Friday 17 May 2013

ಕನವರಿಕೆ... 2





ಅಪ್ಪಯ್ಯನ ಅಣತಿಯಂತೆ, ಹಳ್ಳಿಯ ಹಿರಿ ತಲೆಗಳೆಲ್ಲಾ ನಾನು ಕಂಡಾಗಲೆಲ್ಲ ಸಿನೆಮಾ ಸೇರಿ ಎಕ್ಕುಟ್ಟಿ ಹೋದವರ ಕಥೆಯನ್ನು ಸರದಿ ಸಾಲಿನಲ್ಲಿ ನಿಂತು ನನಗೆ ವರದಿ ಮಾಡತೊಡಗಿದಾಗ ಅವರ ಬಾಯಿ ಮುಚ್ಚಿಸಲು ಬೇರೆ ದಾರಿ ಕಾಣದೇ ಮುಂಜಾನೆಗೆ ಎದ್ದು ನಮ್ಮ ಅವ್ವನ ಪ್ರೀತಿಯ ಗೌರಿಯನ್ನು,ಹಾಗೇ ಜೋಡೆತ್ತುಗಳನ್ನು ಮಲ್ಲಾರಿ ಹಳ್ಳಕ್ಕೆ ಹೊಡೆದುಕೊಂಡು ಹೋಗಿ ಮೈ ತಿಕ್ಕ ತೊಡಗಿದೆ !
 ಹಟ್ಟಿಯಲ್ಲಿ ಮಾತು ನಿಂತು ನನಗೆ ಶಾಂತಿ ಸಿಕ್ಕಿತು,  ಊರ ಬೀದಿಯಲ್ಲಿ ಕೂಡ. ಎಲ್ಲರೂ ನನ್ನ ನಂಬಿದ್ದಾರೆ ಎನ್ನುವ ನಂಬಿಕೆಗೆ ಕಳ್ಳಿ ಹಾಲು ಸುರಿದಂತಾಗಿದ್ದು ಉಗಾದಿಯ ಆಸುಪಾಸಿನಲ್ಲಿ ಗಿರಿಜಾ ಜೊತೆಗೆ ನನ್ನ ಲಗ್ನ ನಿಶ್ಚಯ ಮಾಡಿ ಮೊದಲ ಹುಣ್ಣಿಮೆಗೆ ಮುಂಚೆ ಮದುವೆಯೂ ಮುಗಿಸಬೇಕು ಎಂದು ಅಪ್ಪಯ್ಯ ಒಳಗೊಳಗೇ ತೀರ್ಮಾನಿಸಿದ್ದಾರೆ ಎಂಬ ಗುಸು ಗುಸು ಕೊಟ್ಟಿಗೆಯಲ್ಲಿ ಕಸ ಎತ್ತುವರ ನಡುವಿನಿಂದ ನನ್ನ ಕಿವಿಗೆ ಬಿದ್ದಾಗಲೇ!
ತಡ ಮಾಡಿದರೆ ಜೀವನ ಪರ್ಯಂತ ನೇಗಿಲು ಹೆಗಲೇರುವುದು ಖಂಡಿತ ಎನ್ನಿಸಿ ದಿನ ಗೊತ್ತು ಮಾಡಿಕೊಂಡಿಯೇ ಬಿಟ್ಟೆ . ಸಂಜೆವರೆಗೂ ಅಪ್ಪಯ್ಯನ ಬಳಿ ಕುಳಿತು ಜಮೀನಿನ ಬಗ್ಗೆ ಮಾತನಾಡಿ, ಮಲಗುವ ಮುನ್ನ ಅವ್ವ, ಗಿರಿಜಾಳ ವಿಚಾರ ಬೇಕಂತಲೇ ಎತ್ತಿದ್ದಾಗ ನಾಚಿಕೊಂಡಂತೆ ನಟಿಸಿ ಗೆರೆ ದಾಟದ ಹೈದನಿವ ಎನ್ನಿಸಿ ಅವರೆಲ್ಲಾ ನೆಮ್ಮದಿಯ ನಿದ್ದೆಗೆ ಜಾರಿದ ಮೇಲೆ ಕುಡುಕ್ ನಿಂಗ ಎರೆಡೆರೆಡು ಸಿನೆಮಾ ಹಾಡನ್ನು ಒಟ್ಟಿಗೆ ಬೆರೆಸಿ ತಾಳ ಕೆಡದಂತೆ ಹಾಡುತ್ತಾ ಹಟ್ಟಿಯ ಮುಂದೆ ಹೋಗುವವರೆಗೂ ಕಾದಿದ್ದು ಕೈ ಗೆ ಸಿಕ್ಕ ಬಟ್ಟೆ- ಬರೆ ,ಚಿನ್ನವಿರಬೇಕೆಂಬ
ಅನುಮಾನದಲ್ಲಿ ಅವ್ವನ ಬಳೆ ,ಅಪ್ಪಯ್ಯನ ಕಿಸೆಯಲ್ಲಿ ಸಿಕ್ಕಷ್ಟು ಬಳಿದು , ಪೋಲೀಸರ ಶಿಳ್ಳೇ ಪೀಪಿ  ಗಿಂತ ಹೆಚ್ಚು ಶಬ್ದ ಮಾಡುವ ಪೆಟಾರಿಯ ತಂಟೆಗೆ ಹೋಗದೆ ಮನೆಯಿಂದ ಹೊರಬಿದ್ದು , ಮಾರಿಗೆ ಮೀಸಲಾಗಿದ್ದ ಸಾಕವ್ವನ ಕೋಳಿಯ ನನ್ನ ಪಾಲಿನ ಕೊನೆಯ ಅಲರಾಂ ಕೇಳಿ ಅದಕ್ಕೆ ಮುಂಚಿತವಾಗೇ  ಅಶ್ರುತರ್ಪಣ ಸಲ್ಲಿಸಿ ಊರಿಂದ ಕಾಲ್ಕಿತ್ತೆ .
                         ***********                                              

ಬೆಂಗಳೂರಿಗೆ ಬಂದು ಬೀದಿಗೆ ಬೀಳಲಿಲ್ಲ , ಚಿಟ್ಟೆಗೆ ಪೋನ್ ಮಾಡಿ ಎಲ್ಲಾ ವ್ಯವಸ್ತೆ ಮಾಡಿಕೊಂಡೇ ಹಳ್ಳಿಯಿಂದ ಹೊರಟಿದ್ದೆ. ಮೆಜಸ್ಟಿಕ್ ನಿಂದ ಅವನ ರೂಂ ಗೆ ಬಿ.ಎಂ.ಟಿ.ಸಿ. ಗೆ ಕಾಯದೆ ಆಟೋ ದಲ್ಲೇ ಹೊರಟಿದ್ದೆ ಜೇಬ್ನಲ್ಲಿ ಕದ್ದ ಕಾಸಿತ್ತಲ್ಲವೇ ತಸು ಧಾರಾಳತನದ ದೈರ್ಯ ಜಾಸ್ತಿ. ಚಿಟ್ಟೆ ಯ ಹೆಸರು ಚಿದಾನಂದ, ಹುಡುಗಿಯರ ಹಿಂದೆ ಮುಂದೆ ಸುತ್ತುತಿದ್ದ ಎಂಬ ಕಾರಣಕ್ಕೆ ಚಿಟ್ಟೆ ಎಂದು ಕರೆಯುತಿದ್ದೆವು. ನನ್ನ ಬಾಲ್ಯ ಹಾಗೂ ನಂಬುಗೆಯ ಏಕ ಮಾತ್ರ ಸ್ನೇಹಿತ !! ಕಾರಣವಿಷ್ಟೆ , ನನ್ನ ಸಿನೆಮಾ ಕನಸಿಗೆ ನೀರೆರದದ್ದು ಅವನೊಬ್ಬನೇ ..! ಅದೂ ಏಕೆಂದರೆ ಅವನಿಗೂ ನಟನಾಗಬೇಕೆಂಬ ಹುಚ್ಚು!! ಹೀಗಾಗಿ ನನಗಿಂತ ಮುಂಚೆಯೇ ಮನೆ ಬಿಟ್ಟು ಬಂದು ಬೆಂಗಳೂರು ಸೇರಿ ಮೂರೇ ತಿಂಗಳಿಗೆ ಮೋಟಾರ್ ರಿವೈಂಡಿಂಗ್ ಕೆಲಸಕ್ಕೆ ಸೇರಿ ನಟನೆ ಏನಿದ್ದರೂ ನನ್ನ ಪ್ರವೃತಿ ಮಾತ್ರ ಎಂದು ಘೋಷಿಸಿಕೊಂಡು ನನ್ನಂತವರ ಆಸೆಗೆ ಅಜೀವ ಪೋಷಕತ್ವ ಪಡೆದುಕೊಂಡು ತನ್ನ ಕನಸನ್ನು ಮುಂದುವರೆಸಿದ್ದ !
ಆಟೋದವನು ಚಿಲ್ಲರೇ ನೀಡುವುದರಲ್ಲಿ ಪರವಾಗಿಲ್ಲ ಇಟ್ಕೋ ಎಂದು ಬಾಯ್ಬಿಟ್ಟು ಹೇಳಲು ವಾಸ್ತವದ ಶ್ರೀಮಂತಿಕೆ ನಾಚಿಕೆಯನ್ನುಂಟು ಮಾಡಿ ಅವನತ್ತ ನೋಡದೆ ಚಿಲ್ಲರೇ ಪಡೆಯದೇ ಸರಸರನೆ ಗೇಟ್ನತ್ತ ನಡೆದು ವಠಾರದಲ್ಲಿ ಕಾಲಿಟ್ಟು ಮೆಟ್ಟಿಲೇರಿ ರೂಂ ಸೇರುವುದರೊಳಗೆ ಹಲವರ ಕಣ್ಣು ನನ್ನ ಮೇಲೆ ಹರಿದಾಡಿತ್ತು. ನನ್ನ ಕಂಡೊಡನೆ ಚಿಟ್ಟೆ ಒಂದೇ ಉಸಿರಿಗೆ , ಅನ್ನ ಮಾಡಿದ್ದೇನೆ ಮದ್ಧ್ಯಾನದ ಹೊತ್ತಿಗೆ ರೋಡ್ ತುದಿಯಲ್ಲಿರುವ  ದರ್ಶಿನಿ ಹೋಟಲ್ಗೆ ಹೋಗಿ ನನ್ನ ಹೆಸರು ಹೇಳಿ ಹತ್ತು ರೂಪಾಯಿ ಕೊಟ್ಟ್ರೆ
ಸಾಂಬಾರ್ ಕೊಡ್ತಾರೆ ರಾತ್ರಿಗೂ ಅದೇ ಆಗುತ್ತೆ , ಹೋಟೆಲ್ನಲ್ಲಿ ಚಿಟ್ಟೆ ಅನ್ನಬೇಡ ಚಿದಾನಂದ ಅನ್ನು ಕೆಲಸಕ್ಕೆ ಹೊತ್ತಾಯಿತು ಸಂಜೆ ಸಿಗುತ್ತೇನೆ ಎಂದು ಹೇಳಿ ಹೊರಟವನಿಗೆ ನಾನು ಒಂದೇ ಉಸಿರಿನಲ್ಲಿ ಟಾಯ್ಲೆಟ್ ಎಲ್ಲಿದೆ ? ಎಂದೆ . ಬಂದ ದಾರಿಯಲ್ಲೇ ಹೋಗಿ ಬಲಕ್ಕೆ ತಿರುಗಿದರೆ ಗೇಟು ಎಡಕ್ಕೆ ನೋಡು ಅದೇ ಟಾಯ್ಲೆಟ್ , ಇಲ್ಲಿಂದಲೇ ನೀರು ತೆಗೆದುಕೊಂಡು ಹೋಗು ಅಂದವನೇ ನಡೆದು ಬಿಟ್ಟ . ಬಂದ ದಾರಿಯನ್ನೊಮ್ಮೆ ನೆನಪಿಸಿಕೊಂಡೆ ಬಯಲಲ್ಲಿ ಕೂತು ಸುತ್ತಲಿದ್ದ ಹತ್ತು ತಲೆಗಳ ಜೊತೆ ಬಿತ್ತನೆ, ಬೇಸಾಯ ,ಗೊಬ್ಬರದ ಮಾತಾಡಿ, ಬಂದ ಕೆಲಸ  ಮುಗಿಸಿ ನಿತ್ಯವೂ ಹಟ್ಟಿ ಸೇರುತಿದ್ದ ನನಗೆ ಮೊದಲ ಬಾರಿಗೆ ಬಕೆಟ್ ಹಿಡಿದು ವಠಾರದಲ್ಲಿ ಹಾದು ಟಾಯ್ಲೆಟ್ಗೆ ಹೋಗಲು ತುಂಬಾ ಸಂಕೋಚವಾಯಿತು!!                                                 *************  
ಯಾವ್ದಕ್ಕೂ ಯೋಚನೆ ಮಾಡಪ್ಪಾ........
ಜೀವನಕ್ಕೆ ಅಂತ ಒಂದು ಕೆಲಸ ಇಟ್ಕೊಂಡು ಅಲ್ಲಿಗೆ ಬೀಳೋದು ಒಳ್ಳೇದು ಸರಿ ರಾತ್ರಿ ವರೆಗೂ ನನ್ನನ್ನು  ತಿಂಗಳ ಸಂಬಳಕ್ಕೆ ಎಲ್ಲಾದರು ಕೆಲಸಕ್ಕೆ ಸೇರಿಸಿ ನಂತರ ಸಿನೆಮಾದವರ ಬಳಿ ಕರೆದೊಯ್ಯಲು ಚಿಟ್ಟೆ ಹರಸಾಹಸ ಮಾಡಿ ಕೊನೆಯದಾಗಿ ನುಡಿದಿದ್ದ . ನಾನು ಅದೇ ಕೊನೇ ಎಂಬಂತೆ ನಿನ್ನ ಕೈ ಲಿ ಆದ್ರೆ ಯಾರನಾದ್ರು ಪರಿಚಯಿಸು ನಿನಗೆ ಹೊರೆಯಾಗ್ತೀನಿ ಅನ್ನೋ ಭಯವಿದ್ರೆ ನಾನು ಬೇರೆ ದಾರಿ ನೋಡ್ಕೊತ್ತೀನಿ ಈ ಊರ್ನಲ್ಲಿ ನನಗೆ ಬೇರೆ ಸ್ನೇಹಿತರೂ ಇದ್ದಾರೆ ಎಂದು ಖಾರವಾಗೇ ಹೇಳಿದ್ದೆ .
                             
ಸ್ನೇಹ ಮುರಿದು ಬೀಳುವ ಮಾತು ಬಂದೊಡನೆ ಚಿಟ್ಟೆ,       ಸುಮ್ಮನಾಗಿ ಮಾರನೇ ದಿನವೇ ಅವನ ಕೆಲಸಕ್ಕೆ ರಜ ಹಾಕಿ ಕಲಾಕ್ಷೇತ್ರ ಕಾನಿಷ್ಕ ಎಂದೆಲ್ಲಾ ಸುತ್ತಾಡಿಸಿ ಒಂದ್ದಿಬ್ಬರಿಗೆ ಪರಿಚಯಿಸಿದಾಗ ಅವರುಗಳು ಚಿದು ಎಲ್ಲ ಹೋಗಿದ್ಯೋ ಇಷ್ಟು ದಿನ , ಸೈಕಲ್ ಹೊಡ್ದು ಸಾಕಾಯಿತೇ.., ಕಾಸ್ ಕೇಳದ್ರೆ ಕೆಲಸ ಇಲ್ಲ! ಕೆಲಸ ಕೇಳದ್ರೆ ಕಾಸಿಲ್ಲ..! ಅಲ್ಲವಾ ಎಂಬಿತ್ಯಾದಿ ಮಾತುಗಳನ್ನು ಕೇಳಿದಾಗಲೇ ನನಗೆ ಅರ್ಥ ವಾಗಿದ್ದು ಚಿಟ್ಟೆಗಿಲ್ಲಿ ಸಂಪರ್ಕ ತಪ್ಪಿ ಹೋಗಿದೆ ಎಂದು. ಆದರೂ.. ಅವನು ಅನಿವಾರ್ಯ ಏಕೆಂದರೆ ನನಗೆ ಅದು ಇಲ್ಲವಲ್ಲ!!
ಹಾಗೂ ಹೀಗೂ ತಿಂಗಳು ಕಳೆಯುವುದರಲ್ಲಿ ಸಿನೆಮಾ ರಂಗದ ಮುಕ್ಕಾಲು ಮಾತುಗಳು ತಂಗಳು ಆಗಿತ್ತು . ಹೋದ ಕಡೆಯೆಲ್ಲ ನನ್ನ ವಿದ್ಯಾಭ್ಯಾಸ ಮಾಸ್ಟರ್ ಡಿಗ್ರಿ ಎಂದು ಧರ್ಪದಿಂದ ಹೇಳುತಿದ್ದೆ ಅವರೆಲ್ಲಾ ಮರು ಮಾತಾಡದೆ ಆಯಿತು ತಿಳಿಸ್ತಾರಂತೆ ಎಂದು ಅವರ ಸುತ್ತಲೂ ಇರುತಿದ್ದ ಒಬ್ಬನ ಕೈಯಲ್ಲಿ ಹೇಳಿ ಕಳುಹಿಸುತಿದ್ದರು!! ಈ ರಂಗಕ್ಕೆ ಬರಲು ಇದಕಿಂತ ಇನ್ನೆನ್ನಾದರು ವಿದ್ಯಾಭ್ಯಾಸ ಬೇಕೇ ?? ಚಿಟ್ಟೆ ಯನ್ನೊಮ್ಮೆ ಕೇಳಿದೆ  ಇನ್ನು ಮುಂದೆ ಯಾರಾದರೂ ಕೇಳಿದ್ರೆ ಪಿ.ಯು. ಸಿ. ಫೇಲ್ ಎಂದು ಹೇಳು ಎಲ್ಲವೂ ಸರಿಯಾಗುತದೆ ಎಂದ! ಅವಮಾನವಾದರು ಅವನ ಅನಿವಾರ್ಯತೆಗೆ ಸಿಲುಕಿದ್ದೆ ಕದ್ದ ಕಾಸೆಲ್ಲ ಖಾಲಿಯಾಗಿತ್ತು !!
ಈಗ ನಾನು ಜಗದೀಶ ಪಿ.ಯು.ಸಿ. ಫೇಲ್ !! ಕೆಲವರಿಗೆ ಆರ್ಟ್ಸ್, ಇನ್ನು ಕೆಲವರಿಗೆ ಕಾಮರ್ಸ್, ಹಲವರಿಗೆ ಸೈನ್ಸ್ ಅಂದಿದ್ದೇನೆ. ಅವರಲ್ಲಿ ಯಾರಾದರು ಸಿಕ್ಕಿ ಮತ್ತೊಮ್ಮೆ ಕೇಳಿದರೆ ಅದೇ ಹೇಳುತ್ತೇನೆ ಎಂಬ ನಂಬಿಕೆ ಖಂಡಿತ ಇಲ್ಲ . ಪಿ.ಯು.ಸಿ. ಫೇಲ್ ಫಲ ಕೊಡಲು ಪ್ರಾರಂಬಿಸಿತು , ಕೆಲವು ನಿರ್ದೇಶಕರು ನನ್ನ ಜೊತೆ ಹೆಚ್ಚು ಹೊತ್ತು ಮಾತನಾಡುವಂತೆ ಆಯಿತು. ಒಂದರೆಡು ಕಡೆ ಕೆಲಸ ಕೊಟ್ಟರು ನನಗ್ಯಾವ ಕೆಲಸ ಕೊಟ್ಟಿದ್ದಾರೆ ಎಂದು ತಿಳಿಯುವುದರಲ್ಲಿ ಇನ್ನ್ಯಾರೋ ಬಂದು ಓಡಿಸಿ ಬಿಟ್ಟಿರುತಿದ್ದರು. ತಿಂಗಳುಗಳು ಉರುಳುತ್ತಾ ಹೋದಂತೆ ನಿಮ್ಮ ಮೋಟಾರ್ ರಿವೈಂಡಿಂಗ್ ಕಂಪನಿಯಲ್ಲಿ ನಂಗೆಷ್ಟು  ಕೊಡ್ತಾರೆ ಎಂದು ಚಿಟ್ಟೆಯನ್ನು ಕೇಳಿಯೇ ಬಿಟ್ಟಿದ್ದೆ .
ಅವನು ನನ್ನೆಡೆಗೆ ವ್ಯಂಗ್ಯವಾಗಿ ನೋಡಿ ನಕ್ಕು ಏನೊಂದು ಹೇಳದೆ ಹೊರಗೆ ಹೋದವನು ದಡಬಡನೆ ಹಿಂದಿರುಗಿ ಬಂದು ಅವಿತುಕೊಳ್ಳಲು ಹೆಣಗಾಡುತ್ತಿದ್ದನು ಒಂಟಿ ರೂಮ್ನಲ್ಲಿ ಬೇರೆ ಕೋಣೆಯಾದರು ಹೇಗೆ ಇದ್ದೀತು ! ಯಾಕೋ ಏನಾಯಿತು ಎಂದು ಕೇಳುವಷ್ಟರಲ್ಲಿ ಎದುರಿಗೆ ನಿಂತಿದ್ದವರು ಅಪ್ಪಯ್ಯ , ಮಾವ ಮತ್ತು ಗಿರಿಜಾ ಕೂಡ !! ಚಿಟ್ಟೆಯ ಜಾಡು ಹಿಡಿದು ಬಂದೇ ಬಿಟ್ಟಿದ್ದರು.





ಮುಂದುವರೆಯುವುದು ......



ಚಿತ್ರಗಳು - ಕೃಪೆ : ಗೂಗಲ್ ಇಮೇಜಸ್ 

No comments:

Post a Comment