Sunday 16 June 2013

ತಂದೆ..ನಾ ಅರಿಯದಾದೆ

ಎಷ್ಟೊಂದು ಹಿತ ಸುಖವಿತ್ತು ತಂದೆ
ನಿಮ್ಮ  ದುಡಿಮೆ ನಮ್ಮ ಹಿರಿಮೆಯ ಹಿಂದೆ
ಬೆಲೆ ಅರಿಯದೆ ಬಾಲಕ  ಸಿಡುಕುತಿದ್ದೆ
ಕಷ್ಟಕ್ಕೆ ಕಿವಿಗೊಡದೆ ನಿತ್ಯವೂ  ಕಾಡುತಿದ್ದೆ 
ಶೆಟ್ಟರ ಅಂಗಡಿ  ಹಲಗೆ  ಬಳಪ ತೆತ್ತವನು ನೀನು
ಶಾಲೆಯ ಅಂಗಳ  ಅ ಆ ಇ ಈ ಕಲಿತವನು ನಾನು

 ಹಗಲಲ್ಲಿ ಕಂಡ ಲಗೋರಿ ಬಯಲಲ್ಲಿ
ಇರಳು ಕೂರಲು ಹಲವಾರು ಭಯ
ಪುಕ್ಕಲನಿಗೆ ಪಹರೆ ಕೋಲು ನಿನ್ನದು
ಅನುಮಾನದ "ಅಪ್ಪ ಅಪ್ಪಾ " ನನ್ನದು
ಹೇಡಿ ಸಂತಾನವೆಂದು ನೀನು ಬಿಡಲಿಲ್ಲ
ಬಲಿಷ್ಟ ಬಾಹುವಿಗಾಗಿ ಬೆನ್ನು ಸವೆಸಿದೆಯೆಲ್ಲ

 ಅದೆಷ್ಟು ದೀಪಾವಳಿ ಗೋಳು ಹೊಯ್ದುಕೊಂಡಿಲ್ಲಾ
ಮೂರೇ ಸರ ಕುದುರೆ ಪ್ರತಾಪವಿಲ್ಲದ ಮತಾಪು
ಸುರ್ರ್ ಬತ್ತಿ ಉರಿಯದೇ ಕಳೆದ ವರ್ಷದ್ದು ಸಾಬೀತು
ವಾರಕ್ಕೆ ಬರ್ತಿಯಾಗುವಷ್ಟು ಚಿನ್ಕುರಳಿ ಪಟ್ ಪಟಾಕಿ
ಅಮ್ಮನೆದುರು ಬೈದು ನಿಮ್ಮೆದುರು ಅಳುವಾಗ
ಅಂಧರ ಕಥೆ ಹೇಳಿ ಪಟಾಕಿ ಸದ್ದಡಗಿಸಿದಿರಲ್ಲ
ಅಂಕ ತಿದ್ದಿದ ಪದ್ದಿಗೆ ಪ್ರೇಮ ಪತ್ರ ಬರೆದ
ಬೆರಳುಗಳಿಗೊಮ್ಮೆಯೂ  ಹೊಡೆಯಲಿಲ್ಲ
ಬೇಸರದ ಮುಖ ಹೊತ್ತು ಬದುಕು ತೋರಿಸಿದಿರಿ
ಕಿಸೆಗೆ ಕೈ ಹಾಕಿದ ಮಗ ಚಟಕ್ಕೆ ಬಲಿಯಾದನೆಂದು
ಹಾದಿಬದಿಯವರ ಮುಂದೆ ರಂಪ ಮಾಡಲಿಲ್ಲ
ನೌಕರಿಯ ನೀಡಿಸಿ ದುಡಿಮೆಯ ಧನ್ಯತೆ ತಿಳಿಸಿದಿರಿ

ನಿಮ್ಮೊಲುಮೆಯ ಮೂವತ್ತು ಸಂವತ್ಸರ ಅರ್ಪಿಸಿ
ನನ್ನೊಲುಮೆಯ ತೋರಲು ಹತ್ತು ಮಾತ್ರ ಬಿಟ್ಟಿರಿ
ಒಬ್ಬಟ್ಟು ಗೋಡಂಬಿ ಗಸಗಸೆ  ಘಮವ ನಮಗಿತ್ತು
ಗೋದಿ ನುಚ್ಚೆ ಅಚ್ಚುಮೆಚ್ಚಾಗಿ ಕಾಲ ದೂಡಿ ಬಿಟ್ಟಿರಿ
ಸಂಸ್ಕಾರದ ಖರ್ಚೂ ತಲೆಯಮೇಲೇರಲು ಬಿಡಲಿಲ್ಲ
ದೇಹವರಿಯುವವರಿಗೆ ದಾನ ನೀಡಿ ಹೊರಟೇ ಬಿಟ್ಟಿರಲ್ಲ
 ಬೆಳೆದು ನಿಂತ ಮಗ ಸುಡುಗಣ್ಣು ಬಿಟ್ಟು ಕೇಳುತಿದ್ದಾನೆ 
ನನಗೆ ನೀವೇನು ಕೊಟ್ಟಿರಿ ? ನನಗೆ ನೀವು ನೆನಪಾದಿರಿ
ಕಣ್ಣ ತುಂಬಾ ನಿಮ್ಮ ಋಣದ  ರುಚಿಯ ನೀರು ಹರಡಿದೆ
ಭಾವ ಮಬ್ಬಾಗಿ ಭರವಸೆ ಕಪ್ಪಾಗಿ ಗಲ್ಲ ಉಪ್ಪುಪ್ಪಾಗಿದೆ
ಎಷ್ಟೊಂದು ಹಿತ ಸುಖವಿತ್ತು ತಂದೆ..ನಾ ಅರಿಯದಾದೆ  


ನಿನ್ನ ದುಡಿಮೆ ನಮ್ಮ ಹಿರಿಮೆಯ ಹಿಂದೆ..ನೀ ದೈವವಾದೆ


                                                     ಚಿತ್ರಕೃಪೆ:ಗೂಗಲ್ ಇಮೇಜಸ್   

2 comments: