಕಿಚ್ಚು , ನನ್ನ ಬಗ್ಗೆ ಅವಳಿಗೆ ಅವಳ ಬಗ್ಗೆ ನನಗೆ ಹೇಳಿ ಫಲ ಸಿಗದೇ ಸುಮ್ಮನಾದರು. ನಿರ್ದೇಶಕರು ಕೆಲವು ಬಾರಿ ಯಾವ್ಯವುದಕ್ಕೋ ಸಿಡುಕಿದರಾದರೂ, ನಿರ್ಮಾಪಕರು ಅವಳ ಬಗ್ಗೆ ನನ್ನ ಬಳಿಯೇ ವಿಚಾರಿಸುವುದನ್ನು ಕಂಡು ಇತ್ತೀಚೆಗೆ ಪೇಮೆಂಟ್ ಕೂಡ ನನ್ನ ಕೈಗೆ ಕೊಟ್ಟು ಅವಳಿಗೆ ತಲುಪಿಸುವುದನ್ನು ಕಂಡು ತೆಪ್ಪಗಾದರು. ನನ್ನವಳಿಗೆ ಹೊಸದೊಂದು ಮೊಬೈಲ್ ಕೊಡಿಸಿದ್ದೇನೆ.
ಅವಳ ಮನೆಯಿಂದ ಬರುವ  ಸೋಡ ಹಾಕಿಲ್ಲದ ಊಟದಲ್ಲಿ ನನ್ನ ಪಾಲು ಇದೆ! ಹಲವಾರು ಬಾರಿ  ಅವಳ ಮನೆಗೆ ಹೋಗಿ ಹರಟಿದ್ದೇನೆ, ಹಾಗೇ ಬರುತ್ತಾ ಬ್ಯಾಂಕಿಗೆ ಅವಳ ಚೆಕ್ ಕೂಡ ಹಾಕಿದ್ದೇನೆ ಕೂಡ . ಅವಳಿಗೆ ಶೂಟಿಂಗ್ ಇಲ್ಲದಿರುವ ದಿನವೂ ನನಗೆ ತಿಂಡಿ ಊಟದ ಸಮಯಕ್ಕೆ ಪೋನ್ ಮಾಡಿ ವಿಚಾರಿಸಿ ಸೆಟ್ಟಿನ ಎಲ್ಲಾ ವಿಚಾರ ತಿಳಿದುಕೊಳ್ಳುತ್ತಾಳೆ . ನಡುರಾತ್ರಿಯವರೆಗೂ ನನಗೆ ಮಾತಿನಲ್ಲಿ, ನಗುವಿನಲ್ಲಿ ,ಲಾಲಿ ಹಾಡಿ ನನ್ನ ಮಲಗಲು ಹೇಳಿ ತಾನು ನಿದ್ದೆಗೆ ತೆರಳುತ್ತಾಳೆ . ನಾವೆಂದಿಗೂ ಒಬ್ಬರಿಗೊಬ್ಬರು ಪ್ರೀತಿಸುತ್ತೇವೆ ಎಂದು ಹೇಳಿಲ್ಲ ಆದರೆ ಇಷ್ಟೆಲ್ಲಾ ಆದ ಮೇಲೆ ಪ್ರೀತಿ ಆಣೆ ಪ್ರಮಾಣದ ಮಾತಿಗೆ ಆ ದೇವರು ಒತ್ತಾಯಿಸಲಾರ 
ಎಂಬುದು ನನ್ನ ಬಲವಾದ ನಂಬಿಕೆ. ನಂಬಿಕೆ ಸುಳ್ಳಾಗಲಿಲ್ಲ ಕಿರುತೆರೆಯ ವಲಯದಲ್ಲಿ ನಮ್ಮಿಬ್ಬರ ವಿಚಾರವಾಗಿ  ಕಿರಿದಾಗಿ ಹರಡಿದ್ದ ಗುಸು ಗುಸು ಬಗ್ಗೆ ನಾನು ಹೆಮ್ಮೆ ಪಡುತಿರುವಾಗಲೇ  ಒಂದು ದಿನ ಸತ್ಯ ನಾರಾಯಣ ಪೂಜೆಯ ಪ್ರಸಾದ ನೀಡಿ ಅವಳಾಗಿಯೇ ಕೇಳಿಬಿಟ್ಟಿದ್ದಳು ಮದುವೆ ಯಾವಾಗ ಮಾಡ್ಕೋತೀಯ? ಅನಿರೀಕ್ಷಿತ ಪ್ರಶ್ನೆಗೆ ಏನು ಹೇಳಬೇಕೆಂಬ ಗೊಂದಲ ಹಾಗು  ಸಂತೋಷದಲ್ಲಿ ಮೊದಲು ಸಿನೆಮಾ ನಿರ್ದೇಶಿಸ ಬೇಕು ಆಮೇಲೆ ಮದುವೆ ಎಂದು ಅವಳನ್ನೇ ನೋಡಿದೆ ಸರಿ ಹಾಗಾದ್ರೆ ಬೇಗ ಮಾಡು .... ಕಥೆ ಇದ್ಯಾ ? ಅಂದೊಡನೆ, ಹುಮ್ಮಸ್ಸಿನಲ್ಲಿ ಕಥೆ ಹೇಳಲು ಶುರು ಮಾಡಿಯೇ ಬಿಟ್ಟೆ ಅರೆ ತಾಸು ಕೇಳಿದವಳೇ ತುಂಬಾ ಚೆನ್ನಾಗಿದೆ ಮೊದಲು ಇದನ್ನು ಈ ಧಾರಾವಾಹಿಯ ನಿರ್ಮಾಪಕರಿಗೆ ಹೇಳು ಅವರು ಸಿನೆಮಾ ಮಾಡ್ಬೇಕೂಂತ ಇದ್ದಾರೆ ಹೌಹಾರುವ ಸರದಿ ನನ್ನದು ಸಿನೆಮಾ ಮಾಡ್ತಿದ್ದಾರ ??!! ಯಾರ್ ಹೇಳುದ್ರು ?? ನಿಂಗೆ ಹೇಗೆ ಗೊತ್ತಾಯಿತು ?? ಒಂದೇ ಸಮನೆ ಕೇಳುತಿದ್ದ ನನ್ನ ಪ್ರಶ್ನೆಗಳಿಗೆ  ಜೋರಾಗಿ ನಗುತ್ತಾ  ಬ್ರೇಕ್ ಹಾಕಿ ಸೆಟ್ನಲ್ಲಿ ಮಾತಾಡಿಕೊಳ್ತಾ ಇದ್ದರು.. ನಿನಗಿಂತ ನಾನೇ ವಾಸಿ , ಸರಿ ಯಾವಗ್ ಹೇಳ್ತೀಯ ಬೇಗ ಹೇಳು ಎಂಬ ಅವಳ ಒತ್ತಾಯಕ್ಕೆ ನನ್ನ ಭಿಗುಮಾನ ವೇ  ಉತ್ತರವಾದಾಗ ಸರಿ ಇವತ್ತು ಟಿ.ಡಿ.ಎಸ್. ಸರ್ಟಿಫಿಕೆಟ್ ಕೊಡಕ್ಕೆ ಬಂದಾಗ ನಿನ್ನ ಹತ್ರ ಒಳ್ಳೇ ಕಥೆ ಇದೆ ಅಂತ ನಾನೇ ಹೇಳ್ತೀನಿ ಅವ್ರು ಕರದ್ರೆ ಸಂಕೋಚ ಪಟ್ಕೋ ಬೇಡ ಹೋಗಿ ಹೇಳು .. ಕಾಸ್ಟ್ಯೂಮ್ ಚೇಂಜ್ ಮಾಡಿ ಬರುತ್ತೇನೆಂದು ಹೇಳಿ ಒಳಗೆ ಹೋದಳು . ನನ್ನ ನಿರ್ದೇಶಕನಾಗಿ ಮಾಡಿ ಅವಳು ಸಾರ್ಥಕತೆ ಪಡೆಯುತ್ತಿರುವ ಪರಿ ಕಂಡು ನನಗೆ ಕಣ್ಣು ತುಂಬಿ ಬಂತು . ಅವಳು ಹೇಳಿದಂತೆಯೇ ಆಯಿತು , ನಿರ್ಮಾಪಕರು ಕಥೆ ಕೇಳಿದರು, ಕೊಂಡಾಡಿದರು, ಮೂರ್ನಾಲ್ಕು ಮಂದಿಗೆ ಹೇಳಿಸಿದರು, ಮೂರೇ ವಾರದಲ್ಲಿ ಮುಹೂರ್ತ ದ ದಿನ ಗೊತ್ತು ಮಾಡಿ ನಿಮಗೊಪ್ಪುವ ನಾಯಕಿಯನ್ನು ನಾನೇ ಹುಡುಕುತ್ತೇನೆ ಎಂದು ಇಪ್ಪತೈದು ಸಾವಿರ ನೀಡಿದರು !! ನಾನು ಸಿನೆಮಾ ನಿರ್ದೇಶಕನಾಗುತಿದ್ದೇನೆ!!

ಮಹೂರ್ತ !! ಅವ್ವ ,ಅಪ್ಪಯ್ಯನಿಗೆ ,ಹಳ್ಳಿಯವರಿಗೆ ಯಾರಿಗೂ ವಿಷ್ಯ ತಿಳಿಸಿರಲಿಲ್ಲ ಪೇಪೆರ್ನಲ್ಲಿ ಪೋಟೋ ಸಮೇತ ಸುದ್ದಿ ನೋಡಿ ನನ್ನ ಛಲ ಎಂಥದ್ದು ತಿಳಿದು ಕೊಳ್ಳಲಿ ಎಂದು ಸುಮ್ಮನಿದ್ದೆ . ಸಿನೆಮಾ ನಂಬಿ ಎಕ್ಕುಟ್ಟಿ ಹೋದವರ ಸಾಲಿಗೆ ನಾನು ಸೇರಲಿಲ್ಲ ಎಂದು ಮಹೂರ್ತದಲ್ಲಿ ಎದೆಯುಬ್ಬಿಸಿ ನಡೆದಾಡುತಿದ್ದೆ. ಚಿಟ್ಟೆ ಯಂತು ನನಗಿಂತ ಸಡಗರದಿಂದ ಓಡಾಡುತಿದ್ದ ಅವನಿಗೂ ಒಂದು ಪಾತ್ರ ಮೀಸಲಾಗಿಟಿದ್ದೆ. ಇದು ಅವನ ಮೊದಲ ಸಿನೆಮಾ! ನನ್ನಿಂದಲೇ ಈಡೇರಿದ್ದು, ಹೆಮ್ಮೆ ನನಗೆ .ಇಡೀ ಧಾರಾವಾಹಿಯ ತಂಡ ನನಗಿಂತ ಮುಂಚೆಯೇ ಬಂದು ನೆರೆದಿದ್ದರು.
ಒಂದ್ದಿಬ್ಬರು ಕಲಾವಿದರು ಹೂಗುಚ್ಛ ನೀಡಿ ಅವಕಾಶಕ್ಕಾಗಿ ತಮ್ಮ ನಿಷ್ಠೆ ತೋರಿದ್ದರು. ಧಾರಾವಾಹಿ ನಿರ್ದೇಶಕರು ಸ್ವಲ್ಪ ತಡವಾಗಿ ಬರುವುದರ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಎಲ್ಲರೆದರು ಅವರ ಕಾಲಿಗೆ ಬಿದ್ದಾಗಲೇ ಅವರ ನೆತ್ತಿಗೆ ಪಂಚಮಿಯ ತನಿ ಎರೆದಂತಾಗಿದ್ದು .ನಿರ್ಮಾಪಕರು, ಅವರ ನೆಂಟರಿಷ್ಟರು, ಆಮಂತ್ರಿತರು, ಹಾಗು ಪತ್ರಕರ್ತರೂ ಬಂದು ಅರೆ ಘಳಿಗೆಯ ನಂತರ ಕೇಳಿಯೇ ಬಿಟ್ಟರು ನಾಯಕಿ ಯಾರು ?  ನಾನು ಪೆಚ್ಚು ನಗೆ ಬೀರುತ್ತಾ ನಿರ್ಮಾಪಕರತ್ತ ನೋಡಿದೆ ಅವರು ಕಾದು ನೋಡಿ ಎಂದು ನಕ್ಕು ಅವರನೆಲ್ಲ ತಿಂಡಿಯತ್ತ ಕರೆದೊಯ್ಯದರು . ನನಗೆ ಯೋಚನೆ ಶುರುವಾಯಿತು ಮುಹೂರ್ತದಂದ್ದು ನಾಯಕಿಯ ದೃಶ್ಯ ಇಲ್ಲವಾದರೂ , ಮಾರನೇ ದಿನದಿಂದ ಅವಳ ದೃಶ್ಯಗಳೇ ಇದ್ದವು ಅದಕ್ಕಾಗಿ ನಾವೆಲ್ಲಾ ಮಹೂರ್ತ ಮುಗಿಸಿ ಮಡಿಕೇರಿಯತ್ತ ಹೊರಡಬೇಕಿತ್ತು . ಈ ದಿನ ನಾಯಕಿ ಇದ್ದಿದ್ದರೆ ಒಂದಷ್ಟು ಗ್ಲಾಮರ್ ಪೋಟೋಗಳ ಸಮೇತ ನಮ್ಮ ಮಹೂರ್ತ ಸುದ್ದಿಯಾಗುತ್ತಿತ್ತು .. ಛೆ ಎನ್ನುವಷ್ಟರಲ್ಲಿ ಬಂದವಳು ನನ್ನವಳು!! ತಿಳಿ ನೀಲಿ ಗಾಗರ ದಲ್ಲಿ ಬಂದವಳ ಚೆಲುವ ಸಿರಿಯನ್ನು ಹಾಗೆಯೇ ನೋಡುತ್ತಾ ನಿಂತು ಚಿತ್ರದ ನಾಯಕಿಯನ್ನೇ ಮರತೆ!! ನನ್ನವಳು ನನ್ನ ಎಚ್ಚರಿಸಿ ಹೂಗುಚ್ಛ ನೀಡಿ
ಶುಭಾಶಯ ತಿಳಿಸಿ ಕಣ್ಣಿನಲ್ಲಿ ಇನ್ನು ಏನೇನೋ ಹೇಳಿದನ್ತೆ ನನಗೆ ಅನ್ನಿಸುತಿರುವಾಗ ಅವಳು ಹೋಗಿ ತನ್ನ ಧಾರಾವಾಹಿಯ ತಂಡ ಸೇರಿಕೊಂಡಳು. ಯಾವ ಅಡ್ಡಿ ಆತಂಕವಿಲ್ಲದೆ ಮಹೂರ್ತ ಮುಗಿದು ಮೊದಲ ಶಾಟ್ ಒಂದೇ ಬಾರಿಗೆ ಓಕೆ ಆಯಿತು. ಸುಮಾರು ಚಿತ್ರಗಳು ಹಿಟ್ ಆಗಿರುವ ಮರವನ್ನು ಹಿಂಬದಿಯಲ್ಲಿ ಇಟ್ಟು ನಾಯಕ ಆಲ್ ದಿ ಬೆಸ್ಟ್ .. ಸಕ್ಸಸ್ ನಿಮ್ಮದೇ ಎನ್ನುವ ಸಂಭಾಷಣೆಯನ್ನು ನಿರ್ಮಾಪಕರ ಅಣತಿಯಂತೆ ಚಿತ್ರೀಕರಿಸಿದ್ದೆ. ಸಿನೆಮಾದಲ್ಲಿ ಅದು ಎಲ್ಲಿ ಬರುವುದೋ ಗೊತ್ತಿಲ್ಲ !! ಪತ್ರಕರ್ತರ ಜೊತೆಗೆ ಎಲ್ಲಾ ಪ್ರಶ್ನೋತ್ತರ ಮುಗಿದು ಕೊನೆಗೆ ಹಿರಿಯ ಪತ್ರಕರ್ತ ರೊಬ್ಬರು  ನಾಯಕಿ ಯಾರೆಂದು ಈಗಲಾದರೂ ತಿಳಿಸುತ್ತೀರೋ ಅಥವಾ ಇನ್ನು ಸಿಕ್ಕಿಲ್ಲ ಅಂದುಕೊಳ್ಳೋಣವೋ  ಎಂದು ಕೇಳಿ ನನ್ನ ಮನಸ್ಸು ಹಗುರ ಮಾಡಿದರು. ನಾಯಕಿ ನಿಮಗೆ ತಿಳಿದಿರುವವಳೇ ನೀವು ಆಗಲೇ ನೋಡಿದ್ದಿರಿ ನಾನು ಅದಿಕೃತವಾಗಿ ಹೇಳಬೇಕಷ್ಟೆ ಎಂದು ಹೇಳಿದ ನಿರ್ಮಾಪಕರು ನನ್ನವಳನ್ನು ಕರೆದು ಇವರೇ ಈ ಚಿತ್ರದ ನಾಯಕಿ ಎಂದರು!!
 
ನಾನು ಈ ಸಿನೆಮಾ ಮಾಡ್ತಿರೋದೆ ಇವರಿಗಾಗಿ ಧಾರಾವಾಹಿಯಲ್ಲಿ ಇವರ ಪ್ರತಿಭೆ ನೋಡಿ ಮೆಚ್ಚಿದ್ದೇನೆ ಅದಕ್ಕಾಗೆ ಇವರನ್ನು ಕಿರುತೆರೆಯಿಂದ ಬೆಳ್ಳಿತೆರೆಗೆ ಪರಿಚಯಿಸುವ ನಿರ್ಧಾರ ಮಾಡಿದೆ
ಸಾರ್ ನನಗೆ ಈ ವಿಷ್ಯ ಹೇಳಿರಲೇ ಇಲ್ಲ ಇವತ್ತು ನಿಂಗೊಂದು ಸರ್ಪ್ರೈಸ್ ಇದೆ ಅಂತ ಕರೆಸಿ ಈಗ ಹೇಳ್ತಿದ್ದಾರೆ
ಸರ್ಪ್ರೈಸ್ ಇಷ್ಟ ಆಯ್ತಾ ?? ಪತ್ರಕರ್ತರ ಪ್ರಶ್ನೆ ಇರಬೇಕು !
ನನ್ನವಳ ಜೋರಾದ ನಗು
ಆಫ್ ಕೋರ್ಸ್ ..ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲ್ದು , ಅವ್ರು ನನ್ನ ಮೇಲೆ ಇಟ್ಟಿರೋ ವಿಶ್ವಾಸ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ
ಎಕ್ಸ್ಪೋಸ್.. ಸ್ವಿಂ ಸೂಟ್ ಓಕೆ ನಾ .. ಸರಿಯಾಗಿ ಕೇಳಿದ್ರು ನಾನು ಇದಕ್ಕೆ ಕಾಯುತಿದ್ದೆ .
ಪಾತ್ರಕ್ಕೆ ಅನಿವಾರ್ಯ ಆದ್ರೆ ನನ್ನ ಅಭ್ಯಂತರವೇನಿಲ್ಲ .. ನಿರ್ಮಾಪಕರು , ನಿರ್ದೇಶಕರು ನನಗೆ ತಿಳಿದಿರುವವರೆ ಆದ್ರಿಂದ ಅಂತಹ ಮುಜುಗರ ಆಗೋಲ್ಲ ಅಂದ್ಕೊಂಡಿದೀನಿ .. ಎಂದು ಹೊಸದೊಂದು ನಗೆ ನಕ್ಕಳು ಆ ಧಾಟಿಯ ಅವಳ  ನಗು ನನಗೆ ನಿಜವಾಗಲು ಹೊಸದು! ಮೊನ್ನೆಯಷ್ಟೇ ಅವರ ಸಾಕು ನಾಯಿಗೆ ಪೆಡಿಗ್ರೆ ತೆಗದು ಕೊಂಡು ಅವರ ಮನೆಗೆ ಹೋದಾಗ ಪೀಡಿಸಿ ಕಥೆ ಕೇಳಿ ನಾಯಕಿ ಮಳೆಯಲ್ಲಿ ನೆನೆಯುವ ದೃಶ್ಯ ಬೇಕಿತ್ತಾ ..? ನಂಗೆ ಎಕ್ಸ್ಪೋಸ್ ಮಾಡವ್ರನ್ನ ಕಂಡ್ರೆ ಅಸಹ್ಯ ಅಂದವಳು ನನ್ನವಳು ?! ಇವಳೇ ಅಲ್ಲವೇ!?....... ಪತ್ರಕರ್ತರೊಬ್ಬರು ಬಂದು ಕೈ ಕುಲುಕಿ ಹೋದರು ನಂತರ ಮತ್ತೊಬ್ಬರು..ಹೀಗೆ ಸಾಗಿತ್ತು  ನನ್ನ ಶುಭಾಶಯಗಳ ತೇರಿನ ನಡುವೆ ಅವಳ ಪೋಟೋ ಸೆಷನ್ ನ ಮೆರವಣಿಗೆ !!
ಯುನಿಟ್ ,ನಾನು, ನನ್ನವಳು ಮತ್ತು ನಿರ್ಮಾಪಕರನ್ನು ಬಿಟ್ಟು ಬಂದವರೆಲ್ಲ ಹೋಗಿ ಆಗಿತ್ತು , ಸಂಜೆ  ನಾಲ್ಕಕ್ಕೆ ಮಡಿಕೇರಿಗೆ ಹೊರಡಲು ತಯಾರಾಗ್ಬೇಕಿತ್ತು ನಿರ್ಮಾಪಕರಿಗೆ ಹೇಳಿ ಹೊರಡೋಣ ಎಂದುಕೊಂಡೆ ಅಷ್ಟರಲ್ಲಿ ಅವರೇ ಅವಳೊಡನೆ
( ನನ್ನವಳು ) ಬಂದು ಊಟಕ್ಕೆ ಕರೆದರು ಅವಳೊಟ್ಟಿಗೆ !!
ಬೇಡ ಸಾರ್ ಸಂಜೆಗೆ ಹೋಗಬೇಕಲ್ಲವೇ..? ರೂಂ ಗೆ ಹೋಗಿ ರೆಡಿ ಆಗ್ತೀನಿ ಇನ್ನಷ್ಟು ಒತ್ತಾಯಿಸಲಿ ಎಂದು ಸುಮ್ಮನೇ ಹಾಗೆ ಹೇಳಿದೆ . ಅದು ಸರಿನೇ ಹೋರಡಿ, ಬೇಗ ತಲುಪಿದರೆ ಆರಾಮಾಗಿ ನಿದ್ದೆ ಮಾಡಿ ನಾಳೆಗೆ ಫ್ರೆಶ್ ಆಗ್ ಬಹುದು , ಸಿನೆಮಾ ಚೆನ್ನಾಗಿ ಮಾಡಿ ಇದರಲ್ಲಿ ನಮ್ಮ ಹೀರೋಯಿನ್ ಭವಿಷ್ಯ ಇದೆ ಎಂದು ಬಿಟ್ಟರು ಜೋತೆಯಲ್ಲಿ ಬರಲು ಒತ್ತಾಯಿಸಲಿಲ್ಲ !! ಅವಳು ಮತ್ತೊಂದು ಹೊಸ ನಗೆ ನಕ್ಕಳು  ಹೊರಡೋಣವಾ ನಿರ್ಮಾಪಕರು ಮಾತು ಮುಗಿಸುವಷ್ಟರಲ್ಲಿ ಅವಳು ಮುಂದಡಿ ಇಟ್ಟಾಗಿತ್ತು, ನನ್ನತ್ತ ತಿರುಗಿಯೂ ನೋಡದೆ ಹೊಸ ಫಾರ್ಚುನರ್ ಕಾರ್  ಹತ್ತಿ ಹೊರಟೇ ಬಿಟ್ಟಳು!! ಅವಳಿಂದ ಮೆಸೇಜ್ ಬರುವುದೆಂದು ಮಡಿಕೇರಿಯವರೆಗೆ ಕಾದು ನೆಟ್ ವರ್ಕ್ ಸಿಗದ ಸ್ಥಳ ಸೇರಿಕೊಂಡೆ , ಎಲ್ಲಿ ಹೋಗ್ತಾಳೆ ಸಿನೆಮಾಗೆ ಬಂದವಳು ಸೆಟ್ನಲ್ಲಿ ಸಿಗದೇ ಹೋಗ್ತಾಳ? ಎಂದು ಸಮಾಧಾನಿಸಿ ಕೊಂಡೆ ........ಮುಂದುವರೆಯುವುದು            ಚಿತ್ರಕೃಪೆ: ಗೂಗಲ್ ಇಮೇಜಸ್