Thursday 9 October 2014

ಪದ ಮೂಡುವ ಮುನ್ನ ...

ಬರೆಯಲು ಕುಳಿತಾಗಲೆಲ್ಲ 
ಪದ ಮೂಡುವ ಮುಂಚೆ 
ಮುಚ್ಚಿದ್ದ ಕದವ ತಟ್ಟಿದ್ದು 
ನೆನಪಾಗುವುದು .

ನೋವು ನಲಿವಾದರೆ ಚೆನ್ನ 
ನಲಿವಿಗಾಗಿ ನೋವ ಹುಡುಕುವುದು 
ತಪ್ಪಾಗುವುದು .


ಖಾಲಿ ಹಾಳೆಯ ಮೇಲೇನಿಲ್ಲಾ 
ಆದರೇನು ಮಾಡಲಿ ಬರೆದರದು 
ತುಂಬುವುದು .

ಮುಗ್ದ ಮನಸ್ಸು ಪ್ರಸವಿಸಿ 
ತೊದಲು ರಾತ್ರಿ - ಮತ್ತೆ ಬಸುರಿ 
ಬಯಕೆಯಾಗುವುದು.

                      ಚಿತ್ರ ಕೃಪೆ : ಗೂಗಲ್ ಇಮೇಜಸ್ 

Monday 6 October 2014

ನಯನಾಯುಧ

ಆಯುಧವನೆಲ್ಲಾ 
ಪೂಜೆಗಿಟ್ಟಿದ್ದೇನೆ 
ಭಯವಿಲ್ಲ ಬನ್ನಿ 
ಎಂದೆ .....
ನಂಬಿ ಬಂದ ನನ್ನ 
ಕ್ಷಣ ಮಾತ್ರದಲಿ 

..................
..................
..................

ನಿನ್ನ ನಯನದಿಂದ
ಕೊಂದೆ ........!!



                    ಚಿತ್ರ ಕೃಪೆ : ಗೂಗಲ್ ಇಮೇಜಸ್ 

Thursday 11 September 2014

ಹುಸಿ ಬೆಸುಗೆ

ಮಳೆಯೇ .. ಮತ್ತೇಕೆ ಮರಳಿದೆ 
ಇಂದು ಸಂಜೆ ಬರುವ ಸುಳಿವ 
ನೀಡಲು ಮತ್ತದೇ ..ನೆನ್ನೆಯ ಕನಸಿಗೆ 

ನೀ..ಇಂದೂ ಹಸಿ ಮಣ್ಣ ವಾಸನೆ 
ಮರಳುಮರುಳುಮರೀಚಿಕೆ ವರ್ಣನೆ
ತಾವರೆಯಂದ ಅರಳು ಮುಂಜಾನೆಗೆ
ಇರುಳ ಅನುಕ್ಷಣದಲಿ ಉಷೆಯ ನಿರೀಕ್ಷೆಗೆ
ಹೊಸ ಉಸಿರಿನ ಜೊತೆಗೊಂದು ಬೆಸುಗೆ.

 
ನಾ..,
ಭಗ್ನ ಪ್ರೀತಿಯ ಬೇಗೆ  
ಬಿಟ್ಟು ಬಿಡು ಉರಿಯಲಿ ಹಾಗೇ ...
ಯಾರೂ "ಇರದ - ಬರದ" ಕಾಡಿನಲಿ
ಸಿಡಿದುರಿದು ನೊಂದು ಬೆಂದು ಬೇಯ್ದ
ಕಾಡ್ಗಿಚ್ಚಿನೊಡಲ ಸೌದೆಯಂತೆ.

ಮಳೆಯೇ .. ಮತ್ತೇಕೆ ಮರಳಿದೆ
 
ಇಂದು ಸಂಜೆ ಬರುವ ಸುಳಿವ 
ನೀಡಲು ಮತ್ತದೇ ..ನೆನ್ನೆಯ ಕನಸಿಗೆ.


                                             ಚಿತ್ರ ಕೃಪೆ : ಗೂಗಲ್ ಇಮೇಜಸ್ 

Thursday 28 August 2014

ನಿನ್ನೊಳು ...ನಾ

ನಿನ್ನ ಓದಲೆಂದು ಬಂದು 
ನನ್ನನ್ನೇ ತೆರೆದ ಪುಸ್ತಕವಾಗಿಸಿ 
ನಿನ್ನೆದಿರು ನಿಂತಿದ್ದೇನೆ.

ನಿನ್ನಳೆಯಲು ನಿಂತ್ತವನು 
ಅಲೆದಲೆದು ಅಂತರಾಳದಲ್ಲೇ 
ಹುದುಗಿ ಹೋಗಿದ್ದೇನೆ.


ನಿನ್ನ ಮುಗ್ಧ ಮಂದಹಾಸಕ್ಕೆ 
ಮುನ್ನುಡಿ ಬರೆಯುವಂತ್ತಾಗಿ 
ಕಾಗುಣಿತ ಕಲಿಯುತಿದ್ದೇನೆ.


ನಿನ್ನ ನಯನಕ್ಕೆ ಕಾಡಿಗೆಯ 
ಬೇಲಿ ಕಟ್ಟುವ ಬಯಕೆ ಬಂದು
ಮಾಲಿಯೇ ಆಗಿದ್ದೇನೆ. 

ನಿನ್ನ ಪುಟ್ಟ ಪಾದಕೊಂದು 
ಮೆತ್ತೆ ಹಾಸಲು ಬಯಸಿ 
ಹೊನಲಿಗಲೆಯುತ್ತಿದ್ದೇನೆ.

ನಿನ್ನ ಬಿಡದೇ ಕಾಡುವ ನಿನ್ನದೇ 
ನೆರಳ ಓಡಿಸಲು ಹಿಂಬಾಲಿಸಿ 
ಇರುಳ ಪ್ರೇಮಿಯಾಗಿದ್ದೇನೆ .
                            ಚಿತ್ರ ಕೃಪೆ : ಗೂಗಲ್ ಇಮೇಜಸ್ 

Sunday 3 August 2014

ಸ್ನೇಹ ಸಂಭ್ರಮ

ಏನಿದು ಗೆಳೆಯಾ .......ತಿ 
ನಮ್ಮಿಬ್ಬರ ಸ್ನೇಹ ಸಂಭ್ರಮಕ್ಕೊಂದು
ದಿನಾಚರಣೆಯಂತ್ತೆ !!!
ನೆನ್ನೆ? -ಮೊನ್ನೆ?-ಆಚೆ ಮೊನ್ನೆ? 
ಅದರಾಚೆಗಿನ ಹುಣ್ಣಿಮೆ?
ನಿನಗೆ ನೆನಪಿದೆಯಾ ನಮ್ಮ 
ಸ್ನೇಹ ಸಂವತ್ಸರದ ಆರಂಬ 
ಅಂತ್ಯದ ಭಯವಿದಿದ್ದರೆ 
ಆದಿಗೊಂದು ಅಡಿಗಲ್ಲು 
ನೆಡ ಬಹುದಿತ್ತು !!!
ಬಣ್ಣ ಬಣ್ಣದ ಚಿತ್ತಾರದ ದಾರ 
ಕೈ ಕಟ್ಟುವ ಮೊದಲೇ 
ನಾವು ಕಿತ್ತಾಡಿದ್ದೇವೆ-ಮತ್ತೆ 
ಸ್ನೇಹದ ಗೂಡು ಕಟ್ಟಿದ್ದೇವೆ.

ಏನಿದು ಗೆಳೆಯಾ .......ತಿ
 
ನಮ್ಮಿಬ್ಬರ ಸ್ನೇಹ ಸಂಭ್ರಮಕ್ಕೊಂದು
ದಿನಾಚರಣೆಯಂತ್ತೆ !!!
ನೀ ಮುನಿದು ಮರಳಿ ಮುಗುಳ್ನಗುವುದು 
ಇಲ್ಲಿ ಮುಳುಗಿ ಮತ್ತೆಲ್ಲೋ ಹುಟ್ಟುವ 
ಸಾವಿಲ್ಲದ ಸೂರ್ಯನಂತ್ತೆ ......ಅಲ್ಲವೇ.

Tuesday 29 July 2014

ಪ್ರೀತಿ ..............

"ಪ್ರೀತಿ" ಗೊತ್ತಿಲ್ಲದೇ
ಆಗುವುದಾ ........
ಆಗಿ ಹೋಗುವುದಾ ..
ಆದ ಮೇಲೆ ಹೋಗುವುದಾ ..
ಹೋಗಲೆಂದೇ ಆಗುವುದಾ ..

" ಪ್ರೀತಿ " ಗೊತ್ತಿದ್ದೇ
ಬರುವುದಾ .....
ತಿಳಿಯದೇ ಇರುವುದಾ.. 
ಇರುವುದನ್ನೇ ತಿಳಿವುದಾ ..
ತಿಳಿದೂ ತಿಳಿಯದನ್ತಿರುವುದಾ ..


“ ಪ್ರೀತಿ “ ಕಣ್ಣಲ್ಲಿ
ಕಾಣುವುದಾ ..
ಕಂಡದ್ದನ್ನು ಹೇಳುವುದಾ..
ಕಾಣದ್ದನ್ನು ಕಟ್ಟುವುದಾ..
ಕಣ್ಕಟ್ಟು ಕಥೆ ಎನ್ನುವುದಾ..
“ಪ್ರೀತಿ “ ಯೊಳಗೆ
ಆಣೆ ಪ್ರಮಾಣವಾ..
ಪ್ರಮಾಣದ ಪರಿಣಾಮವಾ.. 
ಪರಿಣಾಮದ ಪರಿತಾಪವಾ.. 
ಪರಿತಾಪದ ಸಂತಾಪವಾ..  


                                 ಚಿತ್ರ ಕೃಪೆ : ಗೂಗಲ್ ಇಮೇಜಸ್ 

Tuesday 22 July 2014

ಸ್ಮಶಾನ ವೈರಾಗ್ಯ ....

ಸುಖದೊಂದು ಮಾತು
ದುಃಖದೆರೆಡು ಮಾತು
ಸುಖ ದುಃಖ ಅಪ್ಪಿದೊಡೆ
ಎಲ್ಲರೋಪ್ಪುವಂತಾಯ್ತು
ದುಃಖ ಮರೆಸಿ ಸುಖ ಮೆರೆದರೆ
ಸೊಲ್ಲಿಗವನತಿಯ ಹೊತ್ತು
ಮಾತು ಹೊತ್ತು ಕಾಯುವವ
ಎಳೆದೊಡನೆ ಕಾಯ
ಕೈಲಾಸಕೆ ತೇರು
ಹಚ್ಚದಿರುವರಾ ನೆಂಟರು
ದೈವಕೆ ನೊಂದೆಣ್ಣೆಯಲ್ಲಿ  
ನೆಂದ ಹತ್ತಿ ಬತ್ತಿಯ ಪೈರು.


ಯಾರು ಮಾಡಿದರೇನು
ಚಿತೆಗೆ ಅಗ್ನಿಸ್ಪರ್ಶ
ತಿಳಿಯಲಿಕ್ಕೆ " ನಾನು "
ಅಲ್ಲಿ ಇಲ್ಲಾ ...

ಬೆಂಕಿ ಹಚ್ಚಿದ್ದು ಬರಡು ದೇಹಕ್ಕೆ
ನಿಜಕ್ಕೂ ಬೆಂದ್ದು ಹೋದದ್ದು
ಸತ್ತವನ ಸುತ್ತ ನೀರವದಿ

ನೆರೆದಿದ್ದ ಆತ್ಮಗಳಲ್ಲವೇ!! 

                                                       
                                  ಚಿತ್ರ ಕೃಪೆ : ಗೂಗಲ್ ಇಮೇಜಸ್ 


Wednesday 16 July 2014

ಸ್ವಗತ ಅನುದಿನಾ ...

ಒರಟು ನೆಲವೇ ಮನ 
ಹರಕು ಚಾಪೆಯೇ ಭಾವ 
ಕಮಟು ದಿಂಬಿನ ಕನಸು 
ಹಿಡಿದಿಟ್ಟಿದ್ದ ರಾತ್ರಿ ...

ಗಲ್ ಗೆಜ್ಜೆಯ ಮುಂಜಾನೆ 
ಕಣ್ ಕೋಲ್ಮಿಂಚು ಹರಿದು 
ಬಾಗಿಲು ಬಡಿದಾ ಸದ್ದು 
ತೆರೆದೆ ಮಾತಾಡದೇ.. 



ಒಳ ಬಂದು ಕುಳಿತು 
ಕಿಲ ಕಿಲನೆ ನಕ್ಕು 
ಬಿರ ಬಿರನೆ ಹೊರನಡೆದೆ 
ಹೇಳದೇ ..ಕೇಳದೇ..

ಬಂದು ಬಿತ್ತಿದವಳು 
ಎತ್ತ ಹೋದಳವಳು 
ಕೇಳಿತು ಅನುದಿನ 
ಎನ್ನ ಮನ ನಿನ್ನಾಣೆ ..


ತೆರೆದು ಹೊರಬಾಗಿಲು 
ಜಡಿದೆ ಒಳ ಬಾಗಿಲು 
ನಿನಗೆ ಸ್ವಾಗತ 
ನನಗೆ ಸ್ವಗತ ಅನುದಿನಾ .

                                   ಚಿತ್ರ ಕೃಪೆ : ಗೂಗಲ್ ಇಮೇಜಸ್ 

Thursday 10 July 2014

ಶ್ರಾವಣ ಸಂಜೆ .....

ಒಂದು ಸುಂದರ ಶ್ರಾವಣ ಸಂಜೆ
ನನ್ನದಾಗಲಿ ..ನಿನ್ನದಾಗಲಿ
ತನುಮನದ ಬೆಸುಗೆ ಮಳೆಗೆ
ಹೊಸಭಾವ ಬೆಳೆ ತೆನೆಯಾಗಲಿ .

ಗಂಟ್ಟಿಕ್ಕಿದ ಹುಬ್ಬು ಆಚೀಚೆ ಸರಿದು
ಬಿಸಿಉಸಿರ ಬಿಟ್ಟು ಬಿಟ್ಟೂ ಹಿಡಿದು
ನಯನನೇತ್ರದೊಳು ಸರಸ ಸಂಚಾರ
ಕುಳಿಗಲ್ಲ ಅರಳಿ ಅಧರ ಮಧು ಪಾತ್ರ


ನಾನು ನೀನೇನುತಿದ್ದ ತೋರ್ ಬೆರಳು
ಪ್ರಶ್ನೆ ಪ್ರತಿಷ್ಠೆ ಪಣವಾಗಿದ್ದ ಹೆಬ್ಬೆರಳು
ಕೊನೇ ಆಕಳು ಕಿರುಬೆರಳು ಬೆಸೆದು
ಅನಾಮಿಕದರಿವು ತೃಪ್ತಾತ್ಮಗಳ ಮದ್ಯದಲ್ಲಿ

ಒಂದು ಸುಂದರ ಶ್ರಾವಣ ಸಂಜೆ
ನನ್ನದಾಗಲಿ ..ನಿನ್ನದಾಗಲಿ
ತನುಮನದ ಬೆಸುಗೆ ಮಳೆಗೆ
ಹೊಸಭಾವ ಬೆಳೆ ತೆನೆಯಾಗಲಿ .

                                             ಚಿತ್ರಕೃಪೆ : ಗೂಗಲ್ ಇಮೇಜಸ್ 

Monday 7 July 2014

ನಾನು ... ನೀನು

ಶುಭ್ರ ಹುಣ್ಣಿಮೆಯ ಹೊನಲ ರಾತ್ರಿಗೆ
ಹಿನ್ನೀರಿನ ಬಂಡೆಯ ಮೇಲೆ
ಗಂಟೆಗಟ್ಟಲೆ ಕುಳಿತು
ಮಾತು -ಮುತ್ತು -ಮತ್ತೂ ಇರದೇ
ಹಾಗೇ ಎದ್ದು ಬಂದೆವಲ್ಲ
ಶಶಿ ಮೌನಕ್ಕೆ ಮರುಳಾಗಿ
ನಿಶೆ ನಿದ್ದೆಗೆ ಶರಣಾಗಿತ್ತು

ಸುದ್ದು ಗದ್ದಲದ ಸಂಜೆಯಲ್ಲಿ
ಪರಿಚಯದ ರಥ ಬೀದಿಯಲ್ಲಿ
ನಾನು ಈ ಬದಿ ನೀನು ಆ ಬದಿ
ನಿಂತು - ನಗದೇ - ನಗಿಸದೇ
ಹೊರಟೇ ಹೋದೆವಲ್ಲ
ಹೂ ಮಾರುವವಳ ಬುಟ್ಟಿಯಲ್ಲಿ
ಮಲ್ಲಿಗೆ ಗೇಲಿ ಮಾಡಿದಂತಾಯ್ತು


ಇಂಚರದ ಮಬ್ಬು ಮುಂಜಾನೆ
ನಾ ತಂದಿದ್ದ ಗುಲಾಬಿ ಗಿಡ
ನೀ ಕುಂಡ ಕಾಣಿಸಿದ್ದೇ ತಡ
ಬೆಳೆದು - ಬಿಟ್ಟಿದ್ದು - ಒಂದೇ ಹೂ
ಅದೂ ಬಾಡಿ ಹೋಗಿತ್ತು
ಹೊಯ್ದಾಟದಲ್ಲಿ ಹೂ ತೋಟ
ಸಾಕು ಸಾಕಾಗಿ ಬೇಡವಾಗಿತ್ತು


ಜನಸಂದಣಿಯ  ರಸ್ತೆಯಲ್ಲಿ
ಯಾರದ್ದೋ ಶವ ಯಾತ್ರೆಯಲ್ಲಿ
ಅಕ್ಕ ಪಕ್ಕ ನಡೆವ ಅನಿವಾರ್ಯತೆ
ಮೇಲೆರಿಚಿದ್ದ ಪುರಿ ಕಾಳುಗಳು
ನಮ್ಮ ಮೈ ಮೇಲೆ ಬಿದ್ದವಷ್ಟೂ 
ನಮ್ಮ ಬದುಕಿನ ಮಸಣದ ಪಯಣವ
ಬೇಡವಾದರೂ ನೆನಪಿಸುತಿತ್ತು .

                                            ಚಿತ್ರಕೃಪೆ : ಗೂಗಲ್ ಇಮೇಜಸ್ 

Thursday 3 July 2014

ನನ್ನೊಲವಿನ ಕಡೆಗೆ....

ನನಗೇನು ಬೇಸರವಿಲ್ಲ ನಿನ್ನೊಂದಿಗೆ
ಬೈದು ಕೊಳ್ಳುವುದೆಲ್ಲಾ ..ನಾ
ನಿನ್ನೆಡೆಗಿದ್ದ ನನ್ನೊಲವಿನ ಕಡೆಗೆ.

ನಾ ಚಾಚದೆ ಹೋಗಿದ್ದರೆ
ನಿನ್ನದೆಲ್ಲಿ " ಕೈ " ಕೂಡುತಿತ್ತು
ನೋಡದೇ ನಾ ಅಡಿಯಿಟ್ಟಿದ್ದರೆ
ಕುಡಿ ನೋಟಕೆಲ್ಲಿ ಕವಡೆಕಿಮ್ಮತ್ತು.

ಸುಖ ಸುಮ್ಮನಂದು ನಕ್ಕವಳು ನೀ  
ಸಖಿ ಸರಿದಳೆಂದು ಬಿಕ್ಕುವೆನು ನಾ

ಮೌನದಲ್ಲೇ ಮೆರವಣಿಗೆ ನಿನ್ನದು
ಗೆಜ್ಜೆ ಗಲ್ ಗೆ ಹೆಜ್ಜೆ ಸದ್ದು ನನ್ನದು

ಹೃದಯ ತೇರಿಗೆ ತೋರಣ ಕಟ್ಟಿ
ಇರುಳ ಹಾಡಿಗೆ  ನಾ ಮರುಳಾದೆ
ಬರುವ ತೋರಿಕೆ ತಡಿಕೆ ನೆಟ್ಟಿ
ವಿದಾಯ ವಿರಹ ನೀ ಮರಳದೇ.

ನನಗೇನು ಬೇಸರವಿಲ್ಲ ನಿನ್ನೊಂದಿಗೆ
ಬೈದು ಕೊಳ್ಳುವುದೆಲ್ಲಾ ..ನಾ
ನಿನ್ನೆಡೆಗಿದ್ದ ನನ್ನೊಲವಿನ ಕಡೆಗೆ.

                                ಚಿತ್ರಕೃಪೆ : ಗೂಗಲ್ ಇಮೇಜಸ್ 

Saturday 28 June 2014

ಯಾಕೆ ಕೊಟ್ಟೆ ದೇವರೇ ....

ಯಾಕೆ ಕೊಟ್ಟೆ ದೇವರೇ 
ಇಷ್ಟು ಬಗೆಯ ಹೂ ಗಳ 
ಒಂದೇ ಊರ ತೋಟದಲ್ಲಿ ..

ಸಣ್ಣದೊಂದು ಬಳ್ಳಿ ನೆಡು 
ಖಾಲಿ ಎದೆಯ ಬಯಲಿನಲಿ 
ಪಿಸು ಮಾತ ಹಸಿರು ಚಿಗುರಿ
ಪುಷ್ಪವೊಂದು ಅರಳಲಿ.

ಒಂಟಿ ಬಾಳ ಸರಿಸಿ ಪ್ರೇಮ ಸುರಿಸಿ
ಸುಮಕೆ ನೀಡು ಬಣ್ಣ ಬಣ್ಣದ ಕಣ್ಣು
ಕೊಟ್ಟು ನೋಡು ಕೇಳಿದವರವ 
ಮಾಲಿ ಇನ್ನು ಮಾಲೀಕನಿಗೆ ಶರಣು
 


ಕೀಳಲೊಲ್ಲೆ.. ಕೇಳಲೊಲ್ಲೆ ನಾ 
ಪರ ನಾರಿ ಸಹೋದರನಂತೆ 
ಹೂವು ಕೊಟ್ಟು ಮುಳ್ಳೂ ಬಿಡಲಿ 
ನನ್ನದೇ ಬಳ್ಳಿ "ನನ್ನೆದೆ'ಯ ಭಾವದಲಿ 

ಯಾಕೆ ಕೊಟ್ಟೆ ದೇವರೇ 
ಇಷ್ಟು ಬಗೆಯ ಹೂ ಗಳ 
ಒಂದೇ ಊರ ತೋಟದಲ್ಲಿ ....


ಚಿತ್ರಕೃಪೆ:ಗೂಗಲ್ ಇಮೇಜಸ್ 

Monday 23 June 2014

ಶ್ರದ್ಧೆ ....

ಮುಂಜಾನೆಗೆ 
ಮುಗಿದು ಹೋಗುವ 
ಭಯವಿದ್ದರೂ 
ಪ್ರತೀ ಬಾರಿ ಬರುವ 
ಅದೇ ಕನಸನ್ನು 
ಅಷ್ಟೇ ಶ್ರದ್ದೆಯಿಂದ 
ಪ್ರೀತಿಸುತ್ತೇನೆ ............ 






ಚಿತ್ರ ಕೃಪೆ : ಗೂಗಲ್ ಇಮೇಜಸ್ 

Friday 13 June 2014

ಮುಗುಳ್ನಗೆ ..ಮುಲಾಮು

ಹುಣ್ಣಿಮೆಗೊಮ್ಮೆಯಾದರು ನೀ ಬಂದು 
ಬಣ್ಣದಂಗಿಯ ಹಿಂದಿರುವ ಎದೆ ಹುಣ್ಣಿಗೆ 
ಮುಗುಳ್ನಗೆಯ ಮುಲಾಮು ಹಚ್ಚು! 


ಏಂದೂ ಮಾಯದ ಗಾಯದಂಗಳದಿ 
ನನ್ನ ಬುಜವೇರಿ ಕುಳಿತ ಕನಸುಗಳ 
ಪಾಡು ಹಾಡಾದ ಕಡಿತ ಕುರಿತಾದ 
ತುರಿಕೆಯ ತವಕ ತುಂಬುತ್ತದೆ!!


                                                     ಚಿತ್ರ ಕೃಪೆ : ಗೂಗಲ್ ಇಮೇಜಸ್