Wednesday, 16 July 2014

ಸ್ವಗತ ಅನುದಿನಾ ...

ಒರಟು ನೆಲವೇ ಮನ 
ಹರಕು ಚಾಪೆಯೇ ಭಾವ 
ಕಮಟು ದಿಂಬಿನ ಕನಸು 
ಹಿಡಿದಿಟ್ಟಿದ್ದ ರಾತ್ರಿ ...

ಗಲ್ ಗೆಜ್ಜೆಯ ಮುಂಜಾನೆ 
ಕಣ್ ಕೋಲ್ಮಿಂಚು ಹರಿದು 
ಬಾಗಿಲು ಬಡಿದಾ ಸದ್ದು 
ತೆರೆದೆ ಮಾತಾಡದೇ.. 



ಒಳ ಬಂದು ಕುಳಿತು 
ಕಿಲ ಕಿಲನೆ ನಕ್ಕು 
ಬಿರ ಬಿರನೆ ಹೊರನಡೆದೆ 
ಹೇಳದೇ ..ಕೇಳದೇ..

ಬಂದು ಬಿತ್ತಿದವಳು 
ಎತ್ತ ಹೋದಳವಳು 
ಕೇಳಿತು ಅನುದಿನ 
ಎನ್ನ ಮನ ನಿನ್ನಾಣೆ ..


ತೆರೆದು ಹೊರಬಾಗಿಲು 
ಜಡಿದೆ ಒಳ ಬಾಗಿಲು 
ನಿನಗೆ ಸ್ವಾಗತ 
ನನಗೆ ಸ್ವಗತ ಅನುದಿನಾ .

                                   ಚಿತ್ರ ಕೃಪೆ : ಗೂಗಲ್ ಇಮೇಜಸ್ 

Thursday, 10 July 2014

ಶ್ರಾವಣ ಸಂಜೆ .....

ಒಂದು ಸುಂದರ ಶ್ರಾವಣ ಸಂಜೆ
ನನ್ನದಾಗಲಿ ..ನಿನ್ನದಾಗಲಿ
ತನುಮನದ ಬೆಸುಗೆ ಮಳೆಗೆ
ಹೊಸಭಾವ ಬೆಳೆ ತೆನೆಯಾಗಲಿ .

ಗಂಟ್ಟಿಕ್ಕಿದ ಹುಬ್ಬು ಆಚೀಚೆ ಸರಿದು
ಬಿಸಿಉಸಿರ ಬಿಟ್ಟು ಬಿಟ್ಟೂ ಹಿಡಿದು
ನಯನನೇತ್ರದೊಳು ಸರಸ ಸಂಚಾರ
ಕುಳಿಗಲ್ಲ ಅರಳಿ ಅಧರ ಮಧು ಪಾತ್ರ


ನಾನು ನೀನೇನುತಿದ್ದ ತೋರ್ ಬೆರಳು
ಪ್ರಶ್ನೆ ಪ್ರತಿಷ್ಠೆ ಪಣವಾಗಿದ್ದ ಹೆಬ್ಬೆರಳು
ಕೊನೇ ಆಕಳು ಕಿರುಬೆರಳು ಬೆಸೆದು
ಅನಾಮಿಕದರಿವು ತೃಪ್ತಾತ್ಮಗಳ ಮದ್ಯದಲ್ಲಿ

ಒಂದು ಸುಂದರ ಶ್ರಾವಣ ಸಂಜೆ
ನನ್ನದಾಗಲಿ ..ನಿನ್ನದಾಗಲಿ
ತನುಮನದ ಬೆಸುಗೆ ಮಳೆಗೆ
ಹೊಸಭಾವ ಬೆಳೆ ತೆನೆಯಾಗಲಿ .

                                             ಚಿತ್ರಕೃಪೆ : ಗೂಗಲ್ ಇಮೇಜಸ್ 

Monday, 7 July 2014

ನಾನು ... ನೀನು

ಶುಭ್ರ ಹುಣ್ಣಿಮೆಯ ಹೊನಲ ರಾತ್ರಿಗೆ
ಹಿನ್ನೀರಿನ ಬಂಡೆಯ ಮೇಲೆ
ಗಂಟೆಗಟ್ಟಲೆ ಕುಳಿತು
ಮಾತು -ಮುತ್ತು -ಮತ್ತೂ ಇರದೇ
ಹಾಗೇ ಎದ್ದು ಬಂದೆವಲ್ಲ
ಶಶಿ ಮೌನಕ್ಕೆ ಮರುಳಾಗಿ
ನಿಶೆ ನಿದ್ದೆಗೆ ಶರಣಾಗಿತ್ತು

ಸುದ್ದು ಗದ್ದಲದ ಸಂಜೆಯಲ್ಲಿ
ಪರಿಚಯದ ರಥ ಬೀದಿಯಲ್ಲಿ
ನಾನು ಈ ಬದಿ ನೀನು ಆ ಬದಿ
ನಿಂತು - ನಗದೇ - ನಗಿಸದೇ
ಹೊರಟೇ ಹೋದೆವಲ್ಲ
ಹೂ ಮಾರುವವಳ ಬುಟ್ಟಿಯಲ್ಲಿ
ಮಲ್ಲಿಗೆ ಗೇಲಿ ಮಾಡಿದಂತಾಯ್ತು


ಇಂಚರದ ಮಬ್ಬು ಮುಂಜಾನೆ
ನಾ ತಂದಿದ್ದ ಗುಲಾಬಿ ಗಿಡ
ನೀ ಕುಂಡ ಕಾಣಿಸಿದ್ದೇ ತಡ
ಬೆಳೆದು - ಬಿಟ್ಟಿದ್ದು - ಒಂದೇ ಹೂ
ಅದೂ ಬಾಡಿ ಹೋಗಿತ್ತು
ಹೊಯ್ದಾಟದಲ್ಲಿ ಹೂ ತೋಟ
ಸಾಕು ಸಾಕಾಗಿ ಬೇಡವಾಗಿತ್ತು


ಜನಸಂದಣಿಯ  ರಸ್ತೆಯಲ್ಲಿ
ಯಾರದ್ದೋ ಶವ ಯಾತ್ರೆಯಲ್ಲಿ
ಅಕ್ಕ ಪಕ್ಕ ನಡೆವ ಅನಿವಾರ್ಯತೆ
ಮೇಲೆರಿಚಿದ್ದ ಪುರಿ ಕಾಳುಗಳು
ನಮ್ಮ ಮೈ ಮೇಲೆ ಬಿದ್ದವಷ್ಟೂ 
ನಮ್ಮ ಬದುಕಿನ ಮಸಣದ ಪಯಣವ
ಬೇಡವಾದರೂ ನೆನಪಿಸುತಿತ್ತು .

                                            ಚಿತ್ರಕೃಪೆ : ಗೂಗಲ್ ಇಮೇಜಸ್ 

Thursday, 3 July 2014

ನನ್ನೊಲವಿನ ಕಡೆಗೆ....

ನನಗೇನು ಬೇಸರವಿಲ್ಲ ನಿನ್ನೊಂದಿಗೆ
ಬೈದು ಕೊಳ್ಳುವುದೆಲ್ಲಾ ..ನಾ
ನಿನ್ನೆಡೆಗಿದ್ದ ನನ್ನೊಲವಿನ ಕಡೆಗೆ.

ನಾ ಚಾಚದೆ ಹೋಗಿದ್ದರೆ
ನಿನ್ನದೆಲ್ಲಿ " ಕೈ " ಕೂಡುತಿತ್ತು
ನೋಡದೇ ನಾ ಅಡಿಯಿಟ್ಟಿದ್ದರೆ
ಕುಡಿ ನೋಟಕೆಲ್ಲಿ ಕವಡೆಕಿಮ್ಮತ್ತು.

ಸುಖ ಸುಮ್ಮನಂದು ನಕ್ಕವಳು ನೀ  
ಸಖಿ ಸರಿದಳೆಂದು ಬಿಕ್ಕುವೆನು ನಾ

ಮೌನದಲ್ಲೇ ಮೆರವಣಿಗೆ ನಿನ್ನದು
ಗೆಜ್ಜೆ ಗಲ್ ಗೆ ಹೆಜ್ಜೆ ಸದ್ದು ನನ್ನದು

ಹೃದಯ ತೇರಿಗೆ ತೋರಣ ಕಟ್ಟಿ
ಇರುಳ ಹಾಡಿಗೆ  ನಾ ಮರುಳಾದೆ
ಬರುವ ತೋರಿಕೆ ತಡಿಕೆ ನೆಟ್ಟಿ
ವಿದಾಯ ವಿರಹ ನೀ ಮರಳದೇ.

ನನಗೇನು ಬೇಸರವಿಲ್ಲ ನಿನ್ನೊಂದಿಗೆ
ಬೈದು ಕೊಳ್ಳುವುದೆಲ್ಲಾ ..ನಾ
ನಿನ್ನೆಡೆಗಿದ್ದ ನನ್ನೊಲವಿನ ಕಡೆಗೆ.

                                ಚಿತ್ರಕೃಪೆ : ಗೂಗಲ್ ಇಮೇಜಸ್ 

Saturday, 28 June 2014

ಯಾಕೆ ಕೊಟ್ಟೆ ದೇವರೇ ....

ಯಾಕೆ ಕೊಟ್ಟೆ ದೇವರೇ 
ಇಷ್ಟು ಬಗೆಯ ಹೂ ಗಳ 
ಒಂದೇ ಊರ ತೋಟದಲ್ಲಿ ..

ಸಣ್ಣದೊಂದು ಬಳ್ಳಿ ನೆಡು 
ಖಾಲಿ ಎದೆಯ ಬಯಲಿನಲಿ 
ಪಿಸು ಮಾತ ಹಸಿರು ಚಿಗುರಿ
ಪುಷ್ಪವೊಂದು ಅರಳಲಿ.

ಒಂಟಿ ಬಾಳ ಸರಿಸಿ ಪ್ರೇಮ ಸುರಿಸಿ
ಸುಮಕೆ ನೀಡು ಬಣ್ಣ ಬಣ್ಣದ ಕಣ್ಣು
ಕೊಟ್ಟು ನೋಡು ಕೇಳಿದವರವ 
ಮಾಲಿ ಇನ್ನು ಮಾಲೀಕನಿಗೆ ಶರಣು
 


ಕೀಳಲೊಲ್ಲೆ.. ಕೇಳಲೊಲ್ಲೆ ನಾ 
ಪರ ನಾರಿ ಸಹೋದರನಂತೆ 
ಹೂವು ಕೊಟ್ಟು ಮುಳ್ಳೂ ಬಿಡಲಿ 
ನನ್ನದೇ ಬಳ್ಳಿ "ನನ್ನೆದೆ'ಯ ಭಾವದಲಿ 

ಯಾಕೆ ಕೊಟ್ಟೆ ದೇವರೇ 
ಇಷ್ಟು ಬಗೆಯ ಹೂ ಗಳ 
ಒಂದೇ ಊರ ತೋಟದಲ್ಲಿ ....


ಚಿತ್ರಕೃಪೆ:ಗೂಗಲ್ ಇಮೇಜಸ್ 

Monday, 23 June 2014

ಶ್ರದ್ಧೆ ....

ಮುಂಜಾನೆಗೆ 
ಮುಗಿದು ಹೋಗುವ 
ಭಯವಿದ್ದರೂ 
ಪ್ರತೀ ಬಾರಿ ಬರುವ 
ಅದೇ ಕನಸನ್ನು 
ಅಷ್ಟೇ ಶ್ರದ್ದೆಯಿಂದ 
ಪ್ರೀತಿಸುತ್ತೇನೆ ............ 






ಚಿತ್ರ ಕೃಪೆ : ಗೂಗಲ್ ಇಮೇಜಸ್ 

Friday, 13 June 2014

ಮುಗುಳ್ನಗೆ ..ಮುಲಾಮು

ಹುಣ್ಣಿಮೆಗೊಮ್ಮೆಯಾದರು ನೀ ಬಂದು 
ಬಣ್ಣದಂಗಿಯ ಹಿಂದಿರುವ ಎದೆ ಹುಣ್ಣಿಗೆ 
ಮುಗುಳ್ನಗೆಯ ಮುಲಾಮು ಹಚ್ಚು! 


ಏಂದೂ ಮಾಯದ ಗಾಯದಂಗಳದಿ 
ನನ್ನ ಬುಜವೇರಿ ಕುಳಿತ ಕನಸುಗಳ 
ಪಾಡು ಹಾಡಾದ ಕಡಿತ ಕುರಿತಾದ 
ತುರಿಕೆಯ ತವಕ ತುಂಬುತ್ತದೆ!!


                                                     ಚಿತ್ರ ಕೃಪೆ : ಗೂಗಲ್ ಇಮೇಜಸ್