Tuesday 21 May 2013

ಕನವರಿಕೆ... 3

ಸಂಜೆಯಾದರೂ ಅಪ್ಪಯ್ಯನ ಅರುಚಾಟ ನಿಲ್ಲಲಿಲ್ಲ ,
ಮಾವ ಹಳ್ಳಿಯ ಕಡೆ ಮುಖ ಮಾಡಲಿಲ್ಲ ,ಗಿರಿಜಳ ಕಣ್ಣೀರು ಬತ್ತಲಿಲ್ಲ ,ನಾನೂ ಜಗ್ಗಲಿಲ್ಲ ಅವರು ನಾನು ಬರದೆ ಹೋಗಲು ತಯಾರಿಲ್ಲ . ರಾತ್ರಿ ಮಲಗಿಕೊಳ್ಳಲು ಅವರಿಗೆ ರೂಂ ಬಿಟ್ಟು ಕೊಟ್ಟು  ನಾವು ತಾರಸಿಯಲ್ಲಿ ಮಲಗಿ ನಕ್ಷತ್ರದಲ್ಲಿ ನನ್ನ ಮುಖ ಮೂಡಿಸಲಾಗದೆ  ನೋಡುತಿದ್ದೆ. ನನ್ನಿಂದ ನಿಂಗೆ ತುಂಬಾ ತೊಂದ್ರೆ ಆಯಿತು ಚಿಟ್ಟೆ ಎಂದೆ ಅವನು ಉತ್ತರಿಸಲಿಲ್ಲ
ಅವನ ತಲೆಯೆಲ್ಲಾ ಅವರನ್ನು ಕಳುಹಿಸುವತ್ತಲೇ ಇದೆ ಏಕೆಂದರೆ ದಿನ ಕಳೆದರೆ ವಠಾರದಲ್ಲಿ ಹಲವರಿಗೆ ಉತ್ತರ ಕೊಡಬೇಕಿತ್ತು . ಸರಿ ರಾತ್ರಿಯಲ್ಲಿ ನುಡಿದ ಉಗಾದಿ ಗೆ ಬರ್ತೀನಿ ಅಂತ ದೇವರ ಮೇಲೆ ಆಣೆ ಮಾಡು ಹೇಗಿದ್ರೂ ನೀನು ದೇವರನ್ನ ನಂಬಲ್ಲವಲ್ಲ ಅವರು ಹೊರಟು ಬಿಡ್ತಾರೆ....,

ಬೀಸೋ ದೊಣ್ಣೆ ತಪ್ಪಿಸ್ಕೊಂಡ್ರೆ ವಠಾರದಲ್ಲಿ ಸುಮಾರು ವರ್ಷ ಆಯಿಸ್ಸು ಅಂದ . ಅವನು ಹೇಳಿದನ್ತಯೇ ಮಾಡಿದೆ ಅನುಮಾನಿಸುತ್ತಲೇ ಹೊರಟು ನಿಂತರು, ಹೊರಡುವ ಮುಂಚೆ ನನ್ನ ಬಳಿ ಇದ್ದ ಅವ್ವನ ಬಳೆಯನ್ನು  ಗುಟ್ಟಾಗಿ  ಹಿಂದಕ್ಕೆ ಪಡೆದು, ಅದು ಚಿನ್ನವಲ್ಲವೆಂದು ಅಸಲಿಯತ್ತು ತಿಳಿಸಿ ಅವ್ವ ಕಳುಹಿಸಿಕೊಟ್ಟಿದ್ದ ಒಂದಷ್ಟು ಹಣವನ್ನು ಯಾರಿಗೂ ತಿಳಿಯದಂತೆ ಗಿರಿಜಾ ನನ್ನ ಕೈ ಗೆ ತುರುಕಿದಾಗ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟೆ. ಗೇಟಿನವೆರೆಗೂ ಗಿರಿಜಾ ಹಿಂದಿರುಗಿ ನೋಡುತ್ತಾ ಹೋಗಿದ್ದು ನೀನು ಬರುವುದಿಲ್ಲ ಆದರೂ ನಾನು ಕಾಯುತ್ತೇನೆ ಎಂದಂತಿತ್ತು .
                                                     *********** 

ನಾನು ಅಪ್ಪಯ್ಯನಿಗೆ ಮಾತು ಕೊಟ್ಟು ಮೂರು ವರ್ಷ ಕಳೆಯುವುದರಲ್ಲಿದೆ ನಾನು ಹಳ್ಳಿಯ ಕಡೆ ತಿರುಗಿಯೂ ನೋಡಿಲ್ಲ, ಏಕೆಂದರೆ ನಾನಿನ್ನು ಸಿನೆಮಾ ಒಂದರ ನಿರ್ದೇಶಕನಾಗಿಲ್ಲ ! ಪತ್ರಿಕೆಯಲ್ಲಿ ಪೋಟೋ ಬರದೇ , ಟಿವಿಯಲ್ಲಿ ನಾನು ಕಾಣಿಸದೇ ,ಅವರಿವರ ಬಾಯಲ್ಲಿ ನನ್ನ ಸುದ್ದಿ ಬರದೆ ಹಳ್ಳಿಗೆ ಕಾಲಿಟ್ಟರೆ ಅಲ್ಲಿಯ ಮಂದಿ ಮಕ್ಕಡೆ ಮಲಗಿಸಿಕೊಂಡು ಮಾತಿನಲ್ಲೇ ತುಳಿಯುವ ಪರಿ ನೆನೆದು ನೆನೆದು ಸುಮ್ಮನಾಗಿದ್ದೇನೆ.  ಸಿನೆಮಾದಲ್ಲಿ ಸಾರ್ಥಕತೆ ಪಡೆಯಲು ತತ್ಕ್ಷಣದಲ್ಲಿ ಸಾದ್ಯವಾಗದೆ ಬದುಕು ಅನಿವಾರ್ಯವಾಗಿ ಭಾವನೆಗಳನ್ನು ಸ್ವಲ್ಪ ಮಟ್ಟಿಗೆ ಸಾಯಿಸಿ ಕಿರುತೆರೆಯಲ್ಲಿ ಸಹಾಯಕ ನಿರ್ದೇಶಕ ನಿಂದ 

ಸಹ ನಿರ್ದೇಶಕನಾಗಿ ಬಡ್ತಿ ಪಡೆದು ಸಂಚಿಕೆ ನಿರ್ದೇಶಕ ನಾಗುವುದರಲ್ಲಿ ಸಿನೆಮಾ ನಿರ್ದೇಶಕನಾಗಬೇಕೆಂದು ನಿರ್ಧರಿಸಿದ್ದೇನೆ . ಕೆಲವು ನಿರ್ಮಾಪಕರು ಹೊತ್ತು ಹೋಗದಿದ್ದಾಗಲೆಲ್ಲ ಕರೆದರೂ ಬೇಸರಿಸದೆ ಹೋಗಿ ನಿಷ್ಠೆಯಿಂದ ಕಥೆ ಹೇಳುವ ಕಾಯಕ ಮುಂದುವರೆಸಿದ್ದೇನೆ !! ಚಿಟ್ಟೆ ಮದುವೆಯಾಗಿ ಪಕ್ಕದ
ಬೀದಿಯಲ್ಲಿ ಪುಟ್ಟದೊಂದು ಮನೆ ಮಾಡಿಕೊಂಡು ರೂಂ ನ ಅಡ್ವಾನ್ಸ್ ನಲ್ಲಿ ಅರ್ಧ ಕೇಳದೆ ನನಗೆ ಬಳುವಳಿಯಾಗಿ ಬಿಟ್ಟುಕೊಟ್ಟಿದ್ದಾನೆ.ನಾನು ಕೆಲಸ ಮಾಡುವ ಧಾರವಾಹಿಯಲೆಲ್ಲಾ ಅವನಿಗೆ ಅವನ ಯೋಗ್ಯಾತಾನುಸಾರ ಸಣ್ಣ ಪುಟ್ಟ ಪಾತ್ರ ಕೊಡಿಸಿದ್ದೇನೆ ಸ್ನೇಹ ದರ್ಶಿನಿಯ ಸಾಂಬಾರ್ ಋಣ ಇನ್ನು ತೀರಿಲ್ಲ ! ಅಭಿನಯಿಸಿದ ಮಾರನೇ ದಿನ ಸೆಟ್ನಲ್ಲಿ  ಯಾರು ಏನೆಂದರು ಎಂದು ತಿಳಿದುಕೊಳ್ಳಲು ಮಾತ್ರ  ನನ್ನ ರೂಂಗೆ ಬರುವುದು ಅವನ ಪದ್ಧತಿ . ಈ ಮೂರು ವರ್ಷದಲ್ಲಿ ಹಲವಾರು ಬಾರಿ ಅಪ್ಪಯ್ಯ, ಅವ್ವನ ಜೊತೆ ಬಂದು ಹಳ್ಳಿಗೆ ಕರೆದೊಯ್ಯಲು ಪ್ರಯತ್ನ ಪಟ್ಟು ಸಫಲತೆ ಕಾಣದೆ ಫಸಲನ್ನೇ ನನಗಿಂತ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ . ತಿಂಗಳಿಗೊಮ್ಮೆ ಧವಸ ಧಾನ್ಯ ವನ್ನು ಕಪ್ಪದಂತೆ ತಂದೊಪ್ಪಿಸುವ ಆಚರಣೆಯಲ್ಲಿ ಕಳೆ ಕೀಳುವಷ್ಟೇ
ಧನ್ಯತೆಯನ್ನು ಪಡೆದಿದ್ದಾರೆ. ಬೆಂಗಳೂರಲ್ಲಿ ನಾನು ಬದಲಾಗದೆ ಇದ್ದರೂ ನನ್ನೂರು ಬದಲಾಗಿದೆ ! ನನ್ನ ಮನೆಗೆ ದೂರವಾಣಿ ಬಂದಿದೆ !!ಅವ್ವ ಸಮಯ ಸಿಕ್ಕಾಗಲೆಲ್ಲಾ ಪೋನ್ ಮಾಡುತ್ತಲೇ ಇರುತ್ತಾಳೆ ಗೌರಿ ಸಾವಿಂದ ಹಿಡಿದು ಅವಳ ಮಗಳು ಗಂಗೆಯ ನಿತ್ಯದ ಕರಾವಿನ ತನಕ ಹೊನಗೊನೆ ಸೊಪ್ಪು ಬಿಡಿಸಿದಂತೆ ವಿವರಿಸುತ್ತಾಳೆ ನಾನು ಗಮನವಿಟ್ಟು ಕೇಳಿಕೊಳ್ಳುತ್ತೇನೆ . ಚಲನಚಿತ್ರ ನಿರ್ದೇಶಕನಾಗುವನಿಗೆ ಚಿತ್ರಕಥೆ ಬರೆಯುವ ಕಲೆ ಕರಗತವಾಗಿರಬೇಕು ಅದಕ್ಕೆ ಅವನಿಗೆ ಯಾವುದೇ ವಸ್ತು- ವ್ಯಕ್ತಿ - ವಾತಾವರಣ ಹಾಗೂ  ವಿಷಯದ ಸಮಷ್ಠಿ ಕಲ್ಪನೆ ಮನದಲ್ಲಿ ಮೂಡಿಸಿಕೊಳ್ಳುವ ಪರಿ ತಿಳಿದಿರಬೇಕು ಹೀಗೆಂದು ಕಿರುತೆರೆಯ ಸೃಜನಶೀಲ ನಿರ್ದೇಶಕರೊಬ್ಬರು ಹೇಳಿದ ಬಳಿಕ ಅವ್ವನ ಪ್ರತಿ ಮಾತು ಕೇಳುವುದು ನನ್ನ ಪರಿಪಾಠ . ಆದರೆ ಇನ್ನು ಕಾಯುತ್ತಿರುವ ಗಿರಿಜಳ ವಿಷಯ ಬಂದಾಗಲೆಲ್ಲ ನನ್ನ ಮೊಬೈಲ್ನಲ್ಲಿ ಇದಕಿದ್ದಂತೆ ಕರೆನ್ಸಿ ಮುಗಿದು ಹೋಗುತ್ತದೆ. ಕಾರಣವಿಷ್ಟೇ ನಾನು ನನ್ನಲ್ಲೇ  ಪ್ರೀತಿಸುತಿರುವ ಕಿರುತೆರೆಯ ನಟಿಯೊಬ್ಬಳಿಗೆ ಮೋಸ ಮಾಡಲು ಮನಸ್ಸು ಒಪ್ಪದೆ !!
                                                      
ಹೌದು ಧಾರಾವಾಹಿಯಲ್ಲಿ ಕೆಲಸಕ್ಕೆ ಸೇರಿದ ಹೊಸತರಲ್ಲಿ
ನನ್ನನ್ನು ಯಾವುದೇ ನಟಿ ಪ್ರೀತಿಸುವುದು  ಬೇಡ,ನಕ್ಕು ಒಂದೆರೆಡು ಬಾರಿ ಮಾತನಾಡಿಸಿದರೂ ಸಾಕು ಅವರಲ್ಲಿ ಅನುರಕ್ತನಾಗುತ್ತಿದ್ದೆ , ಗಿರಿಜಳನ್ನು ಅವರ ಮುಂದೆ ನೀವಳಿಸಿ ಬಿಸಾಡಿ , ಅವರನ್ನು ಕರೆದುಕೊಂಡುಹೋಗಿ ಅವ್ವ ಅಪ್ಪಯ್ಯನ ಮುಂದೆ ನಿಲ್ಲಿಸಿದಂತೆ ಕನಸು ಕಾಣುತಿದೆ!! ನನ್ನ ಕನಸನ್ನು ಸಂಬಂಧಪಟ್ಟವರ ಮುಂದೆ ನೇರಾನೇರ ಹೇಳಿ ಖಾತ್ರಿ ಮಾಡಿಕೊಳ್ಳುವುದರೊಳಗೆ ಸಹಕಾರ ಕೊರತೆಯಿಂದಲೋ ನಖರಾ ನಡವಳಿಕೆಯಿಂದಲೋ ಅವರ ಪಾತ್ರ ಮುಗಿದು ನನ್ನೊಂದೊಗಿನ ಸಂಪರ್ಕವೂ ಸ್ಪೆಕ್ಟ್ರಂ ಸುಳಿಗೆ ಸಿಕ್ಕಿ ರದ್ದಾದ ಸಂಪರ್ಕವಾಗುತಿತ್ತು. ಇನ್ನು ಕೆಲವರು ಬಂದಾಗ ನನ್ನೊಂದಿಗೆ ನಕ್ಕು  - ಬೆಳೆದಾಗ ಬೇರೆಯವರೊಂದಿಗೆಗುರುತಿಸಿಕೊಳ್ಳುತಿದ್ದರು !! ಒಂದೆರಡು ಕೆಲಸ ಇದಕ್ಕಾಗಿ ಬಿಟ್ಟು
ಮತ್ತೊಂದು ಕೆಲಸ ಹುಡುಕುವ ದೀರ್ಘ ಸಮಯದಲ್ಲಿ ಜ್ಞಾನೋದಯವಾಗಿ ಕೈಲಿದ್ದ ಪ್ಯಾಡ್ ನಷ್ಟೇ ಪ್ರೀತಿಸಿ.., ಸಂಭಾಷಣೆ ಗಳೊಂದಿಗೆ ಸರಸವಾಡುತ್ತಾ.., ಪ್ರಣಯ ದೃಶ್ಯದ ಚಿತ್ರೀಕರಣದಲ್ಲಿ ನನ್ನನ್ನು ಕಲ್ಪಿಸಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡು ನೆಮ್ಮದಿಯಾಗಿದ್ದೆ .ಆದರೆ, ಇವಳೆಲ್ಲಿಂದ ಬಂದಳೋ ತುಡುಗುತನದ ಬೆಡಗಿ!!ಒಂದೆರಡು ಧಾರಾವಾಹಿಯಲ್ಲಿ ನಟಿಸಿ ಈ ಹೊಸ ಧಾರಾವಾಹಿಯಲ್ಲಿ ನಾಯಕಿಯಾದವಳು !ನಾನಿನ್ನೂ ಸಹ ನಿರ್ದೇಶಕನೇ ಸಂಚಿಕೆ ಕೂಡ ಕೈಗಿತ್ತಿಲ್ಲ . ಬಂದ ಮೊದಲ ದಿನ ಸಂಜೆ ಮೊಬೈಲ್ ನಂಬರ್ ಪಡೆದವಳು ಮನೆ ತಲುಪುವುದರಲ್ಲಿ ಮೂರ್ನಾಲ್ಕು ಮೆಸೇಜ್ ಕಳುಹಿಸಿದ್ದಳು
ಮದ್ಯರಾತ್ರಿವರೆಗೂ ನಿದ್ದೆಗೆಟ್ಟ ಮನಸ್ಸು ಕೊನೆಗೂ ಒಂದು ಗುಡ್ ನೈಟ್ ಕಳುಹಿಸಲು ಮುಂದಾಗಿ , ಸೆಂಡ್ ಒತ್ತಿ ಮೊಬೈಲ್ ಪಕ್ಕಕ್ಕಿಡುವುದರಲ್ಲಿ ಅತ್ತಲಿಂದ ಅರ್ಧ ರಾತ್ರಿಯಲ್ಲಿ ಉತ್ತರ!! ಥ್ಯಾಂಕ್ಯೂ ,,ಸೋ........ ಮಚ್  ಜೊತೆಗೆ ಗುಡ್ ನೈಟ್ ...ಮುಂದೆ ಹಾರ್ಟ್ ಚಿನ್ಹೆಗಳು !! ಇಷ್ಟು ಸಾಕಿತ್ತು, ನಾನು ಪ್ರೀತಿ ಚಿಪ್ಪಿನಲ್ಲಿ ಮಲಗಿ ನಿದ್ದೆ ಮಾಡಲು . ಮಾರನೇ ದಿನ ನಾನು ಬೇಕಂತಲೇ ಅವಳೊಡನೆ ಮಾತನಾಡಲಿಲ್ಲ ,ಕನಸಿಗೆ ಜಾರುವ ಮುನ್ನ ಪರೀಕ್ಷಿಸ ಬೇಕಿತ್ತು ಇವಳು ಎಲ್ಲರಂತೆಯೇ.. ಅಲ್ಲವೇ? ಸಂಜೆವರೆಗೂ ಅವಳು ಮಾತನಾಡಿಸಲಿಲ್ಲ! ನಾನು ನಿರ್ಧಾರಕ್ಕೆ ಬರುವ ಮುಂಚೆ 
  ಮತ್ತದೇ ಸಂಜೇ ...ಅವಳಾಗೇ ಹೊರಡುವ ಮುನ್ನ ನನ್ನ    ಬಳಿ ಬಂದು ಮೆಲ್ಲಗೆ.... 

ಬಾಯ್ ಮೆಸೇಜ್ ಮಾಡ್ತೀನಿ ಬೇಗ ರಿಪ್ಲ್ಯೇ ಮಾಡು ಅಷ್ಟೊತ್ತು ಎದ್ದಿರ್ಬೇಡ ಎಂದು ಹೇಳಿದವಳು ಮೆಸೇಜ್ ಕಳುಹಿಸದೇ ಇಡೀ ರಾತ್ರಿ ನನ್ನ ನಿದ್ದೆಗೆಡಿಸಿದ್ದಳು . ಯಾಕೋ ಶೂಟಿಂಗ್ನಲ್ಲಿ ಮನಸ್ಸೇ ಇಲ್ಲ ಅವಳು ಬಂದಿಲ್ಲ ಮೊದಲೆರೆಡು ದೃಶ್ಯದಲ್ಲಿ ಅವಳಿಲ್ಲ ಬರುವುದು ತಡ , ಗೊತ್ತಿದೆ ನನಗೆ . ಮೆಸೇಜ್ ಬಂದು ಮೊಬೈಲ್ ಸದ್ದು ಮಾಡಿತು ನಿರ್ದೇಶಕರು ಕ್ಯಾಕರಿಸಿ ಉಗಿದರು ಸಹ ನಿರ್ದೇಶಕರಿಗೆ ಉಗಿಯಲು ಸಿಗುವ ಸಣ್ಣ ಅವಕಾಶವನ್ನು ಅವರು ಬಿಟ್ಟು ಕೊಡುತಿರಲಿಲ್ಲ ನಾನು ಮೊಬೈಲ್ನೊಂದಿಗೆ ಸೆಟ್ ನಿಂದ ಹೊರಗೋಡಿ ಮೆಸೇಜ್ ನೋಡಿದೆ ಸಾರಿ ಚಿನ್ನ ಕರೆನ್ಸಿ ಮುಗಿದಿತ್ತು ನೆನ್ನೇ ಮೆಸೇಜ್
ಮಾಡಲಾಗಲಿಲ್ಲ , ಸೆಟ್ನಲ್ಲಿ ಮುಖ ಗಂಟು ಹಾಕಿಕೊಳ್ಳಬೇಡ ನೋಡಕ್ಕೆ ಆಗಲ್ಲ . ಸಾರಿ ಸಾರಿ ಸಾರಿ .. ಮಿಸ್ ಯೂ ಓದಿ ಮುಗಿಸುವಷ್ಟರಲ್ಲಿ ಗಾಡಿಯಿಂದ ಅವಳೇ ಇಳಿದು ಬಂದು ಜೋರಾಗಿ ಹಾಯ್.. ಎನ್ನುತ್ತಾ ಕೈ ಬೀಸಿ ನನ್ನ ಬಳಿ ಬಂದು ಅತ್ತಿತ್ತ ನೋಡಿ ನನ್ನ ಮುಂಗೈ ಜಿಗುಟಿ ವಾರಕ್ಕೆ ಸಾಕಾಗುವಷ್ಟು ಹಿತವಾದ ನೋವನ್ನ ಕೊಟ್ಟು ಒಳಗೋಡಿದಳು .
                                          


....ಮುಂದುವರೆಯುವುದು                                       ಚಿತ್ರ ಕೃಪೆ - ಗೂಗಲ್ ಇಮೇಜಸ್ 

                                                    


2 comments:

  1. ಕಾತುರತೆಯಿಂದ ಕಾಯುತಿಹೆ ..ಮುಂದುವರೆದ ಕನವರಿಕೆಗಾಗಿ,,ತುಂಬಾ ಚೆನ್ನಾಗಿದೆ.

    ReplyDelete
    Replies
    1. ಧನ್ಯವಾದಗಳು...ಶೀಘ್ರವೇ ನಾಲ್ಕನೇ ಕನವರಿಕೆಯನ್ನು ಪ್ರಕಟಿಸುತಿದ್ದೇನೆ.ನಿಮ್ಮೀ ಪ್ರೋತ್ಸಾಹಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು.

      Delete