Monday 7 July 2014

ನಾನು ... ನೀನು

ಶುಭ್ರ ಹುಣ್ಣಿಮೆಯ ಹೊನಲ ರಾತ್ರಿಗೆ
ಹಿನ್ನೀರಿನ ಬಂಡೆಯ ಮೇಲೆ
ಗಂಟೆಗಟ್ಟಲೆ ಕುಳಿತು
ಮಾತು -ಮುತ್ತು -ಮತ್ತೂ ಇರದೇ
ಹಾಗೇ ಎದ್ದು ಬಂದೆವಲ್ಲ
ಶಶಿ ಮೌನಕ್ಕೆ ಮರುಳಾಗಿ
ನಿಶೆ ನಿದ್ದೆಗೆ ಶರಣಾಗಿತ್ತು

ಸುದ್ದು ಗದ್ದಲದ ಸಂಜೆಯಲ್ಲಿ
ಪರಿಚಯದ ರಥ ಬೀದಿಯಲ್ಲಿ
ನಾನು ಈ ಬದಿ ನೀನು ಆ ಬದಿ
ನಿಂತು - ನಗದೇ - ನಗಿಸದೇ
ಹೊರಟೇ ಹೋದೆವಲ್ಲ
ಹೂ ಮಾರುವವಳ ಬುಟ್ಟಿಯಲ್ಲಿ
ಮಲ್ಲಿಗೆ ಗೇಲಿ ಮಾಡಿದಂತಾಯ್ತು


ಇಂಚರದ ಮಬ್ಬು ಮುಂಜಾನೆ
ನಾ ತಂದಿದ್ದ ಗುಲಾಬಿ ಗಿಡ
ನೀ ಕುಂಡ ಕಾಣಿಸಿದ್ದೇ ತಡ
ಬೆಳೆದು - ಬಿಟ್ಟಿದ್ದು - ಒಂದೇ ಹೂ
ಅದೂ ಬಾಡಿ ಹೋಗಿತ್ತು
ಹೊಯ್ದಾಟದಲ್ಲಿ ಹೂ ತೋಟ
ಸಾಕು ಸಾಕಾಗಿ ಬೇಡವಾಗಿತ್ತು


ಜನಸಂದಣಿಯ  ರಸ್ತೆಯಲ್ಲಿ
ಯಾರದ್ದೋ ಶವ ಯಾತ್ರೆಯಲ್ಲಿ
ಅಕ್ಕ ಪಕ್ಕ ನಡೆವ ಅನಿವಾರ್ಯತೆ
ಮೇಲೆರಿಚಿದ್ದ ಪುರಿ ಕಾಳುಗಳು
ನಮ್ಮ ಮೈ ಮೇಲೆ ಬಿದ್ದವಷ್ಟೂ 
ನಮ್ಮ ಬದುಕಿನ ಮಸಣದ ಪಯಣವ
ಬೇಡವಾದರೂ ನೆನಪಿಸುತಿತ್ತು .

                                            ಚಿತ್ರಕೃಪೆ : ಗೂಗಲ್ ಇಮೇಜಸ್ 

No comments:

Post a Comment