Thursday 20 June 2013

ಕನವರಿಕೆ 6

ಜಗದೀಶ ...ಜಗದೀಶ ಬಾಗಿಲು ತೆಗೆಯೋ ..ಒಂದೇ ಸಮನೇ ಬಾಗಿಲು ಬಡಿಯುತಿರುವ ಸದ್ದಿಗೆ ಒಂದೇ ಬಾರಿಗೆ ಎಚ್ಚರಗೊಂಡ ನನಗೆ , ನೆನ್ನೆಯ ನೆನಪುಗಳಿಂದ ಹೊರಬರಲು ಅರೆ ಕ್ಷಣ ಬೇಕಾಯಿತು. ನಡೆದ್ದುದೆಲ್ಲವ ದಾಖಲಿಸಲೆಂದು ಕೈಗೆತ್ತಿಕೊಂಡಿದ್ದ ಡೈರಿಯ ಹಾಳೆಗಳೆಲ್ಲ ಅಂಗಾತ ಬಿದ್ದು ನನ್ನ ಅವಳ ಪರಿಚಯ ಆದ ಮೊದಲ ದಿನದ ಪುಟಕ್ಕೆ ಬಂದು ನಿಂತಿದ್ದವು.  ಚಿಟ್ಟೆ ಬಾಗಿಲು ಬಡಿಯುತ್ತಲೇ ಇದ್ದ ವಠಾರ ವಾದ್ದರಿಂದ ಹೆಚ್ಚು ಹೊತ್ತು ಮಾಡುವ ಹಾಗೂ ಇಲ್ಲ ಹೋಗಿ ತೆರೆದೆ. ಏನೊಂದು ಮಾತನಾಡದೆ ಒಳ ಬಂದು ಕುಳಿತ , ಬಹಳ ಹೊತ್ತಿನವರೆಗೆ ಇಬ್ಬರ ನಡುವೆ ಮಾತಿಲ್ಲ.

“ ಅವ್ರು ಬೇರೆ ಡೈರೆಕ್ಟರ್ ನ ನೋಡ್ಕೊಂಡಿದ್ದಾರೆ “
“ ಯಾರದು “ ನನ್ನ ಪ್ರಶ್ನೆ , ಸತ್ತವನಿಗೆ ತನ್ನ ಶವ ಸಂಸ್ಕಾರ ಯಾರು ಮಾಡಿದರೆಂದು ತಿಳಿಯುವ ಕುತೂಹಲ!!....ಹಾಳಾದ್ದು . “ ನಿಮ್ಮ ಧಾರಾವಾಹಿ ನಿರ್ದೇಶಕರೇ ಮಾಡ್ತಿದ್ದಾರೆ , ನನಗೂ ಹೇಳದೆ ಬರೋ ಅಂತ್ತಾದ್ದು ಏನಾಯಿತು “ ಹೌದಲ್ಲವೇ ಹಸಿ ಬಿಸಿ ಮಾತು ಕೇಳಿದ ನನ್ನ ಮನಸ್ಸು ಅಲ್ಲಿಂದ ಹೊರಡುವಾಗ ನನ್ನೊಡನೆ ಬಂದಿದ್ದ ಚಿಟ್ಟೆಯನ್ನು ಮರೆತು ಹೋಗಿತ್ತು !! ಚಿಟ್ಟೆ ಯತ್ತ ಕ್ಷಮಿಸುವಂತೆ ನೋಟ ಬೀರಿ , ಮಡಿಕೇರಿ ಯ ನಿರ್ಮಾಪಕರ ಕೊಟಡಿ ಬಳಿ  ನಾನು ಕೇಳಿದ್ದು, ಕಂಡದ್ದು ಅವಳಿಗೆ ಬೈದದ್ದು ಎಲ್ಲವನ್ನು ವಿವರಿಸಿ “ ಸಿನೆಮಾದಲ್ಲಿ ಅಭಿನಯಿಸೋ ನಿನ್ನ ಆಸೆ ಈಡೇರಿಸಕ್ಕೆ ಆಗಲಿಲ್ಲ ಸಾರಿ “ ಅಂದೆ. “ ಅಯ್ಯೋ ಅದು ಹಾಳಾಗ್ ಹೋಗ್ಲಿ ,  ಏನು ಎತ್ತ ಅಂತ ಯಾರೊಬ್ಬರಿಗೂ ತಿಳಿಸ್ದೆ ನೀನು ಬರಬಾರದಿತ್ತು . ಅಲ್ಲೆಲ್ಲಾ ಈಗ ಏನ್ ಹೇಳ್ತಿದ್ದಾರೆ ......” ಮಾತನ್ನು ನುಂಗಿಕೊಂಡು “ ಮುಂದೆ ಏನ್ ಮಾಡ್ಬೇಕು ಅಂತ್ತಿದ್ದೀಯ “ ಅದಕ್ಕೆ ಉತರಿಸದೆ “ ಹಿರೋಯಿನ್ ಜೊತೆ ಅಸಭ್ಯವಾಗಿ ವರ್ತಿಸಿದ ಅದಕ್ಕೆ ಓಡಿಸಿದ್ವಿ ಅಂದ್ರಾ ...?” ಪ್ರಶ್ನೆ ಮಾಡಿದೆ , ಈಗ ಉತ್ತರಿಸದೆ ಇರುವ ಸರದಿ ಚಿಟ್ಟೆಯದು, “ ನಾನು ಊಹಿಸಿದ್ದೆ ಬಿಡು” ಅಂದೆ, ವಿಷ್ಯ ಮುಂದುವರಿಸಲು ಇಷ್ಟವಿಲ್ಲದ ಚಿಟ್ಟೆ “ ಏನಾದ್ರೂ ತಿಂದ್ಯಾ ಇಲ್ವಾ ?” ಎಂದು ಕಾಳಜಿ ತೊರಿಸಲು ಮುಂದಾದ “ ಹಸಿವಿಲ್ಲ ..ಅಥವಾ ಆಗ್ತಾ ಇರೋದು ಗೊತ್ತಾಗ್ತಾ ಇಲ್ಲ “ ಅಂದೆ ಆದರೆ ನನಗೆ ಆ ವಿಚಾರ ಇನ್ನು ಹೆಚ್ಚು ಮಾತನಾಡುವುದು ಬೇಕಿತ್ತು ಹಾಗಂತ ಮನಸ್ಸು ಬಯಸುತ್ತಿತ್ತು!!ಅವಕಾಶ ಕೊಡದ ಚಿಟ್ಟೆ ಜೇಬಿನಿಂದ ಇನ್ಲ್ಯಾಂಡ್ ಪತ್ರ ತೆಗೆದು “ ಅಪ್ಪಯ್ಯನಿಗೆ ಪತ್ರ ಬರೀ ಉಗಾದಿಗೆ ಊರಿಗೆ ಬರ್ತಾ ಇದ್ದೀನಿ ಅಂತ ತಿಳ್ಸು . ನಾನಲ್ಲ ನೀನು “ ನಾನು ಮತ್ತೇನೋ ಹೇಳುವಷ್ಟರಲ್ಲಿ
“ ಉಸ್ರೆತ್ ಬ್ಯಾಡ ಸುಮ್ಕೆ ಬರೀಲ , ಅಬ್ಬಕ್ಕೆ ಜಾತ್ರೆಗೆ ಹಳ್ಳಿಗ್ ವೋಗಿ ಬಂದು ಮಾಡಿದ್ರೆ ಕಳ್ಳಿ ಆಲ್ಗು
 ಕರುವಿನ್ ಆಲ್ಗು ಯತ್ಯಾಸ ಗೊತ್ತಾಗಿರೋದು . ಲೇ ನಾವ್ ಹೆಣ್ ಆಗ್ ವುಟ್ಲಿ ಗಂಡಾಗ್ ವುಟ್ಲಿ ವುಟಕ್ಕೆ ಮುಂಚೆನೇ ನಮ್ಮ ಹಿರೀರು ನಮ್ಮ  ಲಗ್ನ ನಿಶ್ಚಯ ಮಾಡಿಕಿರ್ತಾರೆ ಅಂತ ವಂಸ ನಮ್ದು ಅಂತಾದ್ರಾಗೆ ಕಟ್ ಕೊಳಕ್ಕೆ ಮುಂದೆಯಾ ನೂರ್ ಮಗ್ಗಲಾಗೆ ಬಿದ್ದ್ ಮೂರೊತ್ತು  ಬೆದೆಗ್ ಬೀಳೋ  ಬೆರೆಕೆ ಮುಂಡೇವು ನಮಗೆ ಆಗ್ ಬತ್ತವೆನ್ಲಾ.... ಊರ್ನಾಗೆ ಓಡಾಡ್ಕೊಂಡು ಮೇಯ್ದ ಅಸನ ಕೊಟ್ಟ್ಗೆ ಗೆ ಕಟ್ಟಿ ಸಾಕಕ್ ಆಗಕಿಲ್ಲ. ಅವ್ವ ಅಪ್ಪಯ್ಯ ನ ವೊಟ್ಟೆ ಉರ್ಸಿದ್ ಸಾಕು , ಅವ್ರ ಇನ್ನು ಉಸ್ರು ಬುಟ್ರೆ ನಿನ್ ಬಾಳು ಬೇಲಿ ಮುಳ್ಳಾಗೊಯತತೆ. ಸುಮ್ಕೆ ಪತ್ರ ಬರದು ಉಗಾದಿ ಗೆ ಉರ್ ಸೇರ್ಕೋ. ನಿಂಗ್ ತಿನಕ್ ಏನಾದ್ರ ತಕೊಂಡ  ಬತ್ತೀನಿ ಅಷ್ಟ್ರಾಗ್ ಬರದು ಮುಗ್ಸು “ ರಾಜಾಜ್ಞೆಯಂತೆ ಒಂದೇ ಸಮನೆ ಹೇಳಿ ಮೊದಲ ಬಾರಿ ನನ್ನ ಚೆಡ್ಡಿ ಗೆಳೆಯ ಚಿಟ್ಟೆ ಯಾಗಿ ಬೆಂದೆದೆಯ ಮೇಲೆ ಬೈಗುಳುದ ತಂಪಾದ ಮಳೆ ಸುರಿಸಿ  ಹೊರಟು ಹೋದ. ಆಶ್ಚರ್ಯ !! ಅವನು ಹಾಗೆಯೇ ತೆರೆದು ಬಿಟ್ಟು ಹೋದ ಬಾಗಿಲಿನಿಂದ ಬೀಸುತಿರುವ ಗಾಳಿ ನನ್ನದೆಯೋಳಗೆಲ್ಲ ಸುಳಿದಾಡಿ ಸುಟ್ಟಿದ್ದ ಹರಿವುಗಳನೆಲ್ಲ ತಂಪಾಗಿಸುತಿದೆ!!ರಾಡಿಯಾಗಿದ್ದ ನನ್ನ ಮನಸ್ಸು ಅವಳೆಡೆಗೆ ಚಿಟ್ಟೆ ಯಾಡಿದ್ದ ಕಟು ಮಾತುಗಳ ಕೇಳಿದ ನಂತರ ತಿಳಿಯಾಗುತಿದೆ!!ನನ್ನೊಳಗಿದ್ದ ಅವಳ ಜಾಗದಲ್ಲೀಗ ಧಿವ್ಯ ನಿರ್ಲಕ್ಷ್ಯ ಮತ್ತು ತಿರಸ್ಕಾರದ ಭಾವ ಆಸೀನವಾಗಿ ಜಗತ್ತಿನೆಡೆಗೆ ಮುಗುಳ್ನಗುತ್ತಿವೆ..!
ಪತ್ರ ಕೈಗೆತ್ತಿಕೊಂಡು ವಿಳಾಸ ವಿವರ ವಾಗಿ ಬರೆದು ವಿಷಯ ಒಂದೇ ಸಾಲು ಬರೆದೆ “ ಉಗಾದಿಗೆ ಮುಂಚೆ ಊರಿಗೆ ಬರುತಿದ್ದೇನೆ “ ಪತ್ರ ಅಂಟಿಸುವ ಮುಂಚೆ ನೆನಪಾದರು ಬೇಕಂತಲೇ ಗಿರಿಜಳ ಬಗ್ಗೆ ಬೆರೆಯಲಿಲ್ಲ.!!
ಮಹತ್ವಾಕಾಂಕ್ಷೆ ಹೊತ್ತು ಸೋತು ಮರಳಿದವನ ಗೆಲ್ಲುವವಳು ಅವಳೇ ಏನೋ .......................

.........ಮುಗಿಯಿತು                             ಚಿತ್ರ ಕೃಪೆ:ಗೂಗಲ್ ಇಮೇಜಸ್ 


No comments:

Post a Comment