Tuesday 14 May 2013

ಕನವರಿಕೆ... 1



ಸಿಕ್ಕ ಸಿಕ್ಕ ಬಸ್ಸು ಲಾರಿ , ಕೈ ಬೀಸಿದಾಗ ನಿಲ್ಲಿಸಿದ ಹತ್ತರಲ್ಲೊಂದು ಬೈಕು ಹತ್ತಿಕೊಂಡು ಮಡಿಕೇರಿಯಿಂದ  ಬೆಂಗಳೂರಿನ ನನ್ನ ವಠಾರ ತಲುಪುವುದರಲ್ಲಿ ಮಧ್ಯಾನ್ಹವಾಗಿತ್ತು. ವಠಾರದ ಗಂಡಸರೆಲ್ಲ ಕೆಲಸಕ್ಕೆ ಹೋಗಿದ್ದರು ,ಹೆಂಗಸರೆಲ್ಲ ರಾತ್ರಿ ಮುಗಿಯದ ಬೆಳಗು ಶುರುವಾಗದ ಮೂರಕ್ಕೆ ಎದ್ದು ಸರದಿಯಲ್ಲಿ ನಿಂತು  ನೀರನ್ನು ಹಿಡಿದ ಶ್ರಮ ಸರಿದೂಗಲು ನಿದ್ದೆಗೆ ಶರಣಾಗಿದ್ದರು . ಸದ್ಯ ಬದುಕಿದೆ!! ನನ್ನ ಕೆದರಿದ ಕೂದಲು ಕೆಂಪಾದ ಕಣ್ಣು ಕಂಡು ಅವರುಗಳು ಪ್ರತಿಯೊಬ್ಬರ ಮನೆಯ ಬಾಗಿಲಿನ ಪಾಲಿನಂತೆ ಕೇಳಿದ್ದ ಪ್ರಶ್ನೆಗಳನ್ನೇ ಅಡಿಗಡಿಗೆ ನಿಲ್ಲಿಸಿ ಕೇಳಿದ್ದರೆ ಸುಟ್ಟ ನನ್ನೆದೆಯ ವಾಸನೆ ಅವರ ಮೂಗಿಗೂ ಬಡಿದು,ನೀರಿಡಿಯುವ ಕಾಲಕ್ಕೆ ನನ್ನ ವಿಚಾರ ಕಥಾ ಕಾಲಕ್ಷೇಪವಾಗಿ ನಾನು ನಿದ್ದೆಗೆಟ್ಟ ಜಾವಗಳನ್ನು ಕಳೆಯಬೇಕಿತ್ತು .




ರೂಂ ನೊಳಕ್ಕೆ ಬಂದವನೇ ಬ್ಯಾಗ್ ಬಿಸಾಕಿ ಕುಕ್ಕುರುಬಡಿದೆ,ಮೊಬೈಲ್ ಬಡಿದು ಕೊಳ್ಳಲಾರಂಬಿಸಿತು. ನಾನು ಉತ್ತರಿಸುವುದಿಲ್ಲ ಆದರೂ ಅದು ಬಡಿದು ಕೊಳ್ಳಲೇ ಬೇಕು,ಅದಕ್ಕೆ ಅದನ್ನು ಆನ್ ಮಾಡಿಯೇ ಇಟ್ಟಿರುತ್ತೇನೆ !!ಅವರು ಪ್ರಯತ್ನಿಸುತಿದ್ದಾರೆ ನಾನು ಬೇಕಂತಲೇ ಸಿಗುತ್ತಿಲ್ಲ ಎಂಬ ಸಂತೋಷ ನನ್ನದಾಗಬೇಕು !!ಒಮ್ಮಿಂದೊಮ್ಮೆಲೆ ಎಲ್ಲವೂ ನೆನಪಾಗಿ ಅಳು ಒತ್ತರಿಸಿ ಬಂದು ಬಿಕ್ಕಿ ಬಿಕ್ಕಿ ಅತ್ತೆ ಅಳುತ್ತಲೇ ಇದ್ದೆ ಸಾಕೆನಿಸಿ, ತಲೆ ಗೋಡೆಗೆ ಒತ್ತಿ ಮುಷ್ಟಿಗಟ್ಟಿ ನೆಲಕ್ಕೆ ಒತ್ತುವಾಗ ಹೊಟ್ಟೆಯೊಳಗೆನೋ ಸಂಕಟ ವಾಕರಿಕೆ...ಸರಸರನೆ ತೆವಳಿ ಹೋಗಿ ರೂಂ ನ ಎರೆಡು ಗೋಡೆ ಸೇರಿಸಿ ಕಟ್ಟಿರುವ ತ್ರಿಕೋನ ಒಂದಡಿ ಅಡ್ಡ ಕಟ್ಟೆಗೆ ಕೈ ಕೊಟ್ಟು ಮುಖ ಬಚ್ಚಲಿಗೆ ಬಾಗಿಸಿದೆ 



   ವಿಕಾರ ಸದ್ದು ಮೈ ತುಂಬಾ ಬೆವರಿನ ವಿನಃ ಬೇರ್ಯಾವ ಬೆಳವಣಿಗೆ ಆಗದೇ ಸಮಾಧಾನ ಸಿಗದೇ ಹಾಗೆಯೇ ಹಿಂದಕ್ಕೆ ಎದ್ದು ಪಕ್ಕದ ಗೋಡೆಗೆ ಒರಗಿ ಕುಳಿತುಕೊಳ್ಳುವಾಗ ಟೇಬಲ್ ಮೇಲಿದ್ದ , ಬೇರೆಯವರ ಬದುಕಲ್ಲಿ ನಡೆದದ್ದು ತನ್ನ ಮೇಲೆ ಬರೆಸಿಕೊಳ್ಳುವ  ಡೈರಿ ದೊಪ್ಪನೆ ಬಿತ್ತು!! “ 


   “ ಎಲ್ಲವನ್ನೂ ದಾಖಲಿಸುವ ನಿನಗೆ ನೆನ್ನೆ ನಡೆದದ್ದನ್ನು ಬರೆಯುವ ತಾಕತ್ತು   ಇದೆಯಾ ?” ಎಂದು ಅಣಕಿಸಿದಂತಿತ್ತು , ಅದರ ಅಣಕು ನನ್ನ ಬೆಂಡೆದ್ದ ಮೈಗಾ?   ಬೆಂದೆದ್ದ ಮನಸ್ಸಿಗಾ? ಅರ್ಥವಾಗಲಿಲ್ಲ , ಡೈರಿಯನೆತ್ತಿ ಹಾಗೆಯೇ ಕಣ್ಣಾಡಿಸುತ್ತಾ ಹೋದೆ .......ಕೆಂಧೂಳು ನನ್ನ ಸುತ್ತಾ ಆವರಿಸಿಕೊಳ್ಳುತಿರುವಂತೆ ಭಾಸವಾಗುತ್ತಾ ...ಹೋಯಿತು .                    
                                        
   

                                                 **************


 
ಲೇ ಮಗ ಈ ಬಣ್ಣದ ಹುಚ್ಚು ಬೇಡ ಕಣ್ಲಾ , ಫಸಲು ಮಾರಿದ್ ದುಡ್ದನಾಗೆ ರವಷ್ಟು ಖರ್ಚ್ ಮಾಡಿ ಪರದೆ ಮ್ಯಾಗೆ ನೋಡಕ್ಕೆ ಚೆನ್ನ ಆಟೆಯಾ ...
ಹುಂ ಕಣ್ಲಾ ನಿಮ್ ಅಪ್ಪಯ್ಯ ಏಳ್ದಂಗೆ ವಸಿ ಕೇಳೋದು ಕಲಿ. ಬೇಸ್ದ್ವಾರ ನಿನ್ ಮಾವ ಬಂದಿದ್ದ ಸಿನಿಮ ಗಿನಮ ಅಂತ ವೋಂಟ್ರೆ ಜಗ್ದಿಶಂಗೆ ಗಿರಿಜನ್ ಕೊಡಾಕಿಲ್ಲ ಬ್ಯಾರೆ ಕಡೆ ಲಗ್ನ ಮಾಡ್ ಕೊಡ್ತೀನಿ ಅಂತ ಯೇಳಿ ಉಣ್ಣಾಕ್ಕೂ ನಿಲ್ದೆ ವಂಟ್ ವೋದ
ಅಪ್ಪಯ್ಯ ನ ಮಾತಿನ ಹಿಂದೆ ಅವ್ವ ನ ಮಾತು ಅವ್ವನ ಮಾತು ಮುಗಿಯುವುದರಲ್ಲಿ ಅಪ್ಪಯ್ಯನ ಮಾತು ನಮ್ಮ ಕೇರಿ ಕೊನೆಯಲ್ಲಿದ್ದ  ಸಾಕವ್ವನ ಮನೆಯಲ್ಲಿ ಮುಂದಿನ ಮಾರಿ ಹಬ್ಬಕ್ಕೆ ಮೀಸಲಾಗಿದ್ದ ಕೋಳಿ ಕೂಗುವರೆಗೂ ಮುಂದುವರೆದು ಇದ್ರ ಮ್ಯಾಗೆ ನಿನ್ನಿಷ್ಟ ದೊಡ್ಡವ್ರ ಮಾತು ಮೆಟ್ಟಿಗಿಂತ ಕಡೆಯಾದರೆ ಆಳಾಗ್ ವೋಯಿತೀಯ ಎಂಬ ಆಶಿರ್ವಾದೊಂದಿಗೆ ಮುಕ್ತಾಯ ವಾಯಿತು. ಅಪ್ಪಯಂಗೆ ಹಾಳು ಬೀಳುವ ಜಮೀನಿನ ಚಿಂತೆಯಾದ್ರೆ ಅವ್ವನಿಗೆ ಅಣ್ಣನ ಮಗಳು ಕೈ ತಪ್ಪಿ ಹೋಗುವ ಆತಂಕ. 
ಆದರೆ ..., ನನಗೆ ಸಿನೆಮಾ ನಿರ್ದೇಶಕನಾಗಬೇಕೆಂಬ ಮಹತ್ವಾಕಾಂಕ್ಷೆ
ಮಾತ್ರ  !!
                                                                                       

  ************* ಮುಂದುವರೆಯುವುದು 




                                                                                              ಚಿತ್ರ - ಕೃಪೆ : ಗೂಗಲ್ ಇಮೇಜಸ್  


No comments:

Post a Comment