Sunday, 30 June 2013

ಭಗ್ನ ಪ್ರೇಮ ಪತ್ರ

ಬದುಕಿನ ತುಂಬಾ ಸುಖ ತುಂಬಿ 
ನೆಮ್ಮದಿ ಹೊಂಗೆ ಮರದ ನೆರಳಂತಾಗಿ 
ನಗು ಪಾರಿಜಾತ ಪುಷ್ಪಧಾರೆಯಾಗಿ 
ಶಾಂತಿ ಸಣ್ಣ ಸದ್ದಿಗೂ ಬಿಡದೆ ಬಿದ್ದು ಕೊಂಡಾಗ
 
ಬದುಕು ನೀರಸವೆನಿಸಿ 
ಹಿತ ನೋವನರಸಿ ಹೊರಟಾಗ 
ನೆರವಿಗೆ ಬಂದದ್ದು 
ಭಗ್ನ ಪ್ರೇಮವಾದರೂ ಸುರಕ್ಷಿತವಾಗಿದ್ದ 
"
ಅವಳ " ಪ್ರೇಮ ಪತ್ರದ ಸಾಲುಗಳು

" ಗುಲಾಬಿ " ಪ್ರೀತಿನಾ

ಬರ್ತಾ.. ಬರ್ತಾ..ಯಾಕೋ ಕಾಣೆ
ಕಾಣೆಯಾಗ್ತಾ ಹೋದೆ ನೀನೆ
ತಪ್ಪು ನಂದೇನ ..ಇಲ್ಲ ನಿಂದೇನ

ಹೆಂಗೇ ಆದ್ರೂ ಬರ್ತಾನ್ ಹಿಂದೆ
ಕೈಯ ಕಟ್ಟಿ ನಿಲ್ತಾನ್ ಮುಂದೆ
ಭಾವ ನಿಂದೇನ ..ಸೋಲು ನಂದೇನ


ಇಲ್ಲ ಹಂಗೇನಿಲ್ಲ ಸುಮ್ಕೆ ಅನಂಗಿಲ್ಲ
ನಂದು ಮನ್ಸು ನಿಂದು ಮನ್ಸು
ನೋವು ನಂದೇನ ..ಮೌನ ನಿಂದೇನ


ಮಾತು ಇಲ್ಲ ಮುಂದ್ಕು ಬರಲ್ಲ
ಹಿಂಗೇ ಆದ್ರೆ ಬದ್ಕೂ ಇಲ್ಲ
ಬೆಲ್ಲ ನಿಂಗೇನ .. ಬೇವು ನಂಗೇನ


ಹೂವ ಬುಟ್ಟು ಕಾಯಿ ಕಟ್ಟದೆ
ಹಣ್ಣು ಕೊಡದೆ ಬಾಡಿ ಹೋಗೊ
ನಮ್ದು " ಗುಲಾಬಿ "  ಪ್ರೀತಿನಾ


                                                             ಚಿತ್ರಕೃಪೆ:ಗೂಗಲ್ ಇಮೇಜಸ್  

Friday, 21 June 2013

ಚಿತೆಯ.. ಕಾಯುವ.. ಕಾಯಕ


ಅಯ್ಯೋ ನಿನಗಾಗಿ ಕಾದು ಸಾಕಾಯಿತು 
ನಾ ಹೋಗುವೆ ನನಗಾಗಿ ಕಾಯುತಿರುವರ 
ಬಳಿಗೆ - ಬೇಸರಿಸದಿರು 
ಇದ್ದರೆ  ಅಲ್ಲಿಯೇ ಅವರು ನನಗಾಗಿ 
ಬದುಕುವೆನು ನಾ ಅವರಳೊಂದಾಗಿ !!
ಬೇಸತ್ತು ಅವರೂ ಹೋಗಿದ್ದರೆ ಮುಂದೆ 
ನೀ ಬರಬೇಡ ನನ್ನ ಹಿಂದೆ
ಬರುವೆ - ನುಡಿವೆ - ಹೋಗಿ ಮತ್ತೆ ಬರುವೆ 
ನೀ ಹೋಗುವುದು ನಾ ನಿಂತಾಗ 
ನೀ ಮತ್ತೆ ಬರುವುದು ನಾ ಹೊರಟು ನಿಂತಾಗ!!
ನಾ ನಿನಗಾಗಿ ಕಾದಿದ್ದು ನಿನ್ನಾಣೆ ನಿಜವಾದರೆ 
ನೀ ನನ್ನಾಣೆ ಹಚ್ಚದಿರು ನನ್ನ ನಿತ್ಯವೂ 
ಚಿತೆಯ ಕಾಯುವ ಕಾಯಕಕ್ಕೆ !!

                                                          ಚಿತ್ರಕೃಪೆ:ಗೂಗಲ್ ಇಮೇಜಸ್ 


ಮಡಿ – ಮೈಲಿಗೆ

ದೇವರ ನೆಡದ ಭೂಮಿ ಯಾವುದು

ಹೆಣ ಊಳದ ನೆಲ ಯಾವುದು
ಅವನಿಗೆ ಪಾಯಕ್ಕೆ-ಇವನ ಕಾಯಕ್ಕೆ
ತೋಡುವುದು ಅನಿವಾರ್ಯ !

ಅರ್ಥ ಮಾಡಿಕೊಳ್ಳದ ಬದುಕಲ್ಲಿ
ಆಡಂಬರ ಪೀತಾಂಬರದ ಕಚ್ಚೆ ಕಾರ್ಯ
ಅಳಿದುಳಿದ ಅನಾಹುತಗಳಿಗೆ
ಮದ್ಯೆ ಮದ್ಯ ಪ್ರಾಯಶ್ಚಿಥಾರ್ತಾಯ !

ಇಲ್ಲಿ ಎಲ್ಲವೂ ಮೈಲಿಗೆ,
ಜೀವ ಜೀವನದುದ್ದಕ್ಕೂ ಬರುವ
ಮೈ ನಾಲಿಗೆ ಗಲ್ಲಗಳಿಗೆ!

ತುತ್ತು ಕೊಟ್ಟ ಕೈಗೆ - ಮುಕ್ಕಿ ಮೇಯ್ದ ಬಾಯ್ಗೆ  
ಮುತ್ತು ಕೊಟ್ಟ ತುಟಿಗೆ - ಇತ್ತು ಹೀರಿದ ನಾಲಿಗೆಗೆ
ಇಲ್ಲ ಮೈಲಿಗೆ !

ಮಣ್ಣು ಸುರಿವ ಮೆರವಣಿಗೆಯ ಜೊತೆಗಾರ
ಮನಗೆ ಮರಳಿದೊಡನೆ ಸುರಿಯನೇ
ಮುಡಿಯಿಂದ ಅಡಿವರೆಗೆ ತಣ್ಣೀರ !

ನೆಂದ ಮೈಗಿದೋ ಪುಳಕ
ನೊಂದ ಮನಸ್ಸಿಗಿನ್ನು ಅಳುಕು

ಮಡಿಯೋ ಮೈಲಿಗೆಯೋ ಮಾಗಿಯ ಚಳಿ ಚಳಿಯೋ....!!

                                                         ಚಿತ್ರಕೃಪೆ:ಗೂಗಲ್ ಇಮೇಜಸ್      

Thursday, 20 June 2013

ಕನವರಿಕೆ 6

ಜಗದೀಶ ...ಜಗದೀಶ ಬಾಗಿಲು ತೆಗೆಯೋ ..ಒಂದೇ ಸಮನೇ ಬಾಗಿಲು ಬಡಿಯುತಿರುವ ಸದ್ದಿಗೆ ಒಂದೇ ಬಾರಿಗೆ ಎಚ್ಚರಗೊಂಡ ನನಗೆ , ನೆನ್ನೆಯ ನೆನಪುಗಳಿಂದ ಹೊರಬರಲು ಅರೆ ಕ್ಷಣ ಬೇಕಾಯಿತು. ನಡೆದ್ದುದೆಲ್ಲವ ದಾಖಲಿಸಲೆಂದು ಕೈಗೆತ್ತಿಕೊಂಡಿದ್ದ ಡೈರಿಯ ಹಾಳೆಗಳೆಲ್ಲ ಅಂಗಾತ ಬಿದ್ದು ನನ್ನ ಅವಳ ಪರಿಚಯ ಆದ ಮೊದಲ ದಿನದ ಪುಟಕ್ಕೆ ಬಂದು ನಿಂತಿದ್ದವು.  ಚಿಟ್ಟೆ ಬಾಗಿಲು ಬಡಿಯುತ್ತಲೇ ಇದ್ದ ವಠಾರ ವಾದ್ದರಿಂದ ಹೆಚ್ಚು ಹೊತ್ತು ಮಾಡುವ ಹಾಗೂ ಇಲ್ಲ ಹೋಗಿ ತೆರೆದೆ. ಏನೊಂದು ಮಾತನಾಡದೆ ಒಳ ಬಂದು ಕುಳಿತ , ಬಹಳ ಹೊತ್ತಿನವರೆಗೆ ಇಬ್ಬರ ನಡುವೆ ಮಾತಿಲ್ಲ.

“ ಅವ್ರು ಬೇರೆ ಡೈರೆಕ್ಟರ್ ನ ನೋಡ್ಕೊಂಡಿದ್ದಾರೆ “
“ ಯಾರದು “ ನನ್ನ ಪ್ರಶ್ನೆ , ಸತ್ತವನಿಗೆ ತನ್ನ ಶವ ಸಂಸ್ಕಾರ ಯಾರು ಮಾಡಿದರೆಂದು ತಿಳಿಯುವ ಕುತೂಹಲ!!....ಹಾಳಾದ್ದು . “ ನಿಮ್ಮ ಧಾರಾವಾಹಿ ನಿರ್ದೇಶಕರೇ ಮಾಡ್ತಿದ್ದಾರೆ , ನನಗೂ ಹೇಳದೆ ಬರೋ ಅಂತ್ತಾದ್ದು ಏನಾಯಿತು “ ಹೌದಲ್ಲವೇ ಹಸಿ ಬಿಸಿ ಮಾತು ಕೇಳಿದ ನನ್ನ ಮನಸ್ಸು ಅಲ್ಲಿಂದ ಹೊರಡುವಾಗ ನನ್ನೊಡನೆ ಬಂದಿದ್ದ ಚಿಟ್ಟೆಯನ್ನು ಮರೆತು ಹೋಗಿತ್ತು !! ಚಿಟ್ಟೆ ಯತ್ತ ಕ್ಷಮಿಸುವಂತೆ ನೋಟ ಬೀರಿ , ಮಡಿಕೇರಿ ಯ ನಿರ್ಮಾಪಕರ ಕೊಟಡಿ ಬಳಿ  ನಾನು ಕೇಳಿದ್ದು, ಕಂಡದ್ದು ಅವಳಿಗೆ ಬೈದದ್ದು ಎಲ್ಲವನ್ನು ವಿವರಿಸಿ “ ಸಿನೆಮಾದಲ್ಲಿ ಅಭಿನಯಿಸೋ ನಿನ್ನ ಆಸೆ ಈಡೇರಿಸಕ್ಕೆ ಆಗಲಿಲ್ಲ ಸಾರಿ “ ಅಂದೆ. “ ಅಯ್ಯೋ ಅದು ಹಾಳಾಗ್ ಹೋಗ್ಲಿ ,  ಏನು ಎತ್ತ ಅಂತ ಯಾರೊಬ್ಬರಿಗೂ ತಿಳಿಸ್ದೆ ನೀನು ಬರಬಾರದಿತ್ತು . ಅಲ್ಲೆಲ್ಲಾ ಈಗ ಏನ್ ಹೇಳ್ತಿದ್ದಾರೆ ......” ಮಾತನ್ನು ನುಂಗಿಕೊಂಡು “ ಮುಂದೆ ಏನ್ ಮಾಡ್ಬೇಕು ಅಂತ್ತಿದ್ದೀಯ “ ಅದಕ್ಕೆ ಉತರಿಸದೆ “ ಹಿರೋಯಿನ್ ಜೊತೆ ಅಸಭ್ಯವಾಗಿ ವರ್ತಿಸಿದ ಅದಕ್ಕೆ ಓಡಿಸಿದ್ವಿ ಅಂದ್ರಾ ...?” ಪ್ರಶ್ನೆ ಮಾಡಿದೆ , ಈಗ ಉತ್ತರಿಸದೆ ಇರುವ ಸರದಿ ಚಿಟ್ಟೆಯದು, “ ನಾನು ಊಹಿಸಿದ್ದೆ ಬಿಡು” ಅಂದೆ, ವಿಷ್ಯ ಮುಂದುವರಿಸಲು ಇಷ್ಟವಿಲ್ಲದ ಚಿಟ್ಟೆ “ ಏನಾದ್ರೂ ತಿಂದ್ಯಾ ಇಲ್ವಾ ?” ಎಂದು ಕಾಳಜಿ ತೊರಿಸಲು ಮುಂದಾದ “ ಹಸಿವಿಲ್ಲ ..ಅಥವಾ ಆಗ್ತಾ ಇರೋದು ಗೊತ್ತಾಗ್ತಾ ಇಲ್ಲ “ ಅಂದೆ ಆದರೆ ನನಗೆ ಆ ವಿಚಾರ ಇನ್ನು ಹೆಚ್ಚು ಮಾತನಾಡುವುದು ಬೇಕಿತ್ತು ಹಾಗಂತ ಮನಸ್ಸು ಬಯಸುತ್ತಿತ್ತು!!ಅವಕಾಶ ಕೊಡದ ಚಿಟ್ಟೆ ಜೇಬಿನಿಂದ ಇನ್ಲ್ಯಾಂಡ್ ಪತ್ರ ತೆಗೆದು “ ಅಪ್ಪಯ್ಯನಿಗೆ ಪತ್ರ ಬರೀ ಉಗಾದಿಗೆ ಊರಿಗೆ ಬರ್ತಾ ಇದ್ದೀನಿ ಅಂತ ತಿಳ್ಸು . ನಾನಲ್ಲ ನೀನು “ ನಾನು ಮತ್ತೇನೋ ಹೇಳುವಷ್ಟರಲ್ಲಿ
“ ಉಸ್ರೆತ್ ಬ್ಯಾಡ ಸುಮ್ಕೆ ಬರೀಲ , ಅಬ್ಬಕ್ಕೆ ಜಾತ್ರೆಗೆ ಹಳ್ಳಿಗ್ ವೋಗಿ ಬಂದು ಮಾಡಿದ್ರೆ ಕಳ್ಳಿ ಆಲ್ಗು
 ಕರುವಿನ್ ಆಲ್ಗು ಯತ್ಯಾಸ ಗೊತ್ತಾಗಿರೋದು . ಲೇ ನಾವ್ ಹೆಣ್ ಆಗ್ ವುಟ್ಲಿ ಗಂಡಾಗ್ ವುಟ್ಲಿ ವುಟಕ್ಕೆ ಮುಂಚೆನೇ ನಮ್ಮ ಹಿರೀರು ನಮ್ಮ  ಲಗ್ನ ನಿಶ್ಚಯ ಮಾಡಿಕಿರ್ತಾರೆ ಅಂತ ವಂಸ ನಮ್ದು ಅಂತಾದ್ರಾಗೆ ಕಟ್ ಕೊಳಕ್ಕೆ ಮುಂದೆಯಾ ನೂರ್ ಮಗ್ಗಲಾಗೆ ಬಿದ್ದ್ ಮೂರೊತ್ತು  ಬೆದೆಗ್ ಬೀಳೋ  ಬೆರೆಕೆ ಮುಂಡೇವು ನಮಗೆ ಆಗ್ ಬತ್ತವೆನ್ಲಾ.... ಊರ್ನಾಗೆ ಓಡಾಡ್ಕೊಂಡು ಮೇಯ್ದ ಅಸನ ಕೊಟ್ಟ್ಗೆ ಗೆ ಕಟ್ಟಿ ಸಾಕಕ್ ಆಗಕಿಲ್ಲ. ಅವ್ವ ಅಪ್ಪಯ್ಯ ನ ವೊಟ್ಟೆ ಉರ್ಸಿದ್ ಸಾಕು , ಅವ್ರ ಇನ್ನು ಉಸ್ರು ಬುಟ್ರೆ ನಿನ್ ಬಾಳು ಬೇಲಿ ಮುಳ್ಳಾಗೊಯತತೆ. ಸುಮ್ಕೆ ಪತ್ರ ಬರದು ಉಗಾದಿ ಗೆ ಉರ್ ಸೇರ್ಕೋ. ನಿಂಗ್ ತಿನಕ್ ಏನಾದ್ರ ತಕೊಂಡ  ಬತ್ತೀನಿ ಅಷ್ಟ್ರಾಗ್ ಬರದು ಮುಗ್ಸು “ ರಾಜಾಜ್ಞೆಯಂತೆ ಒಂದೇ ಸಮನೆ ಹೇಳಿ ಮೊದಲ ಬಾರಿ ನನ್ನ ಚೆಡ್ಡಿ ಗೆಳೆಯ ಚಿಟ್ಟೆ ಯಾಗಿ ಬೆಂದೆದೆಯ ಮೇಲೆ ಬೈಗುಳುದ ತಂಪಾದ ಮಳೆ ಸುರಿಸಿ  ಹೊರಟು ಹೋದ. ಆಶ್ಚರ್ಯ !! ಅವನು ಹಾಗೆಯೇ ತೆರೆದು ಬಿಟ್ಟು ಹೋದ ಬಾಗಿಲಿನಿಂದ ಬೀಸುತಿರುವ ಗಾಳಿ ನನ್ನದೆಯೋಳಗೆಲ್ಲ ಸುಳಿದಾಡಿ ಸುಟ್ಟಿದ್ದ ಹರಿವುಗಳನೆಲ್ಲ ತಂಪಾಗಿಸುತಿದೆ!!ರಾಡಿಯಾಗಿದ್ದ ನನ್ನ ಮನಸ್ಸು ಅವಳೆಡೆಗೆ ಚಿಟ್ಟೆ ಯಾಡಿದ್ದ ಕಟು ಮಾತುಗಳ ಕೇಳಿದ ನಂತರ ತಿಳಿಯಾಗುತಿದೆ!!ನನ್ನೊಳಗಿದ್ದ ಅವಳ ಜಾಗದಲ್ಲೀಗ ಧಿವ್ಯ ನಿರ್ಲಕ್ಷ್ಯ ಮತ್ತು ತಿರಸ್ಕಾರದ ಭಾವ ಆಸೀನವಾಗಿ ಜಗತ್ತಿನೆಡೆಗೆ ಮುಗುಳ್ನಗುತ್ತಿವೆ..!
ಪತ್ರ ಕೈಗೆತ್ತಿಕೊಂಡು ವಿಳಾಸ ವಿವರ ವಾಗಿ ಬರೆದು ವಿಷಯ ಒಂದೇ ಸಾಲು ಬರೆದೆ “ ಉಗಾದಿಗೆ ಮುಂಚೆ ಊರಿಗೆ ಬರುತಿದ್ದೇನೆ “ ಪತ್ರ ಅಂಟಿಸುವ ಮುಂಚೆ ನೆನಪಾದರು ಬೇಕಂತಲೇ ಗಿರಿಜಳ ಬಗ್ಗೆ ಬೆರೆಯಲಿಲ್ಲ.!!
ಮಹತ್ವಾಕಾಂಕ್ಷೆ ಹೊತ್ತು ಸೋತು ಮರಳಿದವನ ಗೆಲ್ಲುವವಳು ಅವಳೇ ಏನೋ .......................

.........ಮುಗಿಯಿತು                             ಚಿತ್ರ ಕೃಪೆ:ಗೂಗಲ್ ಇಮೇಜಸ್ 


Sunday, 16 June 2013

ತಂದೆ..ನಾ ಅರಿಯದಾದೆ

ಎಷ್ಟೊಂದು ಹಿತ ಸುಖವಿತ್ತು ತಂದೆ
ನಿಮ್ಮ  ದುಡಿಮೆ ನಮ್ಮ ಹಿರಿಮೆಯ ಹಿಂದೆ
ಬೆಲೆ ಅರಿಯದೆ ಬಾಲಕ  ಸಿಡುಕುತಿದ್ದೆ
ಕಷ್ಟಕ್ಕೆ ಕಿವಿಗೊಡದೆ ನಿತ್ಯವೂ  ಕಾಡುತಿದ್ದೆ 
ಶೆಟ್ಟರ ಅಂಗಡಿ  ಹಲಗೆ  ಬಳಪ ತೆತ್ತವನು ನೀನು
ಶಾಲೆಯ ಅಂಗಳ  ಅ ಆ ಇ ಈ ಕಲಿತವನು ನಾನು

 ಹಗಲಲ್ಲಿ ಕಂಡ ಲಗೋರಿ ಬಯಲಲ್ಲಿ
ಇರಳು ಕೂರಲು ಹಲವಾರು ಭಯ
ಪುಕ್ಕಲನಿಗೆ ಪಹರೆ ಕೋಲು ನಿನ್ನದು
ಅನುಮಾನದ "ಅಪ್ಪ ಅಪ್ಪಾ " ನನ್ನದು
ಹೇಡಿ ಸಂತಾನವೆಂದು ನೀನು ಬಿಡಲಿಲ್ಲ
ಬಲಿಷ್ಟ ಬಾಹುವಿಗಾಗಿ ಬೆನ್ನು ಸವೆಸಿದೆಯೆಲ್ಲ

 ಅದೆಷ್ಟು ದೀಪಾವಳಿ ಗೋಳು ಹೊಯ್ದುಕೊಂಡಿಲ್ಲಾ
ಮೂರೇ ಸರ ಕುದುರೆ ಪ್ರತಾಪವಿಲ್ಲದ ಮತಾಪು
ಸುರ್ರ್ ಬತ್ತಿ ಉರಿಯದೇ ಕಳೆದ ವರ್ಷದ್ದು ಸಾಬೀತು
ವಾರಕ್ಕೆ ಬರ್ತಿಯಾಗುವಷ್ಟು ಚಿನ್ಕುರಳಿ ಪಟ್ ಪಟಾಕಿ
ಅಮ್ಮನೆದುರು ಬೈದು ನಿಮ್ಮೆದುರು ಅಳುವಾಗ
ಅಂಧರ ಕಥೆ ಹೇಳಿ ಪಟಾಕಿ ಸದ್ದಡಗಿಸಿದಿರಲ್ಲ
ಅಂಕ ತಿದ್ದಿದ ಪದ್ದಿಗೆ ಪ್ರೇಮ ಪತ್ರ ಬರೆದ
ಬೆರಳುಗಳಿಗೊಮ್ಮೆಯೂ  ಹೊಡೆಯಲಿಲ್ಲ
ಬೇಸರದ ಮುಖ ಹೊತ್ತು ಬದುಕು ತೋರಿಸಿದಿರಿ
ಕಿಸೆಗೆ ಕೈ ಹಾಕಿದ ಮಗ ಚಟಕ್ಕೆ ಬಲಿಯಾದನೆಂದು
ಹಾದಿಬದಿಯವರ ಮುಂದೆ ರಂಪ ಮಾಡಲಿಲ್ಲ
ನೌಕರಿಯ ನೀಡಿಸಿ ದುಡಿಮೆಯ ಧನ್ಯತೆ ತಿಳಿಸಿದಿರಿ

ನಿಮ್ಮೊಲುಮೆಯ ಮೂವತ್ತು ಸಂವತ್ಸರ ಅರ್ಪಿಸಿ
ನನ್ನೊಲುಮೆಯ ತೋರಲು ಹತ್ತು ಮಾತ್ರ ಬಿಟ್ಟಿರಿ
ಒಬ್ಬಟ್ಟು ಗೋಡಂಬಿ ಗಸಗಸೆ  ಘಮವ ನಮಗಿತ್ತು
ಗೋದಿ ನುಚ್ಚೆ ಅಚ್ಚುಮೆಚ್ಚಾಗಿ ಕಾಲ ದೂಡಿ ಬಿಟ್ಟಿರಿ
ಸಂಸ್ಕಾರದ ಖರ್ಚೂ ತಲೆಯಮೇಲೇರಲು ಬಿಡಲಿಲ್ಲ
ದೇಹವರಿಯುವವರಿಗೆ ದಾನ ನೀಡಿ ಹೊರಟೇ ಬಿಟ್ಟಿರಲ್ಲ
 ಬೆಳೆದು ನಿಂತ ಮಗ ಸುಡುಗಣ್ಣು ಬಿಟ್ಟು ಕೇಳುತಿದ್ದಾನೆ 
ನನಗೆ ನೀವೇನು ಕೊಟ್ಟಿರಿ ? ನನಗೆ ನೀವು ನೆನಪಾದಿರಿ
ಕಣ್ಣ ತುಂಬಾ ನಿಮ್ಮ ಋಣದ  ರುಚಿಯ ನೀರು ಹರಡಿದೆ
ಭಾವ ಮಬ್ಬಾಗಿ ಭರವಸೆ ಕಪ್ಪಾಗಿ ಗಲ್ಲ ಉಪ್ಪುಪ್ಪಾಗಿದೆ
ಎಷ್ಟೊಂದು ಹಿತ ಸುಖವಿತ್ತು ತಂದೆ..ನಾ ಅರಿಯದಾದೆ  


ನಿನ್ನ ದುಡಿಮೆ ನಮ್ಮ ಹಿರಿಮೆಯ ಹಿಂದೆ..ನೀ ದೈವವಾದೆ


                                                     ಚಿತ್ರಕೃಪೆ:ಗೂಗಲ್ ಇಮೇಜಸ್   

Monday, 10 June 2013

ನಾನೇಕೆ ನನಸಾಗಲಿಲ್ಲ!!?

ಮೊನ್ನೆ ಬಂದು ಹೋದ ಕನಸು
ನೆನ್ನೆ ಮತ್ತೆ ಮರಳಿ ಕೇಳುತಿದೆ
ನಾನೇಕೆ ನನಸಾಗಲಿಲ್ಲ!!?


ಭಯದಿ ಬೆವತಿದ್ದೇನೆ
ನಾನು ಹಕ್ಕೆಂದುಕೊಂಡಿದ್ದು
ಪಕ್ಕೆ ತಿವಿದು ಕೇಳುತಿದೆ
ನಾನೇಕೆ ನನಸಾಗಲಿಲ್ಲ ??


ಬೇತಾಳನಂತೆ ತಲೆ
ಸಾವಿರ ಹೋಳಾಗುವ ಪ್ರಶ್ನೆ
ದಿಕ್ಕು ತೋಚದೆ - ತೋಚಿದ್ದು ಹೇಳಿದೆ
ಹಗಲಲ್ಲಿ ಬಾ....ಅದು ಬರಲೇ ಇಲ್ಲ!!!


ನಿಟ್ಟುಸಿರು ಬಿಡುವಂತಿಲ್ಲ
ನಿದ್ದೆಗೆಟ್ಟ ರಾತ್ರಿಗಳ ನಡುವೆ
ನೆಮ್ಮದಿಯ ಹಗಲು ಮಾತ್ರ
ಹೆಗಲೇರಿದ ಕನಸು ಬಗಲು ಬಿಟ್ಟು
ಹೋಗುತ್ತಿಲ್ಲ................!!
                                                     ಚಿತ್ರಕೃಪೆ:ಗೂಗಲ್ ಇಮೇಜಸ್