Monday, 3 June 2013

ಕನವರಿಕೆ 4

ನಮ್ಮಿಬ್ಬರನ್ನು ಕಂಡರೆ ಸೆಟ್ನಲ್ಲಿ ಹಲವರಿಗೆ ಹೊಟ್ಟೆಕಿಚ್ಚು , ನನ್ನ ಬಗ್ಗೆ ಅವಳಿಗೆ ಅವಳ ಬಗ್ಗೆ ನನಗೆ ಹೇಳಿ ಫಲ ಸಿಗದೇ ಸುಮ್ಮನಾದರು. ನಿರ್ದೇಶಕರು ಕೆಲವು ಬಾರಿ ಯಾವ್ಯವುದಕ್ಕೋ ಸಿಡುಕಿದರಾದರೂ, ನಿರ್ಮಾಪಕರು ಅವಳ ಬಗ್ಗೆ ನನ್ನ ಬಳಿಯೇ ವಿಚಾರಿಸುವುದನ್ನು ಕಂಡು ಇತ್ತೀಚೆಗೆ ಪೇಮೆಂಟ್ ಕೂಡ ನನ್ನ ಕೈಗೆ ಕೊಟ್ಟು ಅವಳಿಗೆ ತಲುಪಿಸುವುದನ್ನು ಕಂಡು ತೆಪ್ಪಗಾದರು. ನನ್ನವಳಿಗೆ ಹೊಸದೊಂದು ಮೊಬೈಲ್ ಕೊಡಿಸಿದ್ದೇನೆ.
ಅವಳ ಮನೆಯಿಂದ ಬರುವ  ಸೋಡ ಹಾಕಿಲ್ಲದ ಊಟದಲ್ಲಿ ನನ್ನ ಪಾಲು ಇದೆ! ಹಲವಾರು ಬಾರಿ  ಅವಳ ಮನೆಗೆ ಹೋಗಿ ಹರಟಿದ್ದೇನೆ, ಹಾಗೇ ಬರುತ್ತಾ ಬ್ಯಾಂಕಿಗೆ ಅವಳ ಚೆಕ್ ಕೂಡ ಹಾಕಿದ್ದೇನೆ ಕೂಡ . ಅವಳಿಗೆ ಶೂಟಿಂಗ್ ಇಲ್ಲದಿರುವ ದಿನವೂ ನನಗೆ ತಿಂಡಿ ಊಟದ ಸಮಯಕ್ಕೆ ಪೋನ್ ಮಾಡಿ ವಿಚಾರಿಸಿ ಸೆಟ್ಟಿನ ಎಲ್ಲಾ ವಿಚಾರ ತಿಳಿದುಕೊಳ್ಳುತ್ತಾಳೆ . ನಡುರಾತ್ರಿಯವರೆಗೂ ನನಗೆ ಮಾತಿನಲ್ಲಿ, ನಗುವಿನಲ್ಲಿ ,ಲಾಲಿ ಹಾಡಿ ನನ್ನ ಮಲಗಲು ಹೇಳಿ ತಾನು ನಿದ್ದೆಗೆ ತೆರಳುತ್ತಾಳೆ . ನಾವೆಂದಿಗೂ ಒಬ್ಬರಿಗೊಬ್ಬರು ಪ್ರೀತಿಸುತ್ತೇವೆ ಎಂದು ಹೇಳಿಲ್ಲ ಆದರೆ ಇಷ್ಟೆಲ್ಲಾ ಆದ ಮೇಲೆ ಪ್ರೀತಿ ಆಣೆ ಪ್ರಮಾಣದ ಮಾತಿಗೆ ಆ ದೇವರು ಒತ್ತಾಯಿಸಲಾರ 
ಎಂಬುದು ನನ್ನ ಬಲವಾದ ನಂಬಿಕೆ. ನಂಬಿಕೆ ಸುಳ್ಳಾಗಲಿಲ್ಲ ಕಿರುತೆರೆಯ ವಲಯದಲ್ಲಿ ನಮ್ಮಿಬ್ಬರ ವಿಚಾರವಾಗಿ  ಕಿರಿದಾಗಿ ಹರಡಿದ್ದ ಗುಸು ಗುಸು ಬಗ್ಗೆ ನಾನು ಹೆಮ್ಮೆ ಪಡುತಿರುವಾಗಲೇ  ಒಂದು ದಿನ ಸತ್ಯ ನಾರಾಯಣ ಪೂಜೆಯ ಪ್ರಸಾದ ನೀಡಿ ಅವಳಾಗಿಯೇ ಕೇಳಿಬಿಟ್ಟಿದ್ದಳು ಮದುವೆ ಯಾವಾಗ ಮಾಡ್ಕೋತೀಯ? ಅನಿರೀಕ್ಷಿತ ಪ್ರಶ್ನೆಗೆ ಏನು ಹೇಳಬೇಕೆಂಬ ಗೊಂದಲ ಹಾಗು  ಸಂತೋಷದಲ್ಲಿ ಮೊದಲು ಸಿನೆಮಾ ನಿರ್ದೇಶಿಸ ಬೇಕು ಆಮೇಲೆ ಮದುವೆ ಎಂದು ಅವಳನ್ನೇ ನೋಡಿದೆ ಸರಿ ಹಾಗಾದ್ರೆ ಬೇಗ ಮಾಡು .... ಕಥೆ ಇದ್ಯಾ ? ಅಂದೊಡನೆ, ಹುಮ್ಮಸ್ಸಿನಲ್ಲಿ ಕಥೆ ಹೇಳಲು ಶುರು ಮಾಡಿಯೇ ಬಿಟ್ಟೆ ಅರೆ ತಾಸು ಕೇಳಿದವಳೇ ತುಂಬಾ ಚೆನ್ನಾಗಿದೆ ಮೊದಲು ಇದನ್ನು ಈ ಧಾರಾವಾಹಿಯ ನಿರ್ಮಾಪಕರಿಗೆ ಹೇಳು ಅವರು ಸಿನೆಮಾ ಮಾಡ್ಬೇಕೂಂತ ಇದ್ದಾರೆ ಹೌಹಾರುವ ಸರದಿ ನನ್ನದು ಸಿನೆಮಾ ಮಾಡ್ತಿದ್ದಾರ ??!! ಯಾರ್ ಹೇಳುದ್ರು ?? ನಿಂಗೆ ಹೇಗೆ ಗೊತ್ತಾಯಿತು ?? ಒಂದೇ ಸಮನೆ ಕೇಳುತಿದ್ದ ನನ್ನ ಪ್ರಶ್ನೆಗಳಿಗೆ  ಜೋರಾಗಿ ನಗುತ್ತಾ  ಬ್ರೇಕ್ ಹಾಕಿ ಸೆಟ್ನಲ್ಲಿ ಮಾತಾಡಿಕೊಳ್ತಾ ಇದ್ದರು.. ನಿನಗಿಂತ ನಾನೇ ವಾಸಿ , ಸರಿ ಯಾವಗ್ ಹೇಳ್ತೀಯ ಬೇಗ ಹೇಳು ಎಂಬ ಅವಳ ಒತ್ತಾಯಕ್ಕೆ ನನ್ನ ಭಿಗುಮಾನ ವೇ  ಉತ್ತರವಾದಾಗ ಸರಿ ಇವತ್ತು ಟಿ.ಡಿ.ಎಸ್. ಸರ್ಟಿಫಿಕೆಟ್ ಕೊಡಕ್ಕೆ ಬಂದಾಗ ನಿನ್ನ ಹತ್ರ ಒಳ್ಳೇ ಕಥೆ ಇದೆ ಅಂತ ನಾನೇ ಹೇಳ್ತೀನಿ ಅವ್ರು ಕರದ್ರೆ ಸಂಕೋಚ ಪಟ್ಕೋ ಬೇಡ ಹೋಗಿ ಹೇಳು .. ಕಾಸ್ಟ್ಯೂಮ್ ಚೇಂಜ್ ಮಾಡಿ ಬರುತ್ತೇನೆಂದು ಹೇಳಿ ಒಳಗೆ ಹೋದಳು . ನನ್ನ ನಿರ್ದೇಶಕನಾಗಿ ಮಾಡಿ ಅವಳು ಸಾರ್ಥಕತೆ ಪಡೆಯುತ್ತಿರುವ ಪರಿ ಕಂಡು ನನಗೆ ಕಣ್ಣು ತುಂಬಿ ಬಂತು . ಅವಳು ಹೇಳಿದಂತೆಯೇ ಆಯಿತು , ನಿರ್ಮಾಪಕರು ಕಥೆ ಕೇಳಿದರು, ಕೊಂಡಾಡಿದರು, ಮೂರ್ನಾಲ್ಕು ಮಂದಿಗೆ ಹೇಳಿಸಿದರು, ಮೂರೇ ವಾರದಲ್ಲಿ ಮುಹೂರ್ತ ದ ದಿನ ಗೊತ್ತು ಮಾಡಿ ನಿಮಗೊಪ್ಪುವ ನಾಯಕಿಯನ್ನು ನಾನೇ ಹುಡುಕುತ್ತೇನೆ ಎಂದು ಇಪ್ಪತೈದು ಸಾವಿರ ನೀಡಿದರು !! ನಾನು ಸಿನೆಮಾ ನಿರ್ದೇಶಕನಾಗುತಿದ್ದೇನೆ!!

ಮಹೂರ್ತ !! ಅವ್ವ ,ಅಪ್ಪಯ್ಯನಿಗೆ ,ಹಳ್ಳಿಯವರಿಗೆ ಯಾರಿಗೂ ವಿಷ್ಯ ತಿಳಿಸಿರಲಿಲ್ಲ ಪೇಪೆರ್ನಲ್ಲಿ ಪೋಟೋ ಸಮೇತ ಸುದ್ದಿ ನೋಡಿ ನನ್ನ ಛಲ ಎಂಥದ್ದು ತಿಳಿದು ಕೊಳ್ಳಲಿ ಎಂದು ಸುಮ್ಮನಿದ್ದೆ . ಸಿನೆಮಾ ನಂಬಿ ಎಕ್ಕುಟ್ಟಿ ಹೋದವರ ಸಾಲಿಗೆ ನಾನು ಸೇರಲಿಲ್ಲ ಎಂದು ಮಹೂರ್ತದಲ್ಲಿ ಎದೆಯುಬ್ಬಿಸಿ ನಡೆದಾಡುತಿದ್ದೆ. ಚಿಟ್ಟೆ ಯಂತು ನನಗಿಂತ ಸಡಗರದಿಂದ ಓಡಾಡುತಿದ್ದ ಅವನಿಗೂ ಒಂದು ಪಾತ್ರ ಮೀಸಲಾಗಿಟಿದ್ದೆ. ಇದು ಅವನ ಮೊದಲ ಸಿನೆಮಾ! ನನ್ನಿಂದಲೇ ಈಡೇರಿದ್ದು, ಹೆಮ್ಮೆ ನನಗೆ .ಇಡೀ ಧಾರಾವಾಹಿಯ ತಂಡ ನನಗಿಂತ ಮುಂಚೆಯೇ ಬಂದು ನೆರೆದಿದ್ದರು.
ಒಂದ್ದಿಬ್ಬರು ಕಲಾವಿದರು ಹೂಗುಚ್ಛ ನೀಡಿ ಅವಕಾಶಕ್ಕಾಗಿ ತಮ್ಮ ನಿಷ್ಠೆ ತೋರಿದ್ದರು. ಧಾರಾವಾಹಿ ನಿರ್ದೇಶಕರು ಸ್ವಲ್ಪ ತಡವಾಗಿ ಬರುವುದರ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಎಲ್ಲರೆದರು ಅವರ ಕಾಲಿಗೆ ಬಿದ್ದಾಗಲೇ ಅವರ ನೆತ್ತಿಗೆ ಪಂಚಮಿಯ ತನಿ ಎರೆದಂತಾಗಿದ್ದು .ನಿರ್ಮಾಪಕರು, ಅವರ ನೆಂಟರಿಷ್ಟರು, ಆಮಂತ್ರಿತರು, ಹಾಗು ಪತ್ರಕರ್ತರೂ ಬಂದು ಅರೆ ಘಳಿಗೆಯ ನಂತರ ಕೇಳಿಯೇ ಬಿಟ್ಟರು ನಾಯಕಿ ಯಾರು ?  ನಾನು ಪೆಚ್ಚು ನಗೆ ಬೀರುತ್ತಾ ನಿರ್ಮಾಪಕರತ್ತ ನೋಡಿದೆ ಅವರು ಕಾದು ನೋಡಿ ಎಂದು ನಕ್ಕು ಅವರನೆಲ್ಲ ತಿಂಡಿಯತ್ತ ಕರೆದೊಯ್ಯದರು . ನನಗೆ ಯೋಚನೆ ಶುರುವಾಯಿತು ಮುಹೂರ್ತದಂದ್ದು ನಾಯಕಿಯ ದೃಶ್ಯ ಇಲ್ಲವಾದರೂ , ಮಾರನೇ ದಿನದಿಂದ ಅವಳ ದೃಶ್ಯಗಳೇ ಇದ್ದವು ಅದಕ್ಕಾಗಿ ನಾವೆಲ್ಲಾ ಮಹೂರ್ತ ಮುಗಿಸಿ ಮಡಿಕೇರಿಯತ್ತ ಹೊರಡಬೇಕಿತ್ತು . ಈ ದಿನ ನಾಯಕಿ ಇದ್ದಿದ್ದರೆ ಒಂದಷ್ಟು ಗ್ಲಾಮರ್ ಪೋಟೋಗಳ ಸಮೇತ ನಮ್ಮ ಮಹೂರ್ತ ಸುದ್ದಿಯಾಗುತ್ತಿತ್ತು .. ಛೆ ಎನ್ನುವಷ್ಟರಲ್ಲಿ ಬಂದವಳು ನನ್ನವಳು!! ತಿಳಿ ನೀಲಿ ಗಾಗರ ದಲ್ಲಿ ಬಂದವಳ ಚೆಲುವ ಸಿರಿಯನ್ನು ಹಾಗೆಯೇ ನೋಡುತ್ತಾ ನಿಂತು ಚಿತ್ರದ ನಾಯಕಿಯನ್ನೇ ಮರತೆ!! ನನ್ನವಳು ನನ್ನ ಎಚ್ಚರಿಸಿ ಹೂಗುಚ್ಛ ನೀಡಿ
ಶುಭಾಶಯ ತಿಳಿಸಿ ಕಣ್ಣಿನಲ್ಲಿ ಇನ್ನು ಏನೇನೋ ಹೇಳಿದನ್ತೆ ನನಗೆ ಅನ್ನಿಸುತಿರುವಾಗ ಅವಳು ಹೋಗಿ ತನ್ನ ಧಾರಾವಾಹಿಯ ತಂಡ ಸೇರಿಕೊಂಡಳು. ಯಾವ ಅಡ್ಡಿ ಆತಂಕವಿಲ್ಲದೆ ಮಹೂರ್ತ ಮುಗಿದು ಮೊದಲ ಶಾಟ್ ಒಂದೇ ಬಾರಿಗೆ ಓಕೆ ಆಯಿತು. ಸುಮಾರು ಚಿತ್ರಗಳು ಹಿಟ್ ಆಗಿರುವ ಮರವನ್ನು ಹಿಂಬದಿಯಲ್ಲಿ ಇಟ್ಟು ನಾಯಕ ಆಲ್ ದಿ ಬೆಸ್ಟ್ .. ಸಕ್ಸಸ್ ನಿಮ್ಮದೇ ಎನ್ನುವ ಸಂಭಾಷಣೆಯನ್ನು ನಿರ್ಮಾಪಕರ ಅಣತಿಯಂತೆ ಚಿತ್ರೀಕರಿಸಿದ್ದೆ. ಸಿನೆಮಾದಲ್ಲಿ ಅದು ಎಲ್ಲಿ ಬರುವುದೋ ಗೊತ್ತಿಲ್ಲ !! ಪತ್ರಕರ್ತರ ಜೊತೆಗೆ ಎಲ್ಲಾ ಪ್ರಶ್ನೋತ್ತರ ಮುಗಿದು ಕೊನೆಗೆ ಹಿರಿಯ ಪತ್ರಕರ್ತ ರೊಬ್ಬರು  ನಾಯಕಿ ಯಾರೆಂದು ಈಗಲಾದರೂ ತಿಳಿಸುತ್ತೀರೋ ಅಥವಾ ಇನ್ನು ಸಿಕ್ಕಿಲ್ಲ ಅಂದುಕೊಳ್ಳೋಣವೋ  ಎಂದು ಕೇಳಿ ನನ್ನ ಮನಸ್ಸು ಹಗುರ ಮಾಡಿದರು. ನಾಯಕಿ ನಿಮಗೆ ತಿಳಿದಿರುವವಳೇ ನೀವು ಆಗಲೇ ನೋಡಿದ್ದಿರಿ ನಾನು ಅದಿಕೃತವಾಗಿ ಹೇಳಬೇಕಷ್ಟೆ ಎಂದು ಹೇಳಿದ ನಿರ್ಮಾಪಕರು ನನ್ನವಳನ್ನು ಕರೆದು ಇವರೇ ಈ ಚಿತ್ರದ ನಾಯಕಿ ಎಂದರು!!
 
ನಾನು ಈ ಸಿನೆಮಾ ಮಾಡ್ತಿರೋದೆ ಇವರಿಗಾಗಿ ಧಾರಾವಾಹಿಯಲ್ಲಿ ಇವರ ಪ್ರತಿಭೆ ನೋಡಿ ಮೆಚ್ಚಿದ್ದೇನೆ ಅದಕ್ಕಾಗೆ ಇವರನ್ನು ಕಿರುತೆರೆಯಿಂದ ಬೆಳ್ಳಿತೆರೆಗೆ ಪರಿಚಯಿಸುವ ನಿರ್ಧಾರ ಮಾಡಿದೆ
ಸಾರ್ ನನಗೆ ಈ ವಿಷ್ಯ ಹೇಳಿರಲೇ ಇಲ್ಲ ಇವತ್ತು ನಿಂಗೊಂದು ಸರ್ಪ್ರೈಸ್ ಇದೆ ಅಂತ ಕರೆಸಿ ಈಗ ಹೇಳ್ತಿದ್ದಾರೆ
ಸರ್ಪ್ರೈಸ್ ಇಷ್ಟ ಆಯ್ತಾ ?? ಪತ್ರಕರ್ತರ ಪ್ರಶ್ನೆ ಇರಬೇಕು !
ನನ್ನವಳ ಜೋರಾದ ನಗು
ಆಫ್ ಕೋರ್ಸ್ ..ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲ್ದು , ಅವ್ರು ನನ್ನ ಮೇಲೆ ಇಟ್ಟಿರೋ ವಿಶ್ವಾಸ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ
ಎಕ್ಸ್ಪೋಸ್.. ಸ್ವಿಂ ಸೂಟ್ ಓಕೆ ನಾ .. ಸರಿಯಾಗಿ ಕೇಳಿದ್ರು ನಾನು ಇದಕ್ಕೆ ಕಾಯುತಿದ್ದೆ .
ಪಾತ್ರಕ್ಕೆ ಅನಿವಾರ್ಯ ಆದ್ರೆ ನನ್ನ ಅಭ್ಯಂತರವೇನಿಲ್ಲ .. ನಿರ್ಮಾಪಕರು , ನಿರ್ದೇಶಕರು ನನಗೆ ತಿಳಿದಿರುವವರೆ ಆದ್ರಿಂದ ಅಂತಹ ಮುಜುಗರ ಆಗೋಲ್ಲ ಅಂದ್ಕೊಂಡಿದೀನಿ .. ಎಂದು ಹೊಸದೊಂದು ನಗೆ ನಕ್ಕಳು ಆ ಧಾಟಿಯ ಅವಳ  ನಗು ನನಗೆ ನಿಜವಾಗಲು ಹೊಸದು! ಮೊನ್ನೆಯಷ್ಟೇ ಅವರ ಸಾಕು ನಾಯಿಗೆ ಪೆಡಿಗ್ರೆ ತೆಗದು ಕೊಂಡು ಅವರ ಮನೆಗೆ ಹೋದಾಗ ಪೀಡಿಸಿ ಕಥೆ ಕೇಳಿ ನಾಯಕಿ ಮಳೆಯಲ್ಲಿ ನೆನೆಯುವ ದೃಶ್ಯ ಬೇಕಿತ್ತಾ ..? ನಂಗೆ ಎಕ್ಸ್ಪೋಸ್ ಮಾಡವ್ರನ್ನ ಕಂಡ್ರೆ ಅಸಹ್ಯ ಅಂದವಳು ನನ್ನವಳು ?! ಇವಳೇ ಅಲ್ಲವೇ!?....... ಪತ್ರಕರ್ತರೊಬ್ಬರು ಬಂದು ಕೈ ಕುಲುಕಿ ಹೋದರು ನಂತರ ಮತ್ತೊಬ್ಬರು..ಹೀಗೆ ಸಾಗಿತ್ತು  ನನ್ನ ಶುಭಾಶಯಗಳ ತೇರಿನ ನಡುವೆ ಅವಳ ಪೋಟೋ ಸೆಷನ್ ನ ಮೆರವಣಿಗೆ !!
ಯುನಿಟ್ ,ನಾನು, ನನ್ನವಳು ಮತ್ತು ನಿರ್ಮಾಪಕರನ್ನು ಬಿಟ್ಟು ಬಂದವರೆಲ್ಲ ಹೋಗಿ ಆಗಿತ್ತು , ಸಂಜೆ  ನಾಲ್ಕಕ್ಕೆ ಮಡಿಕೇರಿಗೆ ಹೊರಡಲು ತಯಾರಾಗ್ಬೇಕಿತ್ತು ನಿರ್ಮಾಪಕರಿಗೆ ಹೇಳಿ ಹೊರಡೋಣ ಎಂದುಕೊಂಡೆ ಅಷ್ಟರಲ್ಲಿ ಅವರೇ ಅವಳೊಡನೆ
( ನನ್ನವಳು ) ಬಂದು ಊಟಕ್ಕೆ ಕರೆದರು ಅವಳೊಟ್ಟಿಗೆ !!
ಬೇಡ ಸಾರ್ ಸಂಜೆಗೆ ಹೋಗಬೇಕಲ್ಲವೇ..? ರೂಂ ಗೆ ಹೋಗಿ ರೆಡಿ ಆಗ್ತೀನಿ ಇನ್ನಷ್ಟು ಒತ್ತಾಯಿಸಲಿ ಎಂದು ಸುಮ್ಮನೇ ಹಾಗೆ ಹೇಳಿದೆ . ಅದು ಸರಿನೇ ಹೋರಡಿ, ಬೇಗ ತಲುಪಿದರೆ ಆರಾಮಾಗಿ ನಿದ್ದೆ ಮಾಡಿ ನಾಳೆಗೆ ಫ್ರೆಶ್ ಆಗ್ ಬಹುದು , ಸಿನೆಮಾ ಚೆನ್ನಾಗಿ ಮಾಡಿ ಇದರಲ್ಲಿ ನಮ್ಮ ಹೀರೋಯಿನ್ ಭವಿಷ್ಯ ಇದೆ ಎಂದು ಬಿಟ್ಟರು ಜೋತೆಯಲ್ಲಿ ಬರಲು ಒತ್ತಾಯಿಸಲಿಲ್ಲ !! ಅವಳು ಮತ್ತೊಂದು ಹೊಸ ನಗೆ ನಕ್ಕಳು  ಹೊರಡೋಣವಾ ನಿರ್ಮಾಪಕರು ಮಾತು ಮುಗಿಸುವಷ್ಟರಲ್ಲಿ ಅವಳು ಮುಂದಡಿ ಇಟ್ಟಾಗಿತ್ತು, ನನ್ನತ್ತ ತಿರುಗಿಯೂ ನೋಡದೆ ಹೊಸ ಫಾರ್ಚುನರ್ ಕಾರ್  ಹತ್ತಿ ಹೊರಟೇ ಬಿಟ್ಟಳು!! ಅವಳಿಂದ ಮೆಸೇಜ್ ಬರುವುದೆಂದು ಮಡಿಕೇರಿಯವರೆಗೆ ಕಾದು ನೆಟ್ ವರ್ಕ್ ಸಿಗದ ಸ್ಥಳ ಸೇರಿಕೊಂಡೆ , ಎಲ್ಲಿ ಹೋಗ್ತಾಳೆ ಸಿನೆಮಾಗೆ ಬಂದವಳು ಸೆಟ್ನಲ್ಲಿ ಸಿಗದೇ ಹೋಗ್ತಾಳ? ಎಂದು ಸಮಾಧಾನಿಸಿ ಕೊಂಡೆ ........ಮುಂದುವರೆಯುವುದು            ಚಿತ್ರಕೃಪೆ: ಗೂಗಲ್ ಇಮೇಜಸ್                                

2 comments:

 1. Avala preetiyallu swartha ede ettidante bhasavaaguttide..

  ReplyDelete
  Replies
  1. ಧನ್ಯವಾದಗಳು ..
   ಬಹುಷಃ ಮುಂದಿನ ಕಂತಿಗೆ ಮುಗಿಯಬಹುದು ಕನವರಿಕೆ ..ನಿರೀಕ್ಷಿಸಿ.

   Delete